ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಗ್ಯಾರಂಟಿ ಆಧಾರದ ಮೇಲೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇಂದು ರಾಜ್ಯದ ಜನರ ಹಿತ ಮರೆತು ಹಗರಣಗಳಲ್ಲಿ ಮುಳುಗಿ ಹೋಗಿದೆ ಎಂದು ಬಿಜೆಪಿ ಮುಖಂಡ, ಜಿಪಂ ಮಾಜಿ ಸದಸ್ಯ ಎಂ.ಆರ್.ಮಹೇಶ್ ಟೀಕಿಸಿದರು.ಗುರುವಾರ ರಾಜ್ಯ ಸರ್ಕಾರದ ನೀತಿ ಖಂಡಿಸಿ ತಾಲೂಕು ಬಿಜೆಪಿಯಿಂದ ಪ್ರತಿಭಟನೆ ಹಾಗೂ ತಾಲೂಕು ಕಚೇರಿ, ಕೃಷಿ ಇಲಾಖೆ ಕಚೇರಿ ಮುತ್ತಿಗೆ ವೇಳೆ ಮಾತನಾಡಿ, ಕಾಂಗ್ರೆಸ್ ಹಿಂದುಳಿದವರ ಪರ ಎಂದು ಹೇಳುತ್ತಾ ಇಂದು ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ವಿಷಯದಲ್ಲಿ ₹187 ಕೋಟಿ ಅಲ್ಲ ₹92 ಕೋಟಿ ಹಗರಣವಾಗಿದೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳುತ್ತಾರೆ. ಅಹಿಂದ ಪ್ರತಿನಿಧಿ ಎಂದು ಗುರುತಿಸಿಕೊಳ್ಳುವ ಸಿಎಂ ಸಿದ್ದರಾಮಯ್ಯ ಸರ್ಕಾರ ಪರಿಶಿಷ್ಟ ಜಾತಿ ವರ್ಗ, ಹಿಂದುಳಿದ ವರ್ಗದವರಿಗೆ ಸೇರಿದ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಗ್ಯಾರಂಟಿ ಆಸೆ ತೋರಿಸಿ ಅಧಿಕಾರಕ್ಕೆ ಬಂದ ಈ ಸರ್ಕಾರ ಕೆಲವು ಗ್ಯಾರಂಟಿ ಬಿಟ್ಟರೆ ಯಾವುದೇ ಸೌಲಭ್ಯ ಜನರಿಗೆ ತಲುಪಿಸುವಲ್ಲಿ ವಿಫಲವಾಗಿದೆ. ಗ್ಯಾರಂಟಿಗೆ ಹಣ ಹೊಂದಿಸುವ ನೆಪದಲ್ಲಿ ಇಡೀ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಮುಂದಾಗಿಲ್ಲ. ಇದೀಗ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿಗೆ ಬಿದ್ದಿದ್ದಾರೆ ಎಂದರು.ಜಿಲ್ಲೆ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ತಾಲೂಕಿನಲ್ಲಿ ನಡೆಯುವ ಕೆಡಿಪಿ ಸಭೆಗಳಿಗೆ ಹಾಜರಾಗಿಲ್ಲ, ಒಂದು ಬಾರಿಯಾದರು ತಾಲೂಕಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ಅವಳಿ ತಾಲೂಕುಗಳ ಜನರ, ರೈತರ ಬಡವರ ಸಮಸ್ಯೆ ಕೇಳಿ ಪರಿಹಾರ ಒದಗಿಸುವ ಕೆಲಸ ಮಾಡಿಲ್ಲ. ತಮ್ಮ ಧರ್ಮಪತ್ನಿ ಅವರನ್ನು ಸಂಸದರನ್ನಾಗಿ ಮಾಡುವುದೇ ಗುರಿಯಾಗಿತ್ತು, ಜಿಲ್ಲಾ ಉಸ್ತುವಾರಿ ಸಚಿವರು ಜನರ ಸಂಕಷ್ಟಗಳಿಗೆ ಜನರ ನಿರೀಕ್ಷೆಯಂತೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಮಳೆ ಆರಂಭವಾಗಿ ತಿಂಗಳುಗಳೇ ಮೀರುತ್ತಾ ಬರುತ್ತಿದ್ದರೂ ಕೂಡ ಅವಳಿ ತಾಲೂಕಿನ ರೈತರಿಗೆ ತಾಡಪಾಲ್, ಜೆಟ್ ಪೈಪ್, ಔಷಧಿ ಸಿಂಪಡಿಸುವ ಕ್ಯಾನ್ ಇತರೆ ಕೃಷಿ ಉಪಕರಣ ನೀಡುವ ಕೆಲಸ ಕೃಷಿ ಇಲಾಖೆ ಮಾಡಿಲ್ಲ, ರೈತರಿಗೆ ಬೀಜ ಗೊಬ್ಬರ ಒದಗಿಸುವ ನಿಟ್ಟಿನಲ್ಲಿ ಇಲಾಖೆ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿಯವರ ಹಿಂದೂ ವಿರೋಧಿ ಹೇಳಿಕೆಗಳನ್ನು ಬಿಜೆಪಿ ಮಾತ್ರವಲ್ಲ ಇಡೀ ದೇಶದ ಜನರು ಖಂಡಿಸುತ್ತಾರೆ ಎಂದು ಹೇಳಿದರು.ಜಿಪಂ ಮಾಜಿ ಸದಸ್ಯ ಕೆ.ವಿ.ಚನ್ನಪ್ಪ ಮಾತನಾಡಿ, ಈ ಬಾರಿ ಅವಳಿ ತಾಲೂಕುಗಳಲ್ಲಿ ಅತಿವೃಷ್ಠಿಯಿಂದ ಮೆಕ್ಕೇಜೋಳ ಸೇರಿ ಅನೇಕ ಬೆಳೆ ಹಾಳಾಗುತ್ತಿವೆ. ಈ ಬಗ್ಗೆ ಯಾವುದೇ ಕ್ರಮ ಇಲ್ಲದೇ ಕಾಂಗ್ರೆಸ್ ಜನವಿರೋಧಿ ಸರ್ಕಾರವಾಗಿದೆ ಎಂದು ಹೇಳಿದರು.
ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಬಂದು ಪ್ರತಿಭಟಿಸಿದರು. ನಂತರ ತಾಲೂಕು ಕಚೇರಿ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಠಾಣೆಗೆ ಕರೆದೊಯ್ದು ನಂತರ ಬಿಡುಗಡೆ ಮಾಡಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಯಕ್ಕನಹಳ್ಳಿ ಜಗದೀಶ್, ನೆಲಹೊನ್ನೆದೇವರಾಜ್, ಬಿಂಬ ಮಂಜು, ಚೀಲೂರು ಲೋಕೇಶ್,ನ್ಯಾಮತಿ ರವಿಕುಮಾರ್, ಅಜೇಯ್ ರೆಡ್ಡಿ,ದೊಡ್ಡೇರಿ ಸೋಮಣ್ಣ, ಸೇರಿದಂತೆ ಅನೇಕರು ಇದ್ದರು.