ಸಾರಾಂಶ
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ‘ಪೆಟ್ರೋಲ್ ಬಂಕ್ ಯೋಜನೆ’ಗೆ ಹಸಿರು ನಿಶಾನೆ ತೋರಿರುವ ಸರ್ಕಾರವು, ಕಾರಾಗೃಹಗಳ ಹೊರಾವರಣದಲ್ಲಿ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಘಟಕಗಳ ಸ್ಥಾಪನೆಗೂ ಸೂಚಿಸಿದೆ.
ಬಹುನಿರೀಕ್ಷೆಯ ಪೆಟ್ರೋಲ್ ಬಂಕ್ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡುವ ಮೂಲಕ ನಾಡಿನ ಸೆರೆಹಕ್ಕಿಗಳ ‘ನವೋದ್ಯಮ’ಕ್ಕೆ ಮುನ್ನುಡಿ ಬರೆದಿದೆ. ಈ ಬಂಕ್‌ಗಳು ಸಂಪೂರ್ಣವಾಗಿ ಕೈದಿಗಳಿಂದ ನಿರ್ವಹಣೆಯಾಗಲಿದ್ದು, ಈ ಯೋಜನೆಯಿಂದ ಇಲಾಖೆಗೆ ಆದಾಯ ಜತೆಗೆ ಕೈದಿಗಳಿಗೆ ಉದ್ಯೋಗ ಸಿಗಲಿದೆ ಎಂಬುದು ಕಾರಾಗೃಹ ಇಲಾಖೆಯ ಆಶಯವಾಗಿದೆ.
ಸರ್ಕಾರದ ಸಮ್ಮತಿ ಬೆನ್ನಲ್ಲೇ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಹೊರಗಡೆ 10 ಸಾವಿರ ಚದರಡಿ ವಿಸ್ತಾರದಲ್ಲಿ ರಾಜ್ಯದ ಮೊಟ್ಟ ಮೊದಲ ಕೈದಿಗಳೇ ನಿರ್ವಹಿಸುವ ಪೆಟ್ರೋಲ್ ಬಂಕ್ ಸ್ಥಾಪನೆಯಾಗಲಿದೆ. ಇದಕ್ಕೆ ಹಿಂದೂಸ್ತಾನ್ ಪೆಟ್ರೋಲಿಯಂ ಲಿಮಿಟೆಡ್ (ಎಚ್‌ಪಿಎಲ್) ಸಹಭಾಗಿತ್ವವಿದೆ. ಬೆಂಗಳೂರಿನ ನಂತರ ಹಂತ ಹಂತವಾಗಿ ಇನ್ನು ನಾಲ್ಕು ಕಡೆ ಬಂಕ್‌ಗಳು ಸ್ಥಾಪನೆಯಾಗಲಿವೆ ಎಂದು ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಬಂಕ್‌ಗಳ ಸ್ಥಾಪನೆಗೆ ಪ್ರಸ್ತಾಪ:
ಈಗಾಗಲೇ ಕಾರಾಗೃಹಗಳಲ್ಲಿ ಸಿದ್ಧ ಉಡುಪು, ಬೇಕರಿ ತಿನಿಸುಗಳು, ಸ್ಟೇಷನರಿ ವಸ್ತುಗಳು, ಗೃಹೋಪಯೋಗಿ ಬಳಕೆ ವಸ್ತುಗಳು ಮಾತ್ರವಲ್ಲದೆ ತರಕಾರಿ ಬೆಳೆದು ಸಹ ಮಾರುಕಟ್ಟೆಗೆ ಕೈದಿಗಳು ತಂದಿದ್ದಾರೆ. ಗುಡಿ ಕೈಗಾರಿಕೆ ಹಾಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಕೈದಿಗಳನ್ನು ಪೆಟ್ರೋಲ್ ಬಂಕ್ ನಿರ್ವಹಣೆಗೆ ಸಹ ಬಳಸಿಕೊಳ್ಳಲು ಇಲಾಖೆ ಯೋಜಿಸಿತ್ತು. ಅಲ್ಲದೆ ನೆರೆಯ ತೆಲಂಗಾಣ ರಾಜ್ಯವು ಕೈದಿಗಳಿಂದಲೇ ಪೆಟ್ರೋಲ್ ಬಂಕ್ ಉದ್ದಿಮೆ ಆರಂಭಿಸಿ ಯಶಸ್ಸು ಕಂಡಿತ್ತು.
ಈ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಮುಂದಾದ ಅಧಿಕಾರಿಗಳು, ತೆಲಂಗಾಣದ ಪೆಟ್ರೋಲ್ ಬಂಕ್‌ಗಳಿಗೆ ತೆರಳಿ ಅವಲೋಕಿಸಿ ಬಂದು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿದ್ದರು. ಎರಡೂವರೆ ವರ್ಷಗಳ ಬಳಿಕ ಅಳೆದು ತೂಗಿ ಕೊನೆಗೆ ಪೆಟ್ರೋಲ್ ಬಂಕ್ ಯೋಜನೆಗೆ ಸರ್ಕಾರ ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೇಗೆ ನಿರ್ವಹಣೆ?:
ರಾಜ್ಯದ ಬೆಂಗಳೂರು, ಮೈಸೂರು, ಬೆಳಗಾವಿ, ಕಲುಬರಗಿ ಹಾಗೂ ವಿಜಯಪುರ ಸೇರಿ ಐದು ಕೇಂದ್ರ ಕಾರಾಗೃಹಗಳಲ್ಲಿ ಪೆಟ್ರೋಲ್ ಬಂಕ್ ಆರಂಭಿಸುವ ಸಂಬಂಧ ರಾಜ್ಯ ಸರ್ಕಾರಕ್ಕೆ ಬಂದೀಖಾನೆ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ತಮಗೆ ಸೇರಿದ ಅನುಪಯುಕ್ತದ ಜಾಗವನ್ನು ವಾಣಿಜ್ಯಕ್ಕೆ ಬಳಸಿಕೊಳ್ಳಲು ಇಲಾಖೆ ಮುಂದಾಗಿತ್ತು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 10 ಸಾವಿರ ಚ.ಅಡಿ ಹಾಗೂ ಇನ್ನುಳಿದೆಡೆ ಎರಡು ಎಕರೆ ಪ್ರದೇಶವನ್ನು ಬಂಕ್ ಸ್ಥಾಪನೆಗೆ ಗುರುತಿಸಲಾಗಿದೆ.
ಹಾಗೆಯೇ ಎಚ್‌ಪಿಸಿಎಲ್ ಸಹಭಾಗಿತ್ವದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಕ್ ಆರಂಭವಾಗಲಿದ್ದು, ಉಳಿದೆಡೆ ಬಂಕ್‌ಗಳ ಸ್ಥಾಪನೆಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಓಸಿ) ಜತೆ ಮಾತುಕತೆ ನಡೆದಿದೆ. ಪ್ರತಿ ಬಂಕ್‌ಗೆ ಓರ್ವ ಜೈಲರ್ ಉಸ್ತುವಾರಿಯಲ್ಲಿ 8 ಕೈದಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾರ್ಜಿಂಗ್ ಘಟಕಗಳ ಸ್ಥಾಪನೆ
ವಿದ್ಯುತ್ ಚಾಲಿತ ವಾಹನಗಳ ಯುಗ ಶುರುವಾದ ಬೆನ್ನಲ್ಲೇ ಕಾರಾಗೃಹಗಳಲ್ಲಿ ವಿದ್ಯುತ್ ವಾಹನಗಳ ಚಾರ್ಜಿಂಗ್ ಘಟಕ ಸ್ಥಾಪನೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಜೈಲಿನ ಖಾಲಿ ಪ್ರದೇಶಗಳಲ್ಲಿ ವಿದ್ಯುತ್ ಜಾರ್ಜಿಂಗ್ ಘಟಕ ಸ್ಥಾಪಿಸುವಂತೆ ಸರ್ಕಾರ ಸೂಚಿಸಿದೆ. ಅಂತೆಯೇ ಘಟಕ ಆರಂಭವಾಗಿದ್ದು, ಇವುಗಳನ್ನು ಕೂಡ ಕೈದಿಗಳ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಹೊರಾವರಣದಲ್ಲಿ ಪೆಟ್ರೋಲ್ ಬಂಕ್ ಸ್ಥಾಪಿಸುವ ಪ್ರಸ್ತಾವನೆಗೆ ಸರ್ಕಾರ ಒಪ್ಪಿದೆ. ಇನ್ನುಳಿದ ಜೈಲುಗಳಲ್ಲಿ ಬಂಕ್ ಸ್ಥಾಪಿಸುವ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುತ್ತದೆ.
-ಎಸ್.ರವಿ, ಪ್ರಧಾನ ಕಾರ್ಯದರ್ಶಿ, ರಾಜ್ಯ ಗೃಹ ಇಲಾಖೆ.