ಸಾರಾಂಶ
ದಾಬಸ್‌ಪೇಟೆ: ಕೇಂದ್ರ ಸರ್ಕಾರದ ರೈತ ಸ್ನೇಹಿ ಯೋಜನೆಗಳನ್ನು ರಾಜ್ಯ ಸರ್ಕಾರ ಕೈಬಿಟ್ಟಿರುವುದು ಖಂಡನೀಯ ಎಂದು ಬಿಜೆಪಿ ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಕುಮಾರ್ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕೃಷಿ ಸಂಬಂಧಿತ ಯೋಜನೆಗಳಾದ ಕಿಸಾನ್ ಸಮ್ಮಾನ್, ಮಣ್ಣು ಕಾಡ್೯, ಬೆಳೆ ವಿಮೆ ಇತರ ಯೋಜನೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ತಡೆ ಹಿಡಿದಿದೆ. ಕೃಷಿ ನಮ್ಮ ಮೂಲ ಸಂಸ್ಕೃತಿ, ಹಾಲು ಮಹಾಮಂಡಲಗಳಲ್ಲಿ ರಾಜಕೀಯ ಹೆಚ್ಚಾಗಿದ್ದು, ಹಾಲಿನ ದರ ನೀರಿನ ದರಕ್ಕೆ ಸಮನಾಗುತ್ತಿದೆ. ಪಶು ಆಹಾರದ ಬೆಲೆ ಏರಿದ್ದು, ಸುಮಾರು 39 ಲಕ್ಷ ರೈತರಿಗೆ ಹಾಲಿನ ಪ್ರೋತ್ಸಾಹ ಧನ ರಾಜ್ಯ ಸರ್ಕಾರ ತಪ್ಪಿಸಿ, ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ವಾಗ್ದಾಲಿ ನಡೆಸಿದರು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆದಕೊಂಡ ರೀತಿ ನೋಡಿದರೆ ಗೊಂದಲದ (ದ್ವಂದ್ವ) ನಿಲುವಿನ ಮುಖ್ಯಮಂತ್ರಿಯಂತೆ ವರ್ತಿಸುತ್ತಿದ್ದಾರೆ. 64 ಕೋಟಿ ನೀಡಿದರೆ ನಿವೇಶನ ವಾಪಸ್ಸು ನೀಡುತ್ತೇನೆ ಎನ್ನುತ್ತಾರೆ. ನನಗೆ ಮಾಹಿತಿಯಿಲ್ಲದೆ ನನ್ನ ಪತ್ನಿ ಸೈಟ್ ವಾಪಸ್ ನೀಡಿದ್ದಾರೆ ಎಂದು ಹೇಳುತ್ತಾ, ಅಹಿಂದವನ್ನು ದಾಳವಾಗಿ ಬಳಸಿದ್ದಾರೆ ಎಂದು ಲೇವಡಿ ಮಾಡಿದರು.ದೇಶಾದ್ಯಂತ 7ರಿಂದ 8 ಕೋಟಿ ಜನರು ಬಿಜೆಪಿಗೆ ಹೊಸ ಸದಸ್ಯತ್ವದಡಿ ನೋಂದಣಿಯಾಗಿದ್ದು, ಬಿಜೆಪಿ ಮುಖಂಡರು, ಕಾರ್ಯಕರ್ತರು ಹೆಚ್ಚು ಜನರ ಸದಸ್ಯತ್ವ ಮಾಡಿಸಲು ಶ್ರಮಿಸಬೇಕು. ದೇಶಾದ್ಯಂತೆ ಬಿಜೆಪಿಯನ್ನು ಮತ್ತಷ್ಟು ಬಲಗೊಳಿಸಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು ಗ್ರಾಮಾಂತರ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ಬೃಂಗೇಶ್ ಮಾತನಾಡಿ, ಹಾಲು ಉತ್ಪಾದಕರಿಗೆ ರಾಜ್ಯ ಸರ್ಕಾರ ೫ ರು. ಪ್ರೋತ್ಸಾಹ ಧನ ನೀಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿ, ಇದೀಗ ಹಾಲಿನ ದರ ಇಳಿಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಹಾಲು ಉತ್ಪಾದಕರನ್ನು ಸೇರಿಸಿ ಬಮೂಲ್ ಮುಖ್ಯ ಕಚೇರಿ ಮುಂದೆ ಪ್ರತಿಭಟನೆ ಕೈಗೊಳ್ಳುತ್ತೇವೆ. ಬಮೂಲ್ ನಿರ್ದೇಶಕರ ಚುನಾವಣೆ ನಡೆಸದೆ, ಸರ್ಕಾರ ಅಧಿಕಾರಿಗಳ ಜೊತೆ ಆಡಳಿತ ನಡೆಸಿ ಚುನಾಯಿತ ಪ್ರತಿನಿಧಿಗಳ ಅಧಿಕಾರ ಮೊಟುಕುಗೊಳಿಸಿರುವುದು ಖಂಡನೀಯ ಎಂದರು.ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ಮಾತನಾಡಿ, ರಾಜ್ಯದಲ್ಲಿ ರೈತರ ಸಮಸ್ಯೆಗಳ ಸರಮಾಲೆಯೇ ಇದೆ, ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರ 10 ಸಾವಿರ ಎಕರೆ ವಶಪಡಿಸಿಕೊಂಡು 500 ಎಕರೆ ಕೈಗಾರಿಕೆಗೆ ಬಳಸಿ, ಉಳಿದ 9.5 ಸಾವಿರ ಎಕರೆ ಜಮೀನು ರಾಜಕೀಯದವರಿಗೆ ನೀಡುವುದು ರೈತರ ಮರಣ ಶಾಸನದಂತೆ ಮಾಡಿದ್ದಾರೆ. ಶಾಶ್ವತ ನೀರಾವರಿ ಯೋಜನೆ ಕನಸು ಕನಸಾಗಿಯೇ ಉಳಿದಿದೆ ಎಂದರು.
ಈ ವೇಳೆ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ರಾಮಮೂರ್ತಿ, ರವಿ, ಕಾರ್ಯದರ್ಶಿ ಮಂಗಳಮ್ಮ, ದೊಡ್ಡಬಳ್ಳಾಪುರ ನಗರ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ, ತಾಲೂಕು ಘಟಕದ ಅಧ್ಯಕ್ಷ ಅರುಣ್ ಕುಮಾರ್, ಉಪಾಧ್ಯಕ್ಷ ರುದ್ರಣ್ಣ, ಕಾರ್ಯದರ್ಶಿ ಬೈರನಾಯ್ಕನಹಳ್ಳಿ ನಟೇಶ್, ರೈತ ಮೋರ್ಚಾದ ಪದಾಧಿಕಾರಿಗಳಾದ ಆನಂದ್, ಗಂಗಾಧರ್, ಜಗನ್ನಾಥ್, ಪ್ರಮೀಳಾ, ಸ್ಥಳೀಯರಾದ ಕೆಂಪಣ್ಣ, ಶಿವರಾಜು, ಇತರರಿದ್ದರು.ಫೋಟೋ 7 :
ದಾಬಸ್‌ಪೇಟೆಯಲ್ಲಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.