ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ರಾಜ್ಯ ಸರ್ಕಾರದ ನುಡಿದಂತೆ ನಡೆದು ಜನರ ಬದುಕಿನ ಗ್ಯಾರಂಟಿ ಯೋಜನೆಗಳ ಜಾರಿ ಮಾಡಿ ಗೆದ್ದಿದೆ ಎಂದು ಎಪಿಎಂಸಿ ಮಾಜಿ ಸದಸ್ಯ ದಿಲೀಪ್ ಕುಮಾರ್ (ವಿಶ್ವ) ಹೇಳಿದರು.ತಾಲೂಕಿನ ತಳಗವಾದಿ ಗ್ರಾಮದಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಗಳನ್ನು ಮನೆ ಮನೆಗಳಿಗೆ ವಿತರಿಸಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ಮುಖಂಡರೊಂದಿಗೆ ಮತಯಾಚನೆ ಮಾಡಿ ಮಾತನಾಡಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಜನರಿಗೆ ಬದುಕಿಗೆ ನೆರವಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಲೋಕಸಭೆ ಚುನಾವಣೆಯಲ್ಲೂ ಗೆದ್ದ ಕೂಡಲೇ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಲಿದೆ ಎಂದರು.ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕೊಟ್ಟ ಮಾತಿನಂತೆ ಗ್ರಾಮದ ಅಭಿವೃದ್ಧಿಗೆ 40 ಲಕ್ಷ ರು. ಅನುದಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ರೋಡ್ ಅಭಿವೃದ್ಧಿ ಹಾಗೂ ಸಮುದಾಯ ಭವನ ನಿರ್ಮಾಣ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡಲಿದ್ದು, ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸುವ ಮೂಲಕ ಶಾಸಕರ ಕೈಬಲಪಡಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಟಿಎಪಿಸಿಎಂಎಸ್ ನಿರ್ದೇಶಕ ಟಿ.ಸಿ.ಚೌಡಯ್ಯ, ಮುಖಂಡರಾದ ರಾಮಣ್ಣ, ಟಿ.ಎಂ.ಪ್ರಕಾಶ್, ಸ್ವಾಮಿ, ಪರಮೇಶ್, ಮಹದೇವು, ಪಂಚಣ್ಣ ಇದ್ದರು. ಪಾಂಡವಪುರದಲ್ಲಿ ಸ್ಟಾರ್ ಚಂದ್ರು ಪ್ರಚಾರಪಾಂಡವಪುರ:ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪಾಂಡವಪುರ ತಾಲೂಕಿನ ಹಲವು ಗ್ರಾಮ ಪಂಚಾಯತಿಗಳಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯರೊಂದಿಗೆ ಮತಪ್ರಚಾರ ನಡೆಸಿದರು.
ಪ್ರಚಾರಕ್ಕೆ ತೆರಳಿದ ವೇಳೆ ಸಾರ್ವಜನಿಕರು ಸ್ಟಾರ್ ಚಂದ್ರು ಅವರಿಗೆ ಆರತಿ ಎತ್ತಿ, ಪಟಾಕಿ ಸಿಡಿಸಿ, ಹೂ ಮಾಲೆ ಹಾಕಿ ಸ್ವಾಗತಿಸಿದರು. ರೈತ ಸಂಘ ಹಾಗೂ ಸರ್ವೋದಯ ಪಕ್ಷದ ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿದರು.ಕಾಂಗ್ರೆಸ್ ಪಕ್ಷ ರೈತರ ಪಕ್ಷ. ಉಳುವವನೇ ಭೂಮಿ ಒಡೆಯ ಕಾಯ್ದೆ ಜಾರಿಗೆ ತಂದಿದ್ದು ಕಾಂಗ್ರೆಸ್. ರೈತ ಬಾಂಧವರು ಮತ ಚಲಾಯಿಸುವ ಮುನ್ನ ಕಾಂಗ್ರೆಸ್ ಸರ್ಕಾರ ನೀಡಿದ ಕೊಡುಗೆಗಳನ್ನು ಒಮ್ಮೆ ಮನನ ಮಾಡಬೇಕು ಎಂದು ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಹೇಳಿದರು.ಸ್ವಾಭಿಮಾನಕ್ಕೆ ಹೆಸರಾದ ಜಿಲ್ಲೆ ಎಂದರೆ ಅದು ಮಂಡ್ಯ. ಜಿಲ್ಲೆಯ ಸ್ವಾಭಿಮಾನದ ಅಳಿವು, ಉಳಿವು ನಿಮ್ಮ ಕೈಯಲಿದೆ. ನಿಮ್ಮ ಪ್ರೀತಿ, ಸ್ವಾಭಿಮಾನ ನಂಬಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಜನರು ನನ್ನ ಕೈ ಹಿಡಿದು ಕಾಂಗ್ರೆಸ್ ಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.ನಾರಾಯಣಪುರ, ಚಿನಕುರಳಿ, ಹೊನಗನಹಳ್ಳಿ, ರಾಗಿಮುದ್ದನಹಳ್ಳಿ, ಡಿಂಕ, ಬನ್ನಂಗಾಡಿ, ಕಟ್ಟೇರಿ, ಅರಳಕುಪ್ಪೆ, ಕೆ.ಬೆಟ್ಟಹಳ್ಳಿ, ಹರವು, ಕ್ಯಾತನಹಳ್ಳಿ, ಕೆನ್ಯಾಳುಪ್ರಚಾರ ಪಂಚಾಯತಿಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.