ರಾಜ್ಯ ಕಾಂಗ್ರೆಸ್‌ ಸರ್ಕಾರ ದಿವಾಳಿ ಅಂಚಿಗೆ ತಲುಪಿದೆ

| Published : Nov 20 2024, 12:30 AM IST

ಸಾರಾಂಶ

ಸೋಮವಾರ ನಡೆದ ಬಿಜೆಪಿ ಸಂಘಟನಾ ಪರ್ವ ಸಮಾಲೋಚನಾ ಸಭೆಯನ್ನು ಯಡಿಯೂರಪ್ಪ ಉದ್ಘಾಟಿಸಿದರು

ಕನ್ನಡಪ್ರಭ ವಾರ್ತೆ ಶಿಕಾರಿಪುರ

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದ್ದು, ಸರ್ಕಾರ ದಿವಾಳಿ ಅಂಚಿಗೆ ತಲುಪಿದೆ. ಯಾವ ಸಂದರ್ಭದಲ್ಲಾದರೂ ಸರ್ಕಾರ ರಾಜೀನಾಮೆ ನೀಡಬಹುದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಮಂಗಳವಾರ ಪಟ್ಟಣದ ಮಂಗಳ ಭವನದ ಹಿಂಬಾಗ ನಡೆದ ಬಿಜೆಪಿ ಸಂಘಟನಾ ಪರ್ವ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಹಗರಣಗಳ ಸರಮಾಲೆಯನ್ನು ಹೊದ್ದುಕೊಂಡಿದೆ. ಅಭಿವೃದ್ಧಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡು ಸರ್ಕಾರ ದಿವಾಳಿ ಅಂಚಿಗೆ ತಲುಪಿದೆ. ಹಿಂದೆ ಹಣ, ಹೆಂಡ, ತೋಳ್ಬಲ, ಜಾತಿ ವಿಷ ಬೀಜ ಬಿತ್ತಿ ಅಧಿಕಾರ ಹಿಡಿಯುವ ಕಾಲವಿತ್ತು, ಆದರೆ ಪ್ರಸ್ತುತ ಜನ ಜಾಗೃತರಾಗಿದ್ದಾರೆ ಅವರನ್ನು ಮೋಸ ಮಾಡಲು ಸಾದ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ತಾಲೂಕಿನಲ್ಲಿ ರಾಜಕೀಯ ಆರಂಭದ ದಿನದಲ್ಲಿ ಸೈಕಲ್ ಮೂಲಕ ತೆರಳಿ ಪಕ್ಷ ಸಂಘಟಿಸಿದ್ದು, ಭವಿಷ್ಯದಲ್ಲಿ ಪಕ್ಷ ಸಂಘಟನೆಗೆ ಯುವಪೀಳಿಗೆ ಸಿದ್ಧವಾಗಬೇಕಾಗಿದೆ. ರಾಜ್ಯದಲ್ಲಿ ಪಕ್ಷ ಪುನಃ ಅಧಿಕಾರದ ಗದ್ದುಗೆ ಏರಬೇಕು. ಪ್ರಧಾನಿ ಮೋದಿಯವರನ್ನು ಜಗತ್ತು ಗೌರವದಿಂದ ನೋಡುತ್ತಿದೆ ದೇಶದ ಬಹುತೇಕ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು ಕಾಂಗ್ರೆಸ್ ಬೆರಳೆಣಿಕೆ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಪ್ರಧಾನಿ ಮೋದಿ ಬಿಜೆಪಿ ಹಾಗೂ ಕಾರ್ಯಕರ್ತರಿಗೆ ಗೌರವದ ಪ್ರತೀಕವಾಗಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಮೂಲೆಗುಂಪು ಮಾಡಿ ಬಿಜೆಪಿ ಸಂಘಟನೆಗೆ ವಿಜಯೇಂದ್ರ ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡುತ್ತಿದ್ದಾರೆ. ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ವಿಜಯೇಂದ್ರರ ಬಗ್ಗೆ ಕೆಲವರಿಗೆ ಸಹಿಸಲು ಆಗುತ್ತಿಲ್ಲ. ತಾಲೂಕಿನಲ್ಲಿ ಪಕ್ಷದ ಬಲವರ್ಧನೆಗೆ ಪ್ರತಿ ಗ್ರಾಮದಲ್ಲಿ ಯುವಕ, ಯುವತಿಯರ, ಹಿಂದುಳಿದ ವರ್ಗದ ಜನತೆ ಸಿದ್ಧರಾಗಿ ಶಿಕಾರಿಪುರವನ್ನು ರಾಜ್ಯದಲ್ಲಿಯೇ ಮಾದರಿಯಾಗಿಸುವಂತೆ ಅವರು ಕರೆ ನೀಡಿದರು.

ಸಂಸದ ರಾಘವೇಂದ್ರ ಮಾತನಾಡಿ, ಯಡಿಯೂರಪ್ಪನವರಿಗೆ ರಾಜಕೀಯ ಜನ್ಮ ನೀಡಿದ ತಾಲೂಕಿನ ಋಣ ತೀರಿಸಲು ಮುಖ್ಯಮಂತ್ರಿಯಾದ ಅವಧಿಯಲ್ಲಿ ಕಾಮಧೇನು ರೀತಿಯಲ್ಲಿ ಅನುದಾನ ನೀಡಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ರೀತಿಯಲ್ಲಿ ಅವರನ್ನು ಬೆಳೆಸಿದ ಪುಣ್ಯ ಇಲ್ಲಿನ ಮುಖಂಡರು ಕಾರ್ಯಕರ್ತರಿಗೆ ಸಲ್ಲಬೇಕು. 9 ಬಾರಿ ಶಾಸಕರಾಗಿ ರಾಜ್ಯವಾಳಲು ಶಕ್ತಿ ನೀಡಿದ್ದು ನಿಮ್ಮ ಪ್ರತಿಫಲದಿಂದ ತಾಲೂಕಿನ ಜನತೆ ಊಟ ಮಾಡುತ್ತಿದ್ದಾರೆ ಎಂದು ತಿಳಿಸಿದರು. ರಾಜ್ಯದ ರೈತರು, ಜನಸಾಮಾನ್ಯರಿಗೆ ನ್ಯಾಯ ದೊರಕಿಸುವ ಕೆಲಸವನ್ನು ಯಡಿಯೂರಪ್ಪನವರು ಮಾಡಿದ್ದಾರೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಮೋದಿ, ಅಮಿತ್ ಶಾ, ನಡ್ಡಾಜೀ ಸಹಿತ ಪ್ರತಿಯೊಬ್ಬ ಮುಖಂಡರು ಬೂತ್ ಮಟ್ಟದ ಕಾರ್ಯಕರ್ತರಾಗಿ ಪರಿಶ್ರಮದಿಂದ ಮೇಲೆರಿದ್ದಾರೆ. ಯಡಿಯೂರಪ್ಪನವರು ಹೋರಾಟ ಪಾದಯಾತ್ರೆ ಮೂಲಕ ಪಕ್ಷ ಸಂಘಟಿಸಿದ್ದಾರೆ ಅವರೆಂದೂ ಕಾರ್ಯಕರ್ತರಿಗೆ ನೋವು ಉಂಟಾಗದ ರೀತಿ ನಡೆದುಕೊಂಡಿದ್ದಾರೆ ಎಂದು ನುಡಿದರು.

ತಾಲೂಕು, ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಾದರಿಯಾಗಲು ಇಲ್ಲಿನ ಕಾರ್ಯಕರ್ತರು ಕಾರಣಕರ್ತರಾಗಿದ್ದು ನೀವು ನೀಡಿದ ಶಕ್ತಿಯಿಂದ ಕೃಷಿ, ನೀರಾವರಿ, ಶಿಕ್ಷಣ ಸೇರಿ ಸಮಸ್ತ ಕ್ಷೇತ್ರ ಅಭಿವೃದ್ಧಿಯಾಗಿದೆ. ತಾಲೂಕಿನಲ್ಲಿ ಕಳೆದ 3-4 ದಶಕದ ಹಿಂದೆ ಯಡಿಯೂರಪ್ಪನವರು ಪಕ್ಷಕ್ಕೆ ಭದ್ರ ಬುನಾದಿ ಹಾಕಿದ್ದು ಇದೀಗ ಪಕ್ಷ ಮುಂದೆ ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ಪಕ್ಷ ನಿಷ್ಠೆ, ಸಂಘಟನೆ ಬಗ್ಗೆ ಆಸಕ್ತಿ, ಸಮಯ ನೀಡುವ ಸಹಿತ ಎಲ್ಲ ವರ್ಗದ ಜನತೆಯನ್ನು ವಿಶ್ವಾಸದಿಂದ ಕೊಂಡೊಯ್ಯುವವರಿಗೆ ವಹಿಸಬೇಕಾಗಿದೆ. ಈ ದಿಸೆಯಲ್ಲಿ ಬೂತ್ ಮಟ್ಟದ ಸಮಿತಿ ವಿಸರ್ಜಿಸಿ ಹೊಸ ಕಾರ್ಯಕರ್ತರನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮೇಘರಾಜ, ತಾಲೂಕು ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷ ವಸಂತಗೌಡ, ಮುಖಂಡ ಗುರುಮೂರ್ತಿ, ಕೊಳಗಿ ರೇವಣಪ್ಪ, ರಾಮಾನಾಯ್ಕ, ಪುರಸಭಾ ಅಧ್ಯಕ್ಷೆ ಶೈಲಾ ಮಡ್ಡಿ, ಉಪಾಧ್ಯಕ್ಷೆ ರೂಪ ಪಾರಿವಾಳದ ಮತ್ತಿತರರು ಉಪಸ್ಥಿತರಿದ್ದರು.