ಸಾರಾಂಶ
- ಸಚಿವರ ರಾಜಿನಾಮೆ ಒತ್ತಾಯಿಸಿರುವ ಶಿವಗಂಗಾ ಹೇಳಿಕೆಗೆ ಬೆಂಬಲ
- ಹಿರೇಮಠ ಆವರಣದಲ್ಲಿ ದಲ್ಲಿ ಜಗದ್ಗುರು ಪಂಚಾಚಾರ್ಯ ರಥೋತ್ಸವ- - -
ಕನ್ನಡಪ್ರಭ ವಾರ್ತೆ ಚನ್ನಗಿರಿರಾಜ್ಯ ಸರ್ಕಾರ ನಡೆಸಿರುವ ಜಾತಿ ಜನಗಣತಿ ಅವೈಜ್ಞಾನಿಕವಾಗಿದೆ. ಇದನ್ನು ಮರುಪರಿಶೀಲನೆ ನಡೆಸಬೇಕು ಅಥವಾ ಪುನಃ ಜಾತಿ ಜನಗಣತಿ ಮಾಡಬೇಕು ಎಂದು ಎಡೆಯೂರು ಕ್ಷೇತ್ರದ ಶ್ರೀ ರೇಣುಕಾ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.
ಶುಕ್ರವಾರ ಪಟ್ಟಣದ ಹಿರೇಮಠ ಆವರಣದಲ್ಲಿ ಜಗದ್ಗುರು ಪಂಚಾಚಾರ್ಯ ರಥೋತ್ಸವದಲ್ಲಿ ಭಾಗವಹಿಸಿ, ಅನಂತರ ನಡೆದ ಧಾರ್ಮಿಕ ಸಮಾರಂಭದಲ್ಲಿ ಅವರು ಮಾತನಾಡಿದರು.ಅಖಿಲ ಭಾರತ ವೀರಶೈವ ಮಹಾಸಭಾ ಈಗಾಗಲೇ ಜಾತಿ ಜನಗಣತಿಯನ್ನು ತಿರಸ್ಕರಿಸಬೇಕು ಎಂಬ ತೀರ್ಮಾನವನ್ನು ತೆಗೆದುಕೊಂಡಿದೆ. ಜಾತಿ ಜನಗಣತಿಗೆ ಎಲ್ಲ ಮಠಾಧೀಶರೂ ವಿರೋಧ ವ್ಯಕ್ತಪಡಿಸಿದ್ದಾರೆ. ಕ್ಷೇತ್ರ ಶಾಸಕ ಬಸವರಾಜ ವಿ. ಶಿವಗಂಗಾ ವೀರಶೈವ ಸಮಾಜಕ್ಕೆ ಅನ್ಯಾಯವಾಗಿದ್ದು, ನಮ್ಮ ಸಮುದಾಯದ 7 ಜನ ಮಂತ್ರಿಗಳೂ ಕೂಡಲೇ ರಾಜೀನಾಮೆ ನೀಡಬೇಕು ಎಂದಿದ್ದಾರೆ. ಅವರ ಈ ಮಾತಿಗೆ ನಮ್ಮಗಳ ಸಹಮತ ಇದೆ ಎಂದ ಅವರು, ಸರ್ಕಾರ ಒಬ್ಬ ವ್ಯಕ್ತಿ, ಒಂದು ಸಮಾಜವನ್ನು ಓಲೈಸಲು ಇತರೆ ಸಮಾಜವನ್ನು ತುಳಿಯಬಾರದು ಎಂದರು.
ಹಾಲಸ್ವಾಮಿ ವಿರಕ್ತ ಮಠದ ಶ್ರೀ ಬಸವ ಜಯಚಂದ್ರ ಮಹಾಸ್ವಾಮಿಗಳು ಮಾತನಾಡಿ, ಹಿರೇಮಠದ ಶ್ರೀಗಳು 2018ರಿಂದ ಜಗದ್ಗುರು ಪಂಚಾಚಾರ್ಯರ ರಥೋತ್ಸವ ವಿಜೃಂಭಣೆಯಿಂದ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಇದು ರಾಜ್ಯದಲ್ಲಿಯೇ ಪ್ರಥಮದ್ದಾಗಿದೆ. ನಾಡಿನ ಎಲ್ಲ ಭಾಗಗಳಲ್ಲಿ ವಿವಿಧ ದೇವರುಗಳ ರಥೋತ್ಸವ ನಡೆಯುವುದು ಸಾಮಾನ್ಯವಾಗಿದೆ. ಆದರೆ, ಪಂಚಾಚಾರ್ಯರ ರಥೋತ್ಸವ ನಡೆಯುತ್ತಿರುವುದು ಚನ್ನಗಿರಿ ಹಿರೇಮಠದ ವಿಶೇಷತೆಗಳಲ್ಲಿ ಒಂದಾಗಿದೆ ಎಂದರು.ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ರಥೋತ್ಸವ ನಡೆಯುತ್ತಿರುವುದು ಹಿರೇಮಠದ ವಿಶೇಷ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಎಲ್ಲ ಕಡೆಗಳಲ್ಲಿಯೂ ಪುರುಷರು ರಥ ಎಳೆಯುತ್ತಾರೆ. ಆದರೆ, ಪಂಚಾಚಾರ್ಯರ ರಥವನ್ನು ಒಂದು ಭಾಗದಲ್ಲಿ ಪುರುಷರು, ಮತ್ತೊಂದು ಭಾಗದಲ್ಲಿ ಮಹಿಳೆಯರು ಸೇರಿ ಎಳೆಯುವುದು ಇಲ್ಲಿನ ವಿಶೇಷ ಆಚರಣೆ. ಇಂತಹ ರಥೋತ್ಸವದಿಂದ ಉತ್ತಮ ಮಳೆಯಾಗಿ, ಸಮೃದ್ಧ ಬೆಳೆಯಾಗಿ ರಾಜ್ಯದ ಜನರು ನೆಮ್ಮದಿ ಕಾಣುವರು ಎಂದರು.
ಸಮಾರಂಭದಲ್ಲಿ ಶ್ರೀ ಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು, ವೀರಶೈವ ಸಮಾಜದ ಮುಖಂಡರಾದ ಸಿ.ಎಂ. ಗುರುಸಿದ್ದಯ್ಯ, ಕೆ.ಪಿ.ಎಂ. ಲತಾ, ಮಲ್ಲಿಕಾರ್ಜುನ್, ಕರಿಸಿದ್ದಪ್ಪ ಮಾಸ್ಟರ್, ಸಂಗಯ್ಯ, ರಾಜಶೇಖರಯ್ಯ, ಜ್ಯೋತಿ ಕೋರಿ, ನಾಗೇಂದ್ರಯ್ಯ, ಭಕ್ತಾಧಿಗಳು ಹಾಜರಿದ್ದರು.- - -
-18ಕೆಸಿಎನ್‌ಜಿ2.ಜೆಪಿಜಿ:ಧಾರ್ಮಿಕ ಸಮಾರಂಭದಲ್ಲಿ ಎಡೆಯೂರು ಶ್ರೀಗಳು ಮಾತನಾಡಿದರು.