ಪ್ರತಿ ದಿನ 15 ಸಾವಿರ ಕ್ಯುಸೆಕ್ ಗಿಂತ ಹೆಚ್ಚಿನ ನೀರನ್ನು ಕೆಆರ್ ಎಸ್ ಜಲಾಶಯದಿಂದ ಕಾವೇರಿ ನದಿ ಮೂಲಕ ತಮಿಳುನಾಡಿಗೆ ಹಿಸಲಾಗುತ್ತಿದೆ. ಆದರೆ, ಸರ್ಕಾರದ ಜನ ಪ್ರತಿನಿಧಿಗಳು ಸುಳ್ಳು ಹೇಳುವ ಜೊತೆಗೆ ಸುಳ್ಳು ಅಂಕಿ-ಅಂಶಗಳ ಹೇಳಿ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಸುಳ್ಳು ಅಂಕಿ-ಅಂಶಗಳ ನೀಡಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ಪಟ್ಟಣದ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ತಾಲೂಕಿನ ಕೆಆರ್‌ಎಸ್‌ನ ಕಾವೇರಿ ನೀರಾವರಿ ಇಲಾಖೆ ಕಚೇರಿ ಎದುರು ಸಮಿತಿ ಹಿರಿಯ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ ಹಾಗೂ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ ನೇತೃತ್ವದಲ್ಲಿ ಧರಣಿ ನಡೆಸಿ ಸರ್ಕಾರ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಪ್ರತಿ ದಿನ 15 ಸಾವಿರ ಕ್ಯುಸೆಕ್ ಗಿಂತ ಹೆಚ್ಚಿನ ನೀರನ್ನು ಕೆಆರ್ ಎಸ್ ಜಲಾಶಯದಿಂದ ಕಾವೇರಿ ನದಿ ಮೂಲಕ ತಮಿಳುನಾಡಿಗೆ ಹಿಸಲಾಗುತ್ತಿದೆ. ಆದರೆ, ಸರ್ಕಾರದ ಜನ ಪ್ರತಿನಿಧಿಗಳು ಸುಳ್ಳು ಹೇಳುವ ಜೊತೆಗೆ ಸುಳ್ಳು ಅಂಕಿ-ಅಂಶಗಳ ಹೇಳಿ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ನಂಜುಂಡೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆ ಉಸ್ತುವಾರಿ ಸಚಿವರು, ಎಲ್ಲಾ ಶಾಸಕರು ಈ ಬಗ್ಗೆ ನಮಗೇನು ತಿಳಿದಿಲ್ಲ ಎಂದು ಅಧಿಕಾರದ ಆಸೆಗೆ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಸ್ಥಳೀಯ ರೈತರ ಬದುಕನ್ನು ಬೀದಿಗೆ ತಳ್ಳಿ, ನಾಡಿನ ಜನರಿಗೆ ಮೋಸ ಮಾಡುತ್ತಿರುವ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಶಾಸಕರು ಅಧಿಕಾರಿಗಳಿಗೆ ನಾಚಿಕೆಯಾಗಬೇಕು ಕೂಡಲೆ ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ನಿಲ್ಲಿಸುವಂತೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಸಮಿತಿ ಅಧ್ಯಕ್ಷ ಬಿ.ಸಿ ಕೃಷ್ಣೇಗೌಡ ಮಾತನಾಡಿ, ಕಳೆದ ಒಂದು ತಿಂಗಳಿಂದಲೂ ನಿರಂತರವಾಗಿ ಕಾವೇರಿ ನದಿ ಮೂಲಕ ಸರ್ಕಾರ ತಮಿಳುನಾಡಿಗೆ ನೀರು ಹರಿ ಜಿಲ್ಲೆಯ ರೈತರ ಜೀವನದ ಜೊತೆ ಚಲ್ಲಾಟವಾಡುತ್ತಿದೆ. ಸಚಿವರು ತಮ್ಮ ಸ್ಥಾನ ಭದ್ರ ಪಡಿಸಿಕೊಂಡು ರೈತರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಕೂಡಲೇ ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ತಡೆ ಮಾಡಿ ಇಲ್ಲಿನ ರೈತರಿಗೆ ನೀಡಿ ಅವರ ಬದುಕಿಗೆ ಆಸರೆಯಾಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಸದಸ್ಯರಾದ ಜಯರಾಮು, ರಾಮಚಂದ್ರು, ರಾಮಕೃಷ್ಣ. ರಮೇಶ್, ಬಾಬು, ಮಹದೇವು, ಕೃಷ್ಣ ರವಿಲಕ್ಷ್ಮಣ ಸೇರಿದಂತೆ ಇತರರು ಇದ್ದರು.