ಸಾರಾಂಶ
ಹಾನಗಲ್ಲ: ಕಳೆದ ೫ ವರ್ಷಗಳಿಂದ ೫.೫ ಲಕ್ಷ ಕೋಟಿ ರು. ಸಾಲದ ಹೊರೆ ನಮ್ಮ ರಾಜ್ಯದ ಜನರ ಮೇಲಿದ್ದು, ಈ ಸಾಲಕ್ಕೆ ಪ್ರತಿದಿನ ೧೨೫ ಕೋಟಿ ರು. ಬಡ್ಡಿ ಪಾವತಿಸಬೇಕಿದೆ. ಹೀಗಾಗಿ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಆರ್ಥಿಕ ಸಂಕಷ್ಟದಿಂದ ರಾಜ್ಯವನ್ನು ಪಾರು ಮಾಡಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ಒಂದು ಕೋಟಿ ರು. ವೆಚ್ಚದಲ್ಲಿ ಶಾದಿಮಹಲ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಪ್ರತಿ ವರ್ಷ ೪೫ ಸಾವಿರ ಕೋಟಿ ರು. ಬಡ್ಡಿ ಪಾವತಿಸಬೇಕಿದೆ. ಕಳೆದ ಕೆಲ ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿ, ಕೊರೋನಾ ಸೇರಿದಂತೆ ಇನ್ನಿತರ ಕಾರಣಗಳಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ರಚನೆಯಾಗಿರುವ ಕಾಂಗ್ರೆಸ್ ಸರಕಾರ ಅಭಿವೃದ್ಧಿಗೆ ಅನುದಾನ ದೊರಕಿಸಿ, ಜನಹಿತ ಕಾಯಲು ಮುಂದಾಗಿದೆ. ಬಡ ಕುಟುಂಬಗಳಿಗೆ ಕನಿಷ್ಠ ಆರ್ಥಿಕ ಭದ್ರತೆ ಒದಗಿಸುತ್ತಿದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಅನಿವಾರ್ಯತೆ ಸೃಷ್ಟಿಯಾಗಿದ್ದು, ಪ್ರತಿಯೊಬ್ಬರೂ ಸಹ ವಾಸ್ತವ ಪರಿಸ್ಥಿತಿ ಅರಿಯಬೇಕಿದೆ ಎಂದರು.ತಾಲೂಕಿನಲ್ಲಿ ತಿಳವಳ್ಳಿ ಮತ್ತು ಕಂಚಿನೆಗಳೂರು ಗ್ರಾಮಗಳಲ್ಲಿ ಶಾದಿಮಹಲ್ ನಿರ್ಮಾಣಕ್ಕೆ ಸರ್ಕಾರ ಅನುದಾನ ಬಿಡುಗಡೆಗೊಳಿಸಿದೆ. ಇಡೀ ರಾಜ್ಯದಲ್ಲಿ ಒಂದೇ ತರಹದ ಶಾದಿಮಹಲ್ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ ಎಂದು ತಿಳಿಸಿದ ಅವರು ಅಲ್ಪಸಂಖ್ಯಾತ ಬಂಧುಗಳು ಮಕ್ಕಳ ಶಿಕ್ಷಣಕ್ಕೆ ಮೊದಲಾದ್ಯತೆ ನೀಡಬೇಕಿದೆ. ಎಲ್ಲ ಸಮಸ್ಯೆಗಳನ್ನೂ ಪರಿಹರಿಸುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ ಎನ್ನುವ ಸತ್ಯ ಅರಿಬೇಕಿದೆ ಎಂದರು. ಪ್ರತಿಯೊಬ್ಬ ನಾಗರಿಕರೂ ಸಹ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿ ಅರಿಯಬೇಕಿದೆ. ನಿಗದಿತ ಸಮಯಕ್ಕೆ ಟ್ಯಾಕ್ಸ್ ಭರಿಸಿ ಸ್ಥಳೀಯ ಸಂಸ್ಥೆಗಳನ್ನು ಬಲ ಪಡಿಸಬೇಕಿದೆ. ನೀರು, ವಿದ್ಯುತ್‌ನ ಅಪವ್ಯಯ ತಡೆಗಟ್ಟಿ ಸಾಮಾಜಿಕ ಕಳಕಳಿ ಪ್ರದರ್ಶಿಸಬೇಕಿದೆ ಎಂದರು.
ಅಂಜುಮನ್ ಸಮಿತಿ ಅಧ್ಯಕ್ಷ ರೆಹೆಮಾನ್‌ಸಾಬ ಸವಣೂರ, ಗ್ರಾಪಂ ಅಧ್ಯಕ್ಷೆ ಅಫ್ರೋಜಾ ಕನವಳ್ಳಿ, ತಾಪಂ ಮಾಜಿ ಸದಸ್ಯ ಫಯಾಜ್ ಲೋಹಾರ, ಮುಖಂಡರಾದ ವಿನಾಯಕ ಪವಾರ, ಗ್ರಾಪಂ ಮಾಜಿ ಅಧ್ಯಕ್ಷ ಆರೀಫ್ ಲೋಹಾರ, ಗ್ರಾಪಂ ಸದಸ್ಯರಾದ ಖಾದರಸಾಬ ಮೂಗೂರ, ಸಮ್ಮದ ಮೂಡಿ, ರಾಜೂ ಶೇಷಗಿರಿ, ಲಿಂಗರಾಜ ಕುರುಬರ, ಸುಶೀಲಾ ತಳವಾರ, ಬಸವರಾಜ ಚವ್ಹಾಣ, ವಾಸೀಂ ಪಠಾಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಅಶೋಕ ಪವಾರ ಈ ಸಂದರ್ಭದಲ್ಲಿದ್ದರು.