ಕೇಂದ್ರ ಸಚಿವ ಎಚ್.ಡಿ.ಕೆ 4500 ಬಸ್ ನೀಡಿದರೂ ಅಭಿನಂದಿಸದ ರಾಜ್ಯ ಸರ್ಕಾರ: ಕೆ.ವಿವೇಕಾನಂದ ಕಿಡಿ

| Published : Nov 16 2025, 01:30 AM IST

ಕೇಂದ್ರ ಸಚಿವ ಎಚ್.ಡಿ.ಕೆ 4500 ಬಸ್ ನೀಡಿದರೂ ಅಭಿನಂದಿಸದ ರಾಜ್ಯ ಸರ್ಕಾರ: ಕೆ.ವಿವೇಕಾನಂದ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬೇರೆ ರಾಜ್ಯಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅಲ್ಲಿನ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡುತ್ತಿರುವ ಪರಿಣಾಮ ರಾಜ್ಯದಿಂದ ಬೃಹತ್ ಕೈಗಾರಿಕೆಗಳು ಬೇರೆ ರಾಜ್ಯಗಳತ್ತ ಮುಖ ಮಾಡುತ್ತಿವೆ. ರಾಜ್ಯಕ್ಕೆ ಕೈಗಾರಿಕೆಗಳು ಬಂದರೆ ಅದರ ಕ್ರೆಡಿಟ್ ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ ಎಂಬ ಕೆಟ್ಟ ಆಲೋಚನೆಯಿಂದಾಗಿ ಸಿಎಂ, ಡಿಸಿಎಂ ಸೇರಿದಂತೆ ಸರ್ಕಾರದ ಯಾವುದೇ ಸಚಿವರು ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು 4500 ವಿದ್ಯುತ್ ಚಾಲಿತ ಬಸ್ ಗಳನ್ನು ನೀಡಿದ್ದರು. ಆದರೆ, ಸರ್ಕಾರದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಯಾರು ಕೂಡ ಅಭಿನಂದನೆ ಸಲ್ಲಿಸಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಕಿಡಿಕಾರಿದರು.

ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಜನತೆಯ ಆಶೀರ್ವಾದದಿಂದ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದಾರೆ. ಹೀಗಾಗಿ ತಮ್ಮ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಮುಂದಾಗಿ ಒಂದೇ ಬಾರಿಗೆ ರಾಜ್ಯಕ್ಕೆ 4500 ವಿದ್ಯುತ್ ಚಾಲಿತ ಬಸ್ ಗಳನ್ನು ನೀಡಿದರು. ಆದರೆ, ಸರ್ಕಾರದಿಂದ ಅಭಿನಂದನೆ ಸಲ್ಲಿಸದಿರುವುದು ಬೇಸರದ ಸಂಗತಿ ಎಂದರು.

ಕೇಂದ್ರದ ಬೃಹತ್ ಕೈಗಾರಿಕಾ ಸಚಿವರಾಗಿ ರಾಜ್ಯದಲ್ಲೂ ಹೊಸದಾಗಿ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಿದ್ದಾರೆ. ಆದರೆ, ಕೈಗಾರಿಕಾ ಕಾರ್ಖಾನೆಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ. ಹೀಗಾದರೆ ಕೈಗಾರಿಕೆಗಳನ್ನು ರಾಜ್ಯಕ್ಕೆ ತರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಬೇರೆ ರಾಜ್ಯಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅಲ್ಲಿನ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡುತ್ತಿರುವ ಪರಿಣಾಮ ರಾಜ್ಯದಿಂದ ಬೃಹತ್ ಕೈಗಾರಿಕೆಗಳು ಬೇರೆ ರಾಜ್ಯಗಳತ್ತ ಮುಖ ಮಾಡುತ್ತಿವೆ. ರಾಜ್ಯಕ್ಕೆ ಕೈಗಾರಿಕೆಗಳು ಬಂದರೆ ಅದರ ಕ್ರೆಡಿಟ್ ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ ಎಂಬ ಕೆಟ್ಟ ಆಲೋಚನೆಯಿಂದಾಗಿ ಸಿಎಂ, ಡಿಸಿಎಂ ಸೇರಿದಂತೆ ಸರ್ಕಾರದ ಯಾವುದೇ ಸಚಿವರು ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು.

ಇನ್ನು ಮುಂದಾದರೂ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರ್ಕಾರ ಕುಮಾರಸ್ವಾಮಿ ಅವರ ಜೊತೆಗೆ ಮಾತುಕತೆ ನಡೆಸಿ ಬೃಹತ್ ಕೈಗಾರಿಕೆಗಳನ್ನು ರಾಜ್ಯದಲ್ಲಿ ಸ್ಥಾಪನೆ ಮಾಡುವ ಮೂಲಕ ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕೆಂದು ಸಲಹೆ ನೀಡಿದರು.