ಸಾರಾಂಶ
ಕನ್ನಡಪ್ರಭ ವಾರ್ತೆ ಕೊಟ್ಟೂರು
ರಾಜ್ಯದಲ್ಲಿ ಬರಗಾಲದ ಭೀಕರ ಪರಿಸ್ಥಿತಿ ಇದ್ದರೂ ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ 2- 3 ಬಾರಿ ದ್ವಂದ್ವ ವರದಿ ಕಳುಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಇದುವರೆಗೂ ಬರಗಾಲ ಪರಿಹಾರ ಅನುದಾನವನ್ನು ಬಿಡುಗಡೆ ಮಾಡಲು ತಡ ಮಾಡುತ್ತಿದೆ ಎಂದು ಶಾಸಕ ಕೆ. ನೇಮರಾಜ ನಾಯ್ಕ ತಿಳಿಸಿದರು.ಭಾನುವಾರ ಪಟ್ಟಣದ ಪೊಲೀಸ್ ಠಾಣೆಯ ಬಳಿ ಲೋಕೋಪಯೋಗಿ ಇಲಾಖೆ ನಿರ್ಮಿಸಲು ಉದ್ದೇಶಿಸಿರುವ 45 ಮೀ. ಎತ್ತರದ ರಾಷ್ಟ್ರೀಯ ಧ್ವಜಸ್ತಂಭ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಸರ್ಕಾರ ಈ ಮೊದಲು ಬರಗಾಲದ ಪರಿಸ್ಥಿತಿಯ ಸಮಗ್ರ ವಿವರವನ್ನು ಅಧಿಕಾರಿಗಳಿಂದ ಪಡೆದುಕೊಳ್ಳದೇ ಬೇಕಾಬಿಟ್ಟಿಯಾಗಿ ₹4 ಸಾವಿರ ಕೋಟಿ ಪರಿಹಾರಧನ ಮಂಜೂರು ಮಾಡುವಂತೆ ಕೇಂದ್ರವನ್ನು ಕೇಳಿತ್ತು. ನಂತರ ₹17 ಸಾವಿರ ಕೋಟಿ ಪರಿಹಾರವಾಗಿ ನೀಡಬೇಕೆಂದು ಕೇಂದ್ರಕ್ಕೆ ಕೇಳಿದೆ. ಅವರಿಗೆ ಹಲವು ಬಗೆಯ ಅನುಮಾನ ಗೊಂದಲ ಉಂಟುಮಾಡಲು ಕಾರಣವಾಗಿದೆ. ಅಲ್ಲದೆ ಮುಖ್ಯ ಮಂತ್ರಿ ಸೇರಿದಂತೆ ರಾಜ್ಯದ ಸಚಿವರು ಪ್ರಧಾನ ಮಂತ್ರಿ ಮತ್ತಿತರ ಕೇಂದ್ರ ಸಚಿವರ ಜತೆಗೆ ಸಮನ್ವಯ ಕಾಪಾಡಿಕೊಳ್ಳದ ಕಾರಣಕ್ಕಾಗಿ ಇದುವರೆಗೂ ಬರಗಾಲ ಪರಿಹಾರ ಹಣ ಮಂಜೂರು ಆಗಿಲ್ಲ ಎಂದರು.ಕೊಟ್ಟೂರು ಮತ್ತು ಹಗರಿಬೊಮ್ಮನಹಳ್ಳಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಅತಿ ಎತ್ತರದ ರಾಷ್ಟ್ರೀಯ ಧ್ವಜ ಸ್ತಂಭ ನಿರ್ಮಿಸಬೇಕೆಂಬ ಸದಾಶಯ ಈಡೇರಿಸಬೇಕೆಂಬ ಉದ್ದೇಶದಿಂದ ಡಿಎಂಎಫ್ ಅನುದಾನದಡಿ ಇದನ್ನು ನಿರ್ಮಿಸಲು ಲೋಕೋಪಯೋಗಿ ಇಲಾಖೆಗೆ ಅನುದಾನ ನೀಡಲಾಗಿದೆ. ಕೊಟ್ಟೂರಿನಲ್ಲಿ ₹38.73 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ ಎಂದರು.
ಕೊಟ್ಟೂರು ಮತ್ತು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಎಲ್ಲ ಇಲಾಖೆಗಳಂದ ಕ್ರಿಯಾಯೋಜನೆ ರೂಪಿಸಿದ್ದು, ಸರ್ಕಾರ ಇದುವರೆಗೂ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಹೀಗಾಗಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ತಡೆ ಉಂಟಾಗಿದೆ ಎಂದರು.ತಾಲೂಕು ಮತ್ತಿತರ ಕಚೇರಿಗಳಲ್ಲಿ ಅಧಿಕಾರಿಗಳು ಎಗ್ಗಿಲ್ಲದೆ ಸಾರ್ವಜನಿಕರಿಂದ ಲಂಚ ಪಡೆಯುತ್ತಿದ್ದಾರೆಂಬ ದೂರು ಕೇಳಿ ಬರುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಸೂಚಿಸುವೆ ಎಂದರು.
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದರೆ ಜೆಡಿಎಸ್ ನ 19 ಶಾಸಕರು ಅವರಿಗೆ ಬೆಂಬಲ ನೀಡುವ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಬದ್ಧವಿದ್ದು, ವರಿಷ್ಠರು ಯಾವುದೇ ತೀರ್ಮಾನ ಕೈಗೊಂಡರೂ ಜೆಡಿಎಸ್‌ನ ಎಲ್ಲ ಶಾಸಕರು ಅದನ್ನು ಬೆಂಬಲಿಸುತ್ತೇವೆ. ಇದರಲ್ಲಿ ವಿರೋಧದ ಮಾತೇ ಇಲ್ಲ ಎಂದರು.ಲೋಕೋಪಯೋಗಿ ಇಲಾಖೆ ಉಪವಿಭಾಗದ ಎಇಇ ವೆಂಕಟರಮಣ, ಜೆ.ಇ. ನಾಗೇಶ್, ಜೆಡಿಎಸ್ ಮುಖಂಡರಾದ ಕೋಗಳಿ ಸಿದ್ದಲಿಂಗನಗೌಡ, ಎಚ್. ಗುರುಬಸವರಾಜ, ಮೂಗಣ್ಣ, ಮಂಜುನಾಥ, ಅಂಬಳಿ ಸಿದ್ದಲಿಂಗಪ್ಪ, ಬಾದಾಮಿ ಮೃತ್ಯುಂಜಯ, ಶೆಟ್ಟಿ ರಾಜಶೇಖರ, ವಿಕ್ರಂ, ಕರಿಬಸವನಗೌಡ, ಮತ್ತಿತರರು ಶಾಸಕರೊಂದಿಗೆ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))