ಸಾರಾಂಶ
ಕೇಂದ್ರ ಸರ್ಕಾರ 2026ಕ್ಕೆ ಜಾತಿ ಗಣತಿ ಹಾಗೂ ಜನಗಣತಿ ಮಾಡಬೇಕು ನಿರ್ಧಾರ ಮಾಡಿದೆ. ಈಗ ರಾಜ್ಯ ಗಣತಿ ಮಾಡುತ್ತಿರುವುದು ಸರಿಯಲ್ಲ. ಈ ಹಿಂದೆಯೂ ಸಮೀಕ್ಷೆ ಮಾಡಲು ನೂರಾರು ಕೋಟಿ ರು. ವ್ಯರ್ಥ ಮಾಡಲಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದ್ದಾರೆ.
ಕುಷ್ಟಗಿ: ರಾಜ್ಯ ಸರ್ಕಾರ ರಾಜ್ಯದ ಅಭಿವೃದ್ಧಿ ಮರೆತು ಭ್ರಷ್ಟಾಚಾರದಲ್ಲಿ ನಿರತವಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಆರೋಪಿಸಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರಸ್ತೆ ರಿಪೇರಿ ಸೇರಿದಂತೆ ಅನೇಕ ಕಾಮಗಾರಿಗಳು ಬಾಕಿ ಉಳಿದುಕೊಂಡಿದ್ದು, ಒಂದು ರುಪಾಯಿಯು ಅಭಿವೃದ್ಧಿಗಾಗಿ ಕೊಡುತ್ತಿಲ್ಲ. ಬೆಂಗಳೂರು ಭಾಗಕ್ಕೆ ಮಾತ್ರ ಅನುದಾನ ನೀಡುತ್ತಿದೆ. ವಿಪರೀತ ಮಳೆಯಿಂದಾಗಿ ರೈತರ ಬೆಳೆಗಳು ಹಾಳಾಗಿರುವ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾದರೂ ಸಹಿತ ಇದುವರೆಗೂ ಪರಿಹಾರ ಬಿಡುಗಡೆ ಮಾಡಿಲ್ಲ ಎಂದರು.ಈಗ ಹೊಸದಾಗಿ ಮತ್ತೆ ಜಾತಿಗಣತಿಯ ಸಮೀಕ್ಷೆ ಆರಂಭ ಮಾಡಿದ್ದು, ಇದರಲ್ಲಿ ಸುಮಾರು 47 ಜಾತಿಗಳನ್ನು ಹುಟ್ಟುಹಾಕುವ ಮೂಲಕ ಸಮಾಜದಲ್ಲಿ ಒಡಕನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರ 2026ಕ್ಕೆ ಜಾತಿ ಗಣತಿ ಹಾಗೂ ಜನಗಣತಿ ಮಾಡಬೇಕು ನಿರ್ಧಾರ ಮಾಡಿದ್ದರೂ ಅವರು ಈಗ ಗಣತಿ ಮಾಡುತ್ತಿರುವುದು ಸರಿಯಲ್ಲ ಎಂದ ಅವರು, ಸಚಿವ ಸಂಪುಟದಲ್ಲಿ ಕೆಲವರು ವಿರೋಧ ಮಾಡಿದರೂ ಸಮೀಕ್ಷೆ ಆರಂಭಿಸಲಾಗಿದ್ದು, ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂದು ಕಾಯ್ದು ನೋಡಬೇಕಿದೆ. ಈ ಹಿಂದೆಯೂ ಸಮೀಕ್ಷೆ ಮಾಡಲು ನೂರಾರು ಕೋಟಿ ರು. ವ್ಯರ್ಥ ಮಾಡಲಾಗಿದೆ ಎಂದರು.ಧರ್ಮ ಕಾಲಂನಲ್ಲಿ ಹಿಂದೂ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಗಣತಿ ಪ್ರಾರಂಭ ಮಾಡಿದ್ದು, ಧರ್ಮ ಕಾಲಂನಲ್ಲಿ ಹಿಂದೂ ಎಂದು ಬರೆಸಬೇಕು. ಜಾತಿ ಉಪಜಾತಿ ಕಾಲಂನಲ್ಲಿ ತಮ್ಮ ತಮ್ಮ ಜಾತಿಗಳನ್ನು ಹೆಸರು ಬರೆಸಬೇಕು ಎಂದರು.
ಮೋದಿ ಗಿಫ್ಟ್: ಕೇಂದ್ರ ಸರ್ಕಾರ ಮಧ್ಯಮ ಹಾಗೂ ಬಡವರ್ಗದ ಜನರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಜಿಎಸ್‌ಟಿ ಕಡಿಮೆ ಮಾಡುವ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಜನರಿಗೆ ನವರಾತ್ರಿ ಕೊಡುಗೆ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.ಕುಷ್ಟಗಿ ಬಿಜೆಪಿ ಮಂಡಲದ ಅಧ್ಯಕ್ಷ ಮಹಾಂತೇಶ ಬಾದಾಮಿ, ಜಿಪಂ ಮಾಜಿ ಸದಸ್ಯ ಕೆ. ಮಹೇಶ, ಬಸವರಾಜ ಹಳ್ಳೂರು, ಮಹಾಂತೇಶ ಕಲಬಾವಿ ಇದ್ದರು.