ಪೊಲೀಸ್‌ ಸೇವೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಶ್ಲಾಘನೀಯ

| Published : Apr 18 2025, 12:42 AM IST

ಸಾರಾಂಶ

ಪೊಲೀಸ್ ವ್ಯವಸ್ಥೆ, ನ್ಯಾಯ ವಿತರಣೆ, ಜೈಲುಗಳ ಆಡಳಿತ ಹಾಗೂ ನಿರ್ವಹಣೆಯಲ್ಲಿ ದೇಶದಲ್ಲೇ ಕರ್ನಾಟಕ ರಾಜ್ಯ ಮೊದಲನೇ ಸ್ಥಾನದಲ್ಲಿದೆ. ಇದಕ್ಕೆ ದಕ್ಷತೆ, ಸಾಮರ್ಥ್ಯ, ತರಬೇತಿ, ನೇಮಕಾತಿಯಲ್ಲಿ ಪಾರದರ್ಶಕತೆ ಇರುವುದೇ ಕಾರಣ ಎಂದು ಬೆಂಗಳೂರಿನ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ತರಬೇತಿ) ಅಲೋಕ ಕುಮಾರ್‌ ಹೇಳಿದ್ದಾರೆ.

- ಸ್ನೇಹ ಸಂಗಮ ಸಮಾರಂಭ ಉದ್ಘಾಟಿಸಿ ಪೊಲೀಸ್ ಅಧಿಕಾರಿ ಅಲೋಕ ಕುಮಾರ್‌

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಪೊಲೀಸ್ ವ್ಯವಸ್ಥೆ, ನ್ಯಾಯ ವಿತರಣೆ, ಜೈಲುಗಳ ಆಡಳಿತ ಹಾಗೂ ನಿರ್ವಹಣೆಯಲ್ಲಿ ದೇಶದಲ್ಲೇ ಕರ್ನಾಟಕ ರಾಜ್ಯ ಮೊದಲನೇ ಸ್ಥಾನದಲ್ಲಿದೆ. ಇದಕ್ಕೆ ದಕ್ಷತೆ, ಸಾಮರ್ಥ್ಯ, ತರಬೇತಿ, ನೇಮಕಾತಿಯಲ್ಲಿ ಪಾರದರ್ಶಕತೆ ಇರುವುದೇ ಕಾರಣ ಎಂದು ಬೆಂಗಳೂರಿನ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ತರಬೇತಿ) ಅಲೋಕ ಕುಮಾರ್‌ ಹೇಳಿದರು.

ನಗರದ ಕಮ್ಮವಾರಿ ಸಂಘದಲ್ಲಿ 2005ನೇ ಸಾಲಿನ ಪೊಲೀಸ್ ಸ್ನೇಹ ಬಳಗದಿಂದ ಹಮ್ಮಿಕೊಂಡಿದ್ದ ಸ್ನೇಹ ಸಂಗಮ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಇಡೀ ದೇಶದಲ್ಲೇ ಪೊಲೀಸ್, ನ್ಯಾಯ ವಿತರಣೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಇದು ನಾವೆಲ್ಲರೂ ಹೆಮ್ಮೆ, ಅಭಿಮಾನ ಪಡಬೇಕಾದ ಸಂಗತಿ ಎಂದರು.

ಭಾರತ ನ್ಯಾಯ ವರದಿಯಲ್ಲಿ ಕರ್ನಾಟಕವು ಪೊಲೀಸ್, ನ್ಯಾಯ ವಿತರಣೆಯಲ್ಲಿ ಮುಂಚೂಣಿ ರಾಜ್ಯವಾಗಿದೆ. ಇತರೆ ರಾಜ್ಯಗಳು ಅಪರಾಧ ನಿಯಂತ್ರಣ, ನ್ಯಾಯ ವಿತರಣೆಯಲ್ಲಿ ಹಿಂದುಳಿದಿವೆ. ಆದರೆ, ನ್ಯಾಯ, ಪೊಲೀಸ್ ವ್ಯವಸ್ಥೆ, ಕಾರಾಗೃಹಗಳ ನಿರ್ವಹಣೆ, ನ್ಯಾಯಾಂಗ ಹಾಗೂ ಕಾನೂನು ನೆರವಿನ ಅಂಶಗಳನ್ನು ಆದರಿಸಿದ ಭಾರತದ ನ್ಯಾಯ ವರದಿ ಕರ್ನಾಟಕಕ್ಕೆ ಮೊದಲ ಸ್ಥಾನ ನೀಡಿದ್ದು ಖುಷಿಯ ಸಂಗತಿ ಎಂದರು.

ದಾವಣಗೆರೆಯಲ್ಲೂ ನಾನು ಜಿಲ್ಲಾ ಪೊಲೀಸ್ ಅಧೀಕ್ಷಕನಾಗಿ ಕೆಲಸ ಮಾಡಿದ್ದೇನೆ. ಅದೇ ದಕ್ಷತೆ, ಸಾಮರ್ಥ್ಯ ಈಗಲೂ ನಿಮ್ಮೆಲ್ಲರಲ್ಲಿದೆ. ಪೊಲೀಸ್ ಇಲಾಖೆ ನೇಮಕಾತಿ, ತರಬೇತಿಯಲ್ಲಿ ಪಾರದರ್ಶಕತೆ ಇದ್ದರೆ ಪೊಲೀಸ್ ವ್ಯವಸ್ಥೆ ಉತ್ತಮವಾಗಿ ಇರುತ್ತದೆ ಎಂಬುದಕ್ಕೆ ರಾಷ್ಟ್ರಮಟ್ಟದಲ್ಲಿ ನಮ್ಮ ಪೊಲೀಸ್ ವ್ಯವಸ್ಥೆ, ನ್ಯಾಯ ವಿತರಣೆಯಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿರುವುದೇ ಸಾಕ್ಷಿ ಎಂದು ತಿಳಿಸಿದರು.

ಪೂರ್ವ ವಲಯದ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ.ಸಂತೋಷ್ ಸೇರಿದಂತೆ ಅಧಿಕಾರಿ, ಸಿಬ್ಬಂದಿ, ವಿಶೇಷವಾಗಿ 2005ನೇ ಬ್ಯಾಚ್ ಸಿಬ್ಬಂದಿ, ಕುಟುಂಬ ವರ್ಗದವರು, ಸಾರ್ವಜನಿಕರು, ಸಂಘ-ಸಂಸ್ಥೆಗಳು, ಎಡಿಜಿಪಿ ಅಲೋಕಕುಮಾರ ಆತ್ಮೀಯರು, ಹಿತೈಷಿಗಳು, ಸಂಘ-ಸಂಸ್ಥೆ, ಸಂಘಟನೆಗಳ ಮುಖಂಡರು ಹಾಜರಿದ್ದರು.

- - -

(ಕೋಟ್‌) ಪೊಲೀಸ್ ಕುಟುಂಬಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಬೇಕು. ಐಎಎಸ್, ಐಪಿಎಸ್‌ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಐಎಎಸ್‌, ಐಪಿಎಸ್‌ ಬ್ರಹ್ಮವಿದ್ಯೆಯಲ್ಲ. ಮಕ್ಕಳ ಪ್ರತಿಭೆ, ಆಸಕ್ತಿ, ಗುರುತಿಸಿ, ಪ್ರೋತ್ಸಾಹಿಸಿದರೆ ನಿಮ್ಮ ಮಕ್ಕಳೂ ಉನ್ನತ ಹುದ್ದೆ ಅಲಂಕರಿಸುತ್ತಾರೆ

- ಅಲೋಕ ಕುಮಾರ್‌, ಎಡಿಜಿಪಿ, ಬೆಂಗಳೂರು

- - -

-16ಕೆಡಿವಿಜಿ8.ಜೆಪಿಜಿ:

ದಾವಣಗೆರೆಯಲ್ಲಿ ಬುಧವಾರ ಜಿಲ್ಲಾ ಪೊಲೀಸ್ ಇಲಾಖೆಯ 2005ನೇ ಬ್ಯಾಚ್‌ ಸಿಬ್ಬಂದಿಯ ಸ್ನೇಹ ಸಂಗಮ ಕಾರ್ಯಕ್ರಮವನ್ನು ಎಡಿಜಿಪಿ (ತರಬೇತಿ) ಅಲೋಕ ಕುಮಾರ್‌ ಉದ್ಘಾಟಿಸಿದರು.