ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು
ರಾಜ್ಯ ಸರ್ಕಾರ ಶಾಲಾ ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಾಲಾ ನಿರ್ವಹಣೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿ ಸಮೀಕ್ಷೆ ನಡೆಸಿ ನಂಜನಗೂಡು ತಾಲೂಕಿನ ಏಕೈಕ ಹೊಸ ವೀಡುಹುಂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಸಮಗ್ರ ಶಿಕ್ಷಣ ಕರ್ನಾಟಕ ಒಂದು ಲಕ್ಷ ರು. ನಗದು ಬಹುಮಾನ ಮತ್ತು ಪುಷ್ಠಿ ಗೌರವವನ್ನು ನೀಡಿ ಅಭಿನಂದಿಸಿದೆ.ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ಒಳಗೊಂಡಂತೆ 44,762 ಶಾಲೆಗಳು ವಿದ್ಯಾ ವಾಹಿನಿ ಪೋರ್ಟಲ್ ನಲ್ಲಿ ಎಸ್.ಡಿಎಂಸಿ ಸಮೀಕ್ಷೆಗೆ ಪಾಲ್ಗೊಳ್ಳುವ ಮೂಲಕ ಕ್ಲಸ್ಟರ್ ಹಂತದಿಂದ ತಾಲೂಕು ಹಂತಕ್ಕೆ 1,836 ಶಾಲೆಗಳು ಹಾಗೂ ತಾಲೂಕು ಹಂತದಿಂದ 612 ಶಾಲೆಗಳು ಜಿಲ್ಲಾ ಹಂತದವರೆಗಿನ ಮೌಲ್ಯಮಾಪನದಲ್ಲಿ ತೊಡಗಿಸಿಕೊಂಡಿದ್ದು, ಇದರಲ್ಲಿ 204 ಶಾಲೆಗಳು ಪ್ರತಿ ತಾಲೂಕಿಗೆ ಒಂದರಂತೆ ವಿದ್ಯಾ ವಾಹಿನಿ ಪೋರ್ಟಲ್ ಮೂಲಕ ಆಯ್ಕೆಗೊಂಡಿದ್ದು, ಈ 204 ಶಾಲೆಗಳಲ್ಲಿ ಹೊಸ ವೀಡುಹುಂಡಿ ಎಂಬ ಪುಟ್ಟ ಶಾಲೆ ಆಯ್ಕೆಯಾಗಿ ಒಂದು ಲಕ್ಷ ನಗದು ಬಹುಮಾನ ಪಡೆಯುವ ಮೂಲಕ ನಂಜನಗೂಡು ತಾಲೂಕಿನ ಇತರೆ ಶಾಲೆಗಳಿಗೆ ಮಾದರಿಯಾಗಿದೆ.ಕ್ಷೇತ್ರ ಸಮನ್ವಯಾಧಿಕಾರಿ ಬಾಲರಾಜ್ ಮಾತನಾಡಿ, ರಾಜ್ಯದ ಪುಷ್ಠಿ ಕಾರ್ಯಕ್ರಮದಡಿ ನಮ್ಮ ನಂಜನಗೂಡು ಶಾಲೆಯಲ್ಲಿ ಈ ಹೊಸ ವೀಡು ಹುಂಡಿ ಶಾಲೆಗೆ ಅನೇಕ ಬಾರಿ ಭೇಟಿ ನೀಡಿದಾಗ ಮಕ್ಕಳ ಕಲಿಕೆ ವಾತಾವರಣ ತುಂಬಾ ಚೆನ್ನಾಗಿದ್ದು, ಶಾಲೆ ಹಸಿರು ಪರಿಸರದೊಂದಿಗೆ ಕಂಗೊಳಿಸುತ್ತಿದ್ದು, ಈ ಶಾಲೆಗೆ ದಾನಿಗಳು ನೆರವಿನ ಮಹಾಪೂರವನ್ನೇ ಹರಿಸಿದ್ದು, ಸುಮಾರು ಮೂರು ಸಾವಿರ ಪುಸ್ತಕಗಳು ಸ್ಮಾರ್ಟ್ ಟಿವಿ, ನಲಿ ಕಲಿ, ಟೇಬಲ್, ಶಾಲೆಗೆ ಪೇಂಟ್ಸ್ ಮಾಡಿಸಿರುವುದು ನಮ್ಮ ಗಮನಕ್ಕೆ ಬಂದು ಶಾಲೆಯಲ್ಲಿ ಎಸ್.ಡಿ.ಎಂ.ಸಿ ಅವರ ಸಹಕಾರ ತುಂಬಾ ಇದ್ದು, ಈ ಶಾಲೆಗೆ ಪ್ರಶಸ್ತಿ ಬಂದಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
ಸಿ.ಆರ್.ಪಿ. ಶಿವನಾಗ ಮಾತನಾಡಿ, ಪುಷ್ಠಿ ಕಾರ್ಯಕ್ರಮದಡಿ ಉತ್ತಮ ಎಸ್. ಡಿಎಂಸಿ ಶಾಲೆ ಎಂದು ಹೆಸರು ಪಡೆದಿರುವ ಈ ಶಾಲೆಯು ಶೈಕ್ಷಣಿಕವಾಗಿ ಗುಣಮಟ್ಟವನ್ನು ಹೊಂದಿರುವ ಶಾಲೆಯಾಗಿದ್ದು, ಬಿಸಿ ಊಟ ನಿರ್ವಹಣೆಯಲ್ಲಿಯೂ ಅತ್ಯುತ್ತಮವಾಗಿದ್ದು, ಶಾಲೆ ಸರ್ವಾಂಗೀಣ ಅಭಿವೃದ್ಧಿ ಹೊಂದಿದ್ದು, ಈ ಶಾಲೆಗೆ ಈಗಾಗಲೇ ಸರ್ಕಾರದಿಂದ ಕಂಪ್ಯೂಟರ್ ಸ್ಮಾರ್ಟ್ ಟಿವಿ ಎಲ್ಲಾ ಬಂದಿದ್ದು, ಇದರ ಸದುಪಯೋಗವನ್ನು ಪಡಿಸಿಕೊಂಡು ಹೆಚ್ಚು ಹೆಚ್ಚು ದಾಖಲಾತಿಯನ್ನು ಪೋಷಕರು ಮಾಡಬೇಕಾಗಿದೆ ಎಂದು ಹೇಳಿದ್ದಾರೆ.------------
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಸವೀಡು ಹುಂಡಿ ಶಾಲೆಯು ಚಿಕ್ಕದಾದರೂ ತುಂಬಾ ಸುಂದರವಾಗಿರುವ ಶಾಲೆಯಾಗಿದ್ದು, ಈ ಶಾಲೆಗೆ ಪ್ರಶಸ್ತಿ ಬಂದಿರುವುದು ಶ್ಲಾಘನೀಯ ಶಾಲಾ ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಂಡು ಈ ಶಾಲೆ ಇಲಾಖೆಯ ಕಾರ್ಯ ಎಸ್.ಡಿ.ಎಂ.ಸಿ ನಿರ್ವಹಣೆ ಯಲ್ಲಿ ಉತ್ತಮವಾಗಿದ್ದು, ಈ ಶಾಲೆಯ ಮುಖ್ಯ ಶಿಕ್ಷಕ ಹನುಮಂತರಾಜು ಹಾಗೂ ಶಿಕ್ಷಕ ಪಿ. ನಾಗೇಶ ಅವರ ಶ್ರಮ ಉತ್ತಮ ಕಲಿಕೆಯ ವಾತಾವರಣದಿಂದ ಈ ಶಾಲೆಗೆ ಪ್ರಶಸ್ತಿ ಬಂದಿರುವುದು ನನಗೆ ಈ ಹೆಮ್ಮೆ ತಂದಿದೆ.- ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿ, ನಂಜನಗೂಡು.
------------ಈ ಪ್ರಶಸ್ತಿಯ ಗೌರವ ಸಂಪೂರ್ಣವಾಗಿ ಹೊಸ ವೀಡುಹುಂಡಿ ಗ್ರಾಮದವರಿಗೆ ಸಲ್ಲಬೇಕು. ಅವರ ಸಹಕಾರದಿಂದ ರಾಜ್ಯ ಸರ್ಕಾರದ ಪ್ರಶಸ್ತಿ ಲಭಿಸಿದೆ. ಈ ಒಂದು ಲಕ್ಷ ರು. ನಲ್ಲಿ ಶಾಲೆಗೆ ಪ್ರಿಂಟರ್, ಇನ್ವರ್ಟರ್, ವಾಟರ್ ಪ್ಯೂರಿಫೈ, ಗ್ರಂಥಾಲಯಕ್ಕೆ ರ್ಯಾಕ್, ನಲಿಕಲಿ ಕುರ್ಚಿ, ಟೇಬಲ್, ತರಗತಿಗೆ ಡೆಸ್ಕ್ ಗಳನ್ನು ಖರೀದಿ ಮಾಡಿ ಶಾಲಾ ದಾಖಲಾತಿ ಹೆಚ್ಚಳ ಮಾಡಲು ಪ್ರಯತ್ನಿಸುತ್ತೇವೆ.
- ಹನುಮಂತರಾಜು, ಮುಖ್ಯ ಶಿಕ್ಷಕ, ಹೊಸ ವೀಡುಹುಂಡಿ. ನಂಜನಗೂಡು.