ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲ

| Published : Dec 17 2023, 01:45 AM IST

ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ದಲಿತರು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದವರಿಗೆ ಸರಿಯಾದ ಶಿಕ್ಷೆಯಾಗುತ್ತಿಲ್ಲ. ಇದೊಂದು ದರಿದ್ರ ಸರ್ಕಾರವೆಂದು ಚಿತ್ರದುರ್ಗದಲ್ಲಿ ಜಿಲ್ಲಾ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಆಯೋಸಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ದೂರಿದರು.

ವಿಪ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆರೋಪ । ಬಿಜೆಪಿ ಜಿಲ್ಲಾ ಘಟಕದಿಂದ ರಾಜ್ಯ ಸರ್ಕಾರದಿಂದ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ದಲಿತರು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದವರಿಗೆ ಸರಿಯಾದ ಶಿಕ್ಷೆಯಾಗುತ್ತಿಲ್ಲ. ಇದೊಂದು ದರಿದ್ರ ಸರ್ಕಾರವೆಂದು ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ದೂರಿದರು.

ರಾಜ್ಯ ಸರ್ಕಾರದ ವಿರುದ್ಧ ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಶನಿವಾರ ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನತೆಯ ಕಷ್ಟಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ರೈತರ ನೋವಿಗೆ ಕಿವಿಗೊಡುತ್ತಿಲ್ಲ. ಮುಖ್ಯಮಂತ್ರಿಗಳಾದವರಿಗೆ ಬಡವರ ಕಷ್ಟ ಗೊತ್ತಿಲ್ಲ. ಅವರ ಸಮಸ್ಯೆಗಳಿಗೆ ಪರಿಹಾರ ಕೈಗೊಂಡಿಲ್ಲ. ದೇಶದಲ್ಲಿ ಕಾಂಗ್ರೆಸ್ ನಶಿಸಿ ಹೋಗುತ್ತಿದ್ದು, ಕರ್ನಾಟಕ ಸರ್ಕಾರವನ್ನು ಎಟಿಎಂ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಲ್ಲಿಯ ಹಣವನ್ನು ಬೇರೆ ರಾಜ್ಯಗಳ ಉಪಯೋಗಕ್ಕೆ ವಿನಿಯೋಗ ಮಾಡಲಾಗುತ್ತಿದೆ ಎಂದರು. ಮನೆಯಲ್ಲಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿದ ಹೇಯ ಕೃತ್ಯ ನಡೆದಿದ್ದು, ಕಾನೂನು ಸುವ್ಯವಸ್ಥೆ ಹಿಡಿತದಲ್ಲಿಲ್ಲ ಎಂಬದಕ್ಕೆ ಇದೇ ಸಾಕ್ಷಿ. ಕಾನೂನು ಸತ್ತು ಹೋಗಿದೆ. ಹೆಣ್ಣು ಭ್ರೂಣ ಹತ್ಯೆಯು ಸಣ್ಣ ಪ್ರಕರಣವೆಂಬಂತೆ ದಾಖಲು ಮಾಡಿ ಅವರಿಗೆ ಜಾಮೀನು ಸಿಗುವಂತೆ ಮಾಡಲಾಗಿದೆ. ರೈತರಿಗೆ ಸರಿಯಾದ ರೀತಿಯಲ್ಲಿ ವಿದ್ಯುತ್ ನೀಡಲಾಗುತ್ತಿಲ್ಲ. ಸಿಎಂ ಸುಳ್ಳು ಹೇಳುವುದರ ಮೂಲಕ ಮತದಾರರನ್ನು ಮೋಸ ಮಾಡುತ್ತಿದ್ದಾರೆ. ದಲಿತರ ಉದ್ಧಾರಕ್ಕಾಗಿ ಇಟ್ಟಿದ್ದ ಹಣವನ್ನು ಸರ್ಕಾರ ಬೇರೆ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳುತ್ತಿದೆ ಎಂದರು.

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಸರ್ಕಾರ ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆಗೆ ಕೈ ತೋರಿಸುತ್ತಿರುವುದು ಸರಿಯಾದ ಕ್ರಮವಲ್ಲ. ರಾಜ್ಯ ಸರ್ಕಾರ ತನ್ನ ಪಾಲಿನ ಕೆಲಸವನ್ನು ಮಾಡಬೇಕು. ತದನಂತರ ಕೇಂದ್ರವನ್ನು ಕಾಯಬೇಕು. ಆದರೆ ಇಲ್ಲಿ ಎಲ್ಲದಕ್ಕಿಂತ ಮುಂಚೆಯೇ ಕೇಂದ್ರ ನಮಗೆ ಏನು ಸಹಾಯ ಮಾಡಿಲ್ಲ ಎಂದು ದೂರುವುದು ಈ ಸರ್ಕಾರದ ಪದ್ಧತಿಯಾಗಿದೆ ಎಂದು ವ್ಯಂಗ್ಯವಾಡಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಲವಾರು ರೀತಿಯ ದೌರ್ಜನ್ಯಗಳು, ಕೊಲೆಗಳಾಗಿವೆ. ಇದರ ಬಗ್ಗೆ ಗೃಹ ಸಚಿವರನ್ನು ಪ್ರಶ್ನೆ ಮಾಡಿದರೆ ಉಡಾಫೆ ಉತ್ತರ ನೀಡುತ್ತಾರೆ. ಬೆಳಗಾವಿ ಘಟನೆ ಎಲ್ಲರನ್ನೂ ತಲೆ ತಗ್ಗಿಸುವಂತೆ ಮಾಡಿದೆ ಎಂದರು.

ಜಿಲ್ಲಾಧ್ಯಕ್ಷ ಎ.ಮುರಳಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುರೇಶ್ ಸಿದ್ದಾಪುರ, ಸಂಪತ್ ಕುಮಾರ್, ನರೇಂದ್ರ, ನವೀನ್ ಚಾಲುಕ್ಯ, ಮಾಧುರಿ ಗೀರೀಶ್, ಕೆ.ಮಲ್ಲಿಕಾರ್ಜನ್, ವೆಂಕಟೇಶ್ ಯಾದವ್, ನಾಗರಾಜ ಬೇದ್ರೆ, ದಗ್ಗೆ ಶಿವಪ್ರಕಾಶ್, ತಿಪ್ಪೇಸ್ವಾಮಿ, ಪಾಂಡುರಂ ಗಪ್ಪ, ಭಾರ್ಗವಿ ದ್ರಾವಿಡ್, ಶಾಂತಮ್ಮ, ರಜನಿ, ಕಾಂಚನ, ಬಸಮ್ಮ, ನಾಗರಾಜ್ ಕಿರಣ್, ಯಶವಂತ, ಪರಶುರಾಂ, ರಾಮದಾಸ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.