ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕಾಂಗ್ರೆಸ್ ನಾಯಕರು ಚಿಕ್ಕಬಳ್ಳಾಪುರದಲ್ಲಿ ಫೆಬ್ರವರಿ 23ರಂದು ನರೇಗಾ ಬಚಾವೋ ಆಂದೋಲನ ನಡೆಸುತ್ತಿದ್ದಾರೆ. ಆದರೆ ಈಗ ‘ಕಾಂಗ್ರೆಸ್‌ನಿಂದ ಕರ್ನಾಟಕ ಬಚಾವೋ’ ಎಂಬ ಆಂದೋಲನದ ಅಗತ್ಯ ಇದೆ ಮತ್ತು ನರೇಗಾ ಬಚಾವೋ ಬದಲು ಬಯಲುಸೀಮೆ ಬಚಾವೋ ಆಂದೋಲನ ಮಾಡಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟರು.

ನಗರದ ಸಂಸದರ ಗೃಹ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡಸಿ ಮಾತನಾಡಿ, ಕಾಂಗ್ರೆಸ್ ನಾಯಕರು ಹಾಗೂ ಸರ್ಕಾರ ಮಾಡುತ್ತಿರುವ ಅವಾಂತರಗಳಿಂದಾಗಿ ಕರ್ನಾಟಕ ಹಾಗೂ ವಿಶೇಷವಾಗಿ ಚಿಕ್ಕಬಳ್ಳಾಪುರ ಅಪಾಯದ ಸ್ಥಿತಿಯಲ್ಲಿದೆ. ಆದರೆ ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಸುಧಾಕರ್, ಜಿಲ್ಲೆಯ ಅಭಿವೃದ್ಧಿಗೆ ಏನೂ ಮಾಡುತ್ತಿಲ್ಲ. ಆದರೆ ರಾಜಕೀಯಕ್ಕಾಗಿ ನರೇಗಾ ಬಚಾವೋ ಕಾರ್ಯಕ್ರಮ ಮಾಡುತ್ತಿದ್ದಾರೆ. ಶಾಸಕರು ಹಾಗೂ ಸಚಿವರಿಗೆ ಕಾಂಗ್ರೆಸ್‌ನ ಹೈಕಮಾಂಡ್ ಮೆಚ್ಚಿಸಬೇಕು. ಜನರ ಮೆಚ್ಚುಗೆ ಇವರಿಗೆ ಬೇಕಿಲ್ಲ. ಜನರು ಮೆಚ್ಚುವುದನ್ನು ಮೊದಲು ಮಾಡಿ. ಹೈಕಮಾಂಡ್ ಮೆಚ್ಚುವುದು ಬದಿಗೆ ಇಡಿ ಎಂದು ಕಿವಿಮಾತು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಹೊಸ ಯೋಜನೆಯಲ್ಲಿ ಮಹಾತ್ಮ ಗಾಂಧೀಜಿ ಹೆಸರು ತೆಗೆದುಹಾಕಿದ್ದಾರೆ ಎಂಬುದು ಕಾಂಗ್ರೆಸ್‌ ಆರೋಪ, ಕಳೆದ 60 ವರ್ಷಗಳಲ್ಲಿ 400ಕ್ಕೂ ಅಧಿಕ ಯೋಜನೆಗಳಿಗೆ, ಸಂಸ್ಥೆಗಳಿಗೆ ನೆಹರು, ರಾಜೀವ್ ಗಾಂಧಿ, ಇಂದಿರಾಗಾಂಧಿ, ಸಂಜಯಗಾಂಧಿ ಹೆಸರು ನಾಮಕರಣ ಮಾಡಿದ್ದಾರೆ. ಆಗ ಇವರಿಗೆ ಮಹಾತ್ಮ ಗಾಂಧೀಜಿಯ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದರು.

ಗಲ್ಲಿಗೆ ಒಂದು ಬೀದಿಗೆ ಒಂದು ಬಾರ್ ತೆರೆಯಲು ಅವಕಾಶ ಮಾಡಿದ್ದಾರೆ. ಆಗ ಗಾಂಧೀಜಿ ನೆನಪಾಗಲಿಲ್ಲ, ಗಾಂಧೀಜಿ ಪಾನ ನಿಷೇಧ ಅಂದೋಲನ ಮಾಡಿದ್ದರು. ಗೋ ಹತ್ಯೆಯನ್ನು ಕಾಂಗ್ರೆಸ್ ನಾಯುಕರು ಸಮರ್ಥನೆ ಮಾಡಿಕೊಳ್ಳುತ್ತಾರೆ. ಗಾಂಧೀಜಿ ಗೋ ಸಂರಕ್ಷಣೆ ಮಾಡಿ ಎಂದು ಕರೆ ನೀಡಿದ್ದರು. ಹಿಂದೆ ವೇತನ ಪಾವತಿ ಮಾಡಲು ಕಾಲದ ಮಿತಿ ಇರಲಿಲ್ಲ. ಎಷ್ಟೋ ತಿಂಗಳ ನಂತರ ಸಂಬಳ ಕೊಡುತ್ತಿದ್ದರು. ಈಗ 15 ದಿನಗಳ ಒಳಗೆ ವೇತನ ಪಾವತಿಸಬೇಕು ಎಂಬ ನಿಯಮ ಇದೆ. ಇದು ಸುಧಾರಣೆ ಅಲ್ಲವೇ? ಹಿಂದಿನ ಯೋಜನೆಯಲ್ಲಿ ಫಲಾನುಭವಿ ಅಲ್ಲದವರೂ ಹಣ ಪಡೆಯುತ್ತಿದ್ದರು, ಕೋಟ್ಯಂತರ ರುಪಾಯಿ ಲೂಟಿ ನಡೆದಿತ್ತು. ಅದನ್ನು ತಡೆಗಟ್ಟಲು ತಂತ್ರ ಜ್ಞಾನ ಬಳಸಲಾಗುತ್ತಿದೆ .ಯೋಜನೆಯಲ್ಲಿ ಕೆಂದ್ರ ಸರ್ಕಾರ ಶೇ.80 ರಾಜ್ಯ ಸರ್ಕಾರ ಶೇ.40 ರಷ್ಟು ಅನುದಾನ ಭರಿಸುತ್ತದೆ. ಆದರೆ ಕಾಂಗ್ರೆಸ್ ಸರ್ಕಾರದ ಬಳಿ ಹಣ ಇಲ್ಲದಿರುವುದರಿಂದ ಇಷ್ಟೊಂದು ವಿರೋಧ ವ್ಯಕ್ತಪಡಿಸುತ್ತಿದೆ ಎಂದರು.


ಈ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ನಾನು ಅನೇಕ ಅಂಶಗಳನ್ನು ಹೇಳಿ ಆಗ್ರಹ ಮಾಡಿದ್ದೆ. ಆದರೆ ಈವರೆಗೆ ಜನರ ನಿರೀಕ್ಷೆಗೆ ತಕ್ಕಂತೆ ಯಾವ ಕೆಲಸವೂ ಆಗಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳ ಸಭೆ ನಡೆಸಿದ್ದಾರೆ. 2027 ರೊಳಗೆ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ಹರಿಸಬೇಕೆಂದು ಸೂಚನೆ ನೀಡಿದ್ದಾರೆ. ಹೀಗೆಯೇ ಗಾಳಿ ಗೋಪುರ ಕಟ್ಟುತ್ತಾ ಹೋದರೆ ನಮಗೆ ನೀರು ಸಿಗಲ್ಲ. ಕಾವೇರಿಯಂತೆಯೇ ನಮಗೂ ಪ್ರತ್ಯೇಕವಾಗಿ ನದಿಯಿಂದ ನೀರು ಪೂರೈಸುವ ಯೋಜನೆ ಬೇಕಿದೆ ಎಂದರು.

ಎಚ್‌.ಎನ್.ವ್ಯಾಲಿ ಹಾಗೂ ಕೆ.ಸಿ.ವ್ಯಾಲಿ ಯೋಜನೆಯ ತೃತೀಯ ಹಂತದ ಸಂಸ್ಕರಣಾ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಸರ್ಕಾರಕ್ಕಿದೆ, ಆ ಬಗ್ಗೆ ಸ್ಥಳೀಯ ಶಾಸಕರು, ಸಚಿವರು ಯೋಚನೆ ಮಾಡುತ್ತಿಲ್ಲ. ಚಿಕ್ಕಬಳ್ಳಾಪುರದಲ್ಲಿ ₹100 ಕೋಟಿ ವೆಚ್ಚದಲ್ಲಿ ಹೈಟೆಕ್ ಹೂವಿನ ಮಾರುಕಟ್ಟೆ ನಿರ್ಮಿಸಲಾಗುವುದು ಎಂದು ಬಿಜೆಪಿ ಆಡಳಿತದ ಕೊನೆಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ನಂತರ ಬಂದ ಕಾಂಗ್ರೆಸ್ ಸರ್ಕಾರ, ಹೂವಿನ ಮಾರುಕಟ್ಟೆ ಘೋಷಣೆ ಮಾಡಿದ್ದಾರೆ, ಹಣ ಮೀಸಲಿಟ್ಟಿಲ್ಲ ಎಂದು ಆರೋಪ ಮಾಡಿತ್ತು. ಬಳಿಕ ಕೂಡ ಇವರು ಅನುದಾನ ನೀಡಿಲ್ಲ. ಹಿಂದೆ 2024 ರಲ್ಲಿ ಕೋಚಿಮುಲ್ ಇದ್ದಾಗ, ಹಾಲಿನ ಪ್ರೋತ್ಸಾಹಧನವನ್ನು ₹2 ಕಡಿತ ಮಾಡಲಾಯಿತು. ಆ ಬಗ್ಗೆ, ಎಲ್ಲ ರೈತರು ಪಕ್ಷಾತೀತವಾಗಿ. ಹೋರಾಟ ಮಾಡಬೇಕಿತ್ತು. ಹಾಲಿನ ದರವನ್ನು ಸರ್ಕಾರ 3 ಬಾರಿ ಏರಿಕೆ ಮಾಡಿದೆ. ಆದರೆ ನಮ್ಮ ಜಿಲ್ಲೆಗಳ ಹಾಲು ಒಕ್ಕೂಟಗಳಲ್ಲಿ ದರ ಕಡಿತವಾಗಿ ರೈತರಿಗೆ ಅನ್ಯಾಯವಾಗಿದೆ. ಅದೇ ರೀತಿ ಮೆಡಿಕಲ್ ಕಾಲೇಜು ಇನ್ನೂ ಆರಂಭವಾಗಿಲ್ಲ. ಮಾತು ಬೆಳ್ಳಿ ಮೌನ ಬಂಗಾರ ಎನ್ನುತ್ತಾರೆ. ಆದರೆ ರಾಜಕೀಯದಲ್ಲಿ ಮಾತು ಬೆಳ್ಳಿ ಕೆಲಸವೇ ಬಂಗಾರ. ಕೆಲಸ ಮಾಡಿದರೆ ಮಾತ್ರ ಜನರು ಮತ ಕೊಡುತ್ತಾರೆ. ಆ ಬಗ್ಗೆ ಕಾಂಗ್ರೆಸ್ ನಾಯಕರು ಗಮನ ಕೊಡಿ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ನಗರಸಭೆ ಮಾಜಿ ಅಧ್ಯಕ್ಷ ಎ.ಗಜೇಂದ್ರ, ಮುಖಂಡರಾದ ಮರಳಕುಂಟೆ ಕೃಷ್ಣಮೂರ್ತಿ, ಅವುಲಕೊಂಡರಾಯಪ್ಪ, ಚನ್ನಪ್ಪರೆಡ್ಡಿ, ಸೀಕಲ್ ಆನಂದಗೌಡ,ಲಿಂಗಾರೆಡ್ಡಿ,ಮತ್ತಿತರರು ಇದ್ದರು.

-----

ಸಿಕೆಬಿ-3 ಸುದ್ದಿಗೋಷ್ಠಿಯಲ್ಲಿ ಸಂಸದ ಡಾ.ಕೆ.ಸುಧಾಕರ್ ಮಾತನಾಡಿದರು.