ಸಾರಾಂಶ
ಉತ್ತರ ಪ್ರದೇಶದ ರಾಜ್ಯದ ಪ್ರಯಾಗ್ ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳಕ್ಕೆ ಹೋಗಲು ಸಾಧ್ಯವಾಗದವರು ಇಲ್ಲಿನ ಹೇಮಾವತಿ, ಕಾವೇರಿ ಹಾಗೂ ಲಕ್ಷ್ಮಣತೀರ್ಥ ಮೂರು ಜೀವಂತ ನದಿಗಳು ಒಂದಾಗಿ ಸೇರುವ ಅಂಬಿಗರಹಳ್ಳಿ ಸಮೀಪದ ಪವಿತ್ರ ತೀರ್ಥ ಕ್ಷೇತ್ರದಲ್ಲಿ ಪುಣ್ಯ ಸ್ನಾನ ಮಾಡಿದರೆ ಆರೋಗ್ಯ, ಸುಖ ಶಾಂತಿ, ಸಮೃದ್ಧಿ ಉಂಟಾಗುತ್ತದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಅಂಬಿಗರಹಳ್ಳಿ ಬಳಿ ಕಾವೇರಿ-ಹೇಮಾವತಿ ಮತ್ತು ಲಕ್ಷ್ಮಣ ತೀರ್ಥ ನದಿಗಳು ಸಂಗಮಿಸುವ ತ್ರಿವೇಣಿ ಸಂಗಮದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಗಮನ ಹರಿಸುವಂತೆ ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಮನವಿ ಮಾಡಿದರು. ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರಕ್ಕೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಮಾಘ ಸ್ನಾನ ಮಾಡಿದ ಸ್ವಾಮೀಜಿಗಳು ಕ್ಷೇತ್ರದ ಅದಿ ದೇವತೆ ಶ್ರೀಸಂಗಮೇಶ್ವರ ಮತ್ತು ಸಂಗಮ ಸ್ಥಳದಲ್ಲಿ ನಿರ್ಮಿಸಿರುವ ಬಾಲ ಮಹದೇಶ್ವರರ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಿದರು.ದಕ್ಷಿಣ ಭಾರತದಲ್ಲಿ ಮೂರು ನದಿಗಳು ಭೂಮಿಯ ಮೇಲ್ಮೈಯಲ್ಲಿಯೇ ಸಂಗಮಿಸುವ ಏಕೈಕ ಪುಣ್ಯ ಸ್ಥಳ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮ. ಮಲೆ ಮಹದೇಶ್ವರರ ಮೊಟ್ಟ ಮೊದಲ ಪವಾಡ ನಡೆದ ಸ್ಥಳವೂ ಇದಾಗಿದೆ ಎಂದು ಜನಪದೀಯ ಕಾವ್ಯಗಳಲ್ಲಿ ಉಲ್ಲೇಖಿತವಾಗಿದೆ ಎಂದರು.
ಉತ್ತರ ಪ್ರದೇಶದ ರಾಜ್ಯದ ಪ್ರಯಾಗ್ ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳಕ್ಕೆ ಹೋಗಲು ಸಾಧ್ಯವಾಗದವರು ಇಲ್ಲಿನ ಹೇಮಾವತಿ, ಕಾವೇರಿ ಹಾಗೂ ಲಕ್ಷ್ಮಣತೀರ್ಥ ಮೂರು ಜೀವಂತ ನದಿಗಳು ಒಂದಾಗಿ ಸೇರುವ ಅಂಬಿಗರಹಳ್ಳಿ ಸಮೀಪದ ಪವಿತ್ರ ತೀರ್ಥ ಕ್ಷೇತ್ರದಲ್ಲಿ ಪುಣ್ಯ ಸ್ನಾನ ಮಾಡಿದರೆ ಆರೋಗ್ಯ, ಸುಖ ಶಾಂತಿ, ಸಮೃದ್ಧಿ ಉಂಟಾಗುತ್ತದೆ ಎಂದರು.ನಾನು ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭಮೇಳದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಇಲ್ಲಿನ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರಕ್ಕೆ ಭೇಟಿ ನೀಡಿ ಪುಣ್ಯ ಸ್ನಾನ ಮಾಡಬೇಕೆಂಬ ಆಸೆಯಿತ್ತು. ಅದು ಇಂದು ಈಡೇರಿದೆ. ಸ್ಥಳೀಯ ಸಂಘಟಕರ ಆಸಕ್ತಿಯಿಂದ ರಾಜ್ಯ ಸರ್ಕಾರ ಈ ಪವಿತ್ರ ಕ್ಷೇತ್ರದಲ್ಲಿ ಈಗಾಗಲೇ ಎರಡು ಮಹಾ ಕುಂಭ ಮೇಳವನ್ನು ಯಶಸ್ವಿಯಾಗಿ ನಡೆಸಿದೆ ಎಂದರು.
ಕುಂಭ ಮೇಳ ನಡೆಸಿದ್ದು ಹೊರತು ಪಡಿಸಿದರೆ ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ತ್ರಿವೇಣಿ ಸಂಗಮ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಉತ್ತರದ ಪ್ರಯಾಗ್ ರಾಜ್ ಮಾದರಿಯಲ್ಲಿ ವಿಶ್ವದ ಭೂಪಟದಲ್ಲಿ ಕಾಣಿಸುವಂತೆ ಮಾಡಬೇಕು. ಇದರಿಂದ ಪ್ರವಾಸೋಧ್ಯಮ ಅಭಿವೃದ್ಧಿಗೊಂಡು ಸರ್ಕಾರದ ಆದಾಯವೂ ಹೆಚ್ಚಲಿದೆ. ಭಕ್ತರಿಗೆ ಅನುಕೂಲ ಮಾಡಿಕೊಡಲು ಕೆಲಸ ಮಾಡಬೇಕು ಎಂದರು.ಸಂಗಮ ಕ್ಷೇತ್ರಕ್ಕೆ ಆಗಮಿಸಿದ ಡಾ.ನಿಶ್ಚಲಾನಂದನಾಥ ಶ್ರೀಗಳು ಭಕ್ತರು ಪೂರ್ಣಕುಂಬದ ಸ್ವಾಗತ ನೀಡಿ ಸ್ವಾಗತಿಸಿದರು.
ಈ ವೇಳೆ ತ್ರಿವೇಣಿ ಸಂಗಮ ಅಭಿವೃದ್ಧಿ ಟ್ರಸ್ಟ್ ಸಂಚಾಲಕ ಡಾ.ಅಂಚಿ ಸಣ್ಣಸ್ವಾಮಿಗೌಡ, ಸಂಸ್ಕೃತ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಪದ್ಮಾಶೇಖರ್, ಕನ್ನಡ ಭಾಷ ತಜ್ಞ ವಿಜ್ಞಾನಿ ಡಾ.ಸೋಮಶೇಖರ ಗೌಡ, ವಕೀಲರಾದ ನಾಗರಾಜು, ದೇವರಾಜೇಗೌಡ, ಬಲ್ಲೇನಹಳ್ಳಿ ನಂದೀಶ್, ತಾಲೂಕು ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಪಶು ವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ದೇವರಾಜು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಯೋಜನಾಧಿಕಾರಿ ತಿಲಕ್ ರಾಜ್ ಸೇರಿದಂತೆ ಭಕ್ತರು ಭಾಗವಹಿಸಿದ್ದರು.