ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದೆ. ರಾಜ್ಯ ಸರ್ಕಾರವು ರೈತರಿಗೆ ಎಕರೆಗೆ ₹25000 ಪರಿಹಾರ ಘೋಷಿಸಬೇಕು ಎಂದು ರಾಜ್ಯ ಯುವ ಜನತಾದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
- ನಿಖಿಲ್ ಕುಮಾರಸ್ವಾಮಿ ಆಗ್ರಹ । ಹರಿಹರ ತಾ. ಭಾನುವಳ್ಳಿಯಲ್ಲಿ ರೈತ ಸ್ವಾಭಿಮಾನ ಯಾತ್ರೆ ಸಭೆ
- - -ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದೆ. ರಾಜ್ಯ ಸರ್ಕಾರವು ರೈತರಿಗೆ ಎಕರೆಗೆ ₹25000 ಪರಿಹಾರ ಘೋಷಿಸಬೇಕು ಎಂದು ರಾಜ್ಯ ಯುವ ಜನತಾದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.ಹರಿಹರ ತಾಲುಕಿನ ಭಾನುವಳ್ಳಿ ಗ್ರಾಮದಲ್ಲಿ ನಡೆದ ರೈತ ಸ್ವಾಭಿಮಾನ ಯಾತ್ರೆಯ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ರೈತರ ಮೇಲಿನ ದ್ವಂದ್ವ ನೀತಿ ಮಾರಕವಾಗಿದೆ. ರಾಜ್ಯದ ಜನತೆ ಮುಂದಿನ ದಿನಗಳಲ್ಲಿ ನಿಮ್ಮ ಸರ್ಕಾರವನ್ನು ಮೂಲೆಗುಂಪು ಮಾಡುವುದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ಕಾಂಗ್ರೆಸ್ ಸರ್ಕಾರಕ್ಕೆ 136 ಶಾಸಕರನ್ನು ಮತದಾರ ಪ್ರಭುಗಳು ನೀಡಿದ್ದಾರೆ. ಆದರೆ, ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿದೆ. ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ರೈತರಿಗೆ ಮೋಸ ಮಾಡಿ ರಿಯಲ್ ಎಸ್ಟೇಟ್ ಮಾಡುವರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರವನ್ನು ನಡೆಸುತ್ತಿದ್ದಾರೆ. ಎಚ್.ಎಸ್. ಶಿವಶಂಕರ್ ಅವರಿಗೆ ಅಪಾರ ಅನುಭವ ಇದೆ. ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ರಾಜ್ಯದಲ್ಲಿ ರೈತರ ಪರವಾಗಿ ಇರುವ ಏಕೈಕ ಪಕ್ಷವೆಂದರೆ ಜೆಡಿಎಸ್ ಮಾತ್ರ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಡಳಿತದಲ್ಲಿ ಸಾಲಮನ್ನಾ ಮಾಡಿದ್ದರು. ರೈತರಿಗೆ ಬೆಂಬಲ ಬೆಲೆ ಇಲ್ಲ, ರಾಜ್ಯಸರ್ಕಾರದ ಆಡಳಿತದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಗ್ಯಾರಂಟಿಗಳ ನೆಪದಲ್ಲಿ ಅಭಿವೃದ್ಧಿ ಕಾರ್ಯಗಳನ್ನೆ ಮರೆತಿದೆ. ಸರ್ಕಾರ ಬಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ನಾನು ಈ ಕ್ಷೇತ್ರದಲ್ಲಿ ಕೆರೆಗಳಾದ ಕೊಂಡಜ್ಜಿ, ಕೊಮಾರನಹಳ್ಳಿ, ದೇವರ ಬೆಳಕೆರೆ, ಕಮಲಾಪುರ, ಹೊಳೆ ಸಿರಿಗೇರಿ, ಯಲವಟ್ಟಿ ಕೆರೆಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ಮಾದರಿಯಾಗಿ ಈ ಕ್ಷೇತ್ರವನ್ನು ರೂಪಿಸುತ್ತೇನೆ ಎಂದು ಇಂಗಿತ ವ್ಯಕ್ತಪಡಿಸಿದರು.
ಈ ಸಂದರ್ಭ ದೇವರ ಬೆಳಕೆರೆ, ಕಮಲಾಪುರ, ಕಡರನಾಯ್ಕನಹಳ್ಳಿ ಗ್ರಾಮಗಳಿಗೆ ಭೇಟಿ ರೈತರ ಜೊತೆ ಚರ್ಚಿಸಿದರು. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಚಿದಾನಂದಪ್ಪ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಎನ್.ಜಿ. ಬಸವರಾಜಪ್ಪ, ಪರಮೇಶ್ ಗೌಡ್ರು, ಕೆ.ಎಸ್. ರವೀಂದ್ರ ಕುಮಾರ್, ಎಚ್.ಎನ್. ನವೀನ್ ಕುಮಾರ್, ಕಮಲಾಪುರ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್. ರಮೇಶ್, ಪ್ರಕಾಶ್, ರುದ್ರೇಶ್, ಎಸ್.ಪಿ. ಪಾಟೀಲ್, ಟಿ.ಆರ್. ಮಹೇಶ್ವರಪ್ಪ ಇದ್ದರು.- - -
(ಫೋಟೋ ಇದೆ)