ಸಾರಾಂಶ
ಅರೆ ವೈದ್ಯಕೀಯ ಸಿಬ್ಬಂದಿಯನ್ನು ತಯಾರು ಮಾಡುವ ಅರೆ ವೈದ್ಯಕೀಯ ಮಂಡಳಿಯು ಪ್ರವೇಶ ಪ್ರಕ್ರಿಯೆಯಿಂದ ಹಿಡಿದು ಪರೀಕ್ಷೆ, ಅಂಕಪಟ್ಟಿ ಮುದ್ರಣವರೆಗೂ ಯಾವೊಂದು ಚಟುವಟಿಕೆಯನ್ನೂ ಶೈಕ್ಷಣಿಕ ವೇಳಾಪಟ್ಟಿಯಂತೆ ನಿರ್ವಹಿಸದೆ ಕೆಲ ವರ್ಷಗಳಿಂದ ಆಮೆಗತಿ ಅನುಸರಿಸುತ್ತಿದೆ ಎಂಬ ಆರೋಪ
ಲಿಂಗರಾಜು ಕೋರಾ
ಬೆಂಗಳೂರು : ಕೊರೋನಾದಂತಹ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಶ್ರಮಿಸಿದವರಲ್ಲಿ ಅರೆ ವೈದ್ಯಕೀಯ ಸಿಬ್ಬಂದಿ ಪಾತ್ರ ಮಹತ್ವದ್ದು. ಅಂತಹ ಸಿಬ್ಬಂದಿಯನ್ನು ತಯಾರು ಮಾಡುವ ಅರೆ ವೈದ್ಯಕೀಯ ಮಂಡಳಿಯು ಪ್ರವೇಶ ಪ್ರಕ್ರಿಯೆಯಿಂದ ಹಿಡಿದು ಪರೀಕ್ಷೆ, ಅಂಕಪಟ್ಟಿ ಮುದ್ರಣವರೆಗೂ ಯಾವೊಂದು ಚಟುವಟಿಕೆಯನ್ನೂ ಶೈಕ್ಷಣಿಕ ವೇಳಾಪಟ್ಟಿಯಂತೆ ನಿರ್ವಹಿಸದೆ ಕೆಲ ವರ್ಷಗಳಿಂದ ಆಮೆಗತಿ ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಪ್ರಮುಖವಾಗಿ ಪ್ಯಾರಾ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಪ್ರವೇಶ ಅನುಮೋದನೆಗೆ ಮಂಡಳಿ ಸುಮಾರು ಆರು ತಿಂಗಳಿಗೂ ಹೆಚ್ಚಿನ ಕಾಲ ತೆಗೆದುಕೊಳ್ಳುತ್ತಿದೆ. 2024-25ನೇ ಶೈಕ್ಷಣಿಕ ಸಾಲಿನ ಪ್ರವೇಶ ಪಡೆದ ವಿದ್ಯಾರ್ಥಿಗಳ ಮಾಹಿತಿಯನ್ನು ವೇಳಾಪಟ್ಟಿಯಂತೆ ಫೆಬ್ರವರಿಯಲ್ಲೇ ದಾಖಲೆಗಳ ಸಹಿತ ಕಾಲೇಜುಗಳು ಸಲ್ಲಿಸಿದ್ದರೂ ಮಂಡಳಿ ಮಾತ್ರ ಅನೇಕ ವಿದ್ಯಾರ್ಥಿಗಳಿಗೆ ಇನ್ನೂ ಪ್ರವೇಶ ಅನುಮೋದನೆ ನೀಡಿ ನೋಂದಣಿ ಸಂಖ್ಯೆಯನ್ನೇ ನೀಡಿಲ್ಲ. ಪರೀಕ್ಷೆ ಸಮೀಪಿಸಿದರೂ ನೋಂದಣಿ ಖಾತರಿಪಡಿಸದ ಮಂಡಳಿ ಕ್ರಮಕ್ಕೆ ಕಾಲೇಜುಗಳ ಆಡಳಿತ ಮಂಡಳಿಗಳ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ನೋಂದಣಿ ಸಂಖ್ಯೆ ನೀಡಿಕೆ ವಿಳಂಬದಿಂದ ಪರಿಶಿಷ್ಟ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ವಂಚಿತರಾಗುವ ಆತಂಕ ಎದುರಿಸುತ್ತಿದ್ದಾರೆ.
ಇನ್ನು, ಮಂಡಳಿಯೇ ಪ್ರಕಟಿಸಿರುವ 2025-26ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿ ಪ್ರಕಾರ, ಯಾವುದೇ ಪ್ಯಾರಾ ಮೆಡಿಕಲ್ ಕೋರ್ಸು ಪ್ರವೇಶಕ್ಕೆ ಸೆ.30 ಕೊನೆಯ ದಿನವಾಗಿದ್ದು, ಅ.1ರಿಂದ ತರಗತಿಗಳು ಆರಂಭವಾಗಬೇಕಿತ್ತು. ಆದರೆ ಇನ್ನೂ ಸರ್ಕಾರಿ ಕಾಲೇಜು, ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಸೀಟುಗಳ ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಕೌನ್ಸೆಲಿಂಗ್ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿದೆ.
ಪರೀಕ್ಷೆಯೂ ವಿಳಂಬ:
ಪ್ರತಿ ವರ್ಷ ನವೆಂಬರ್‌ನಲ್ಲೇ ವಾರ್ಷಿಕ ಪರೀಕ್ಷೆಗಳು ನಡೆಯಬೇಕು. ಆದರೆ ಡಿಸೆಂಬರ್, ಜನವರಿವರೆಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದರಿಂದ ಹಾಸ್ಟೆಲ್ ಪ್ರವೇಶಕ್ಕೂ ತೊಂದರೆಯಾಗುತ್ತಿದೆ ಎಂಬುದು ವಿದ್ಯಾರ್ಥಿಗಳ ಅಳಲು. ಕಳೆದ 2024 ನವಂಬರ್ ತಿಂಗಳಿನಲ್ಲಿ ನಡೆದ ವಾರ್ಷಿಕ ಪರೀಕ್ಷೆಯ ಮೊದಲ ಮತ್ತು ಎರಡನೇ ವರ್ಷದ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಹತ್ತು ತಿಂಗಳಾದರೂ ನೀಡಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಮಂಡಳಿ ಮೂಲಗಳ ಪ್ರಕಾರ, ಫಲಿತಾಂಶ ಪ್ರಕಟಣೆಗೆ ಹಲವು ವರ್ಷಗಳ ಹಳೆಯ ತಂತ್ರಾಂಶವನ್ನೇ ಮುಂದುವರೆಸಿರುವುದರಿಂದ ಫಲಿತಾಂಶದಲ್ಲಿ ಲೋಪಗಳಾಗುತ್ತಿವೆ. 2024ರ ನವೆಂಬರ್ ಫಲಿತಾಂಶದಲ್ಲಿ ಇದೇ ಕಾರಣಕ್ಕೆ ಫಲಿತಾಂಶ ಅದಲು ಬದಲು, ಗರಿಷ್ಠ ಅಂಕಗಳಿಗಿಂತ ಹೆಚ್ಚು ಅಂಕ ನೀಡಿಕೆಯಂತಹ ಭಾರೀ ಲೋಪಗಳಾದವು. ಇದರಿಂದ ಪರೀಕ್ಷೆ ಫಲಿತಾಂಶವನ್ನು ಹಿಂಪಡೆದು ಎರಡನೇ ಬಾರಿ ಫಲಿತಾಂಶ ಪ್ರಕಟಿಸಲಾಯಿತು.
ಅಧಿಕಾರಿಗಳು ಹೇಳೋದೇನು?
ಮಂಡಳಿಯ ಉನ್ನತ ಅಧಿಕಾರಿ ನೀಡಿರುವ ವಿವರಣೆ ಪ್ರಕಾರ, ದಾಖಲೆಗಳ ಕೊರತೆ ಇರುವ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ನೀಡಿಕೆಯಲ್ಲಿ ವಿಳಂಬ ಆಗಿರಬಹುದು. ದಾಖಲೆಗಳನ್ನು ಸಲ್ಲಿಸದಿರುವುದು ಕಾಲೇಜುಗಳ ಲೋಪ. ಅದೇ ರೀತಿ, 2024ರ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿ ಮೊದಲ ಮತ್ತು 2ನೇ ವರ್ಷದ ಅಂಕಪಟ್ಟಿಗಳನ್ನು ಕಳೆದ ವಾರವಷ್ಟೇ ಕಾಲೇಜುಗಳಿಗೆ ಕಳುಹಿಸಲಾಗಿದೆ. 3ನೇ ವರ್ಷದ ಅಂಕಪಟ್ಟಿಗಳನ್ನು ಕೆಲ ತಿಂಗಳ ಹಿಂದೆಯೇ ಕಳುಹಿಸಲಾಗಿದೆ. ನವೆಂಬರ್‌ನಲ್ಲೇ ಪ್ರತಿ ವರ್ಷ ಪರೀಕ್ಷೆ ನಡೆಸಲು ಮಂಡಳಿ ಸಿದ್ಧವಿದೆ. ಆದರೆ, ಪಾರದರ್ಶಕತೆಗಾಗಿ ವೈದ್ಯಕೀಯ ಕಾಲೇಜುಗಳಲ್ಲೇ ಪರೀಕ್ಷೆ ನಡೆಸುವುದು ಹಾಗೂ ಇದೇ ಅವಧಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಪರೀಕ್ಷೆಗಳು ನಡೆಯುವುದು, ಉತ್ತಮ ಪರೀಕ್ಷಾ ಕೇಂದ್ರಗಳ ಕೊರತೆಯಿಂದ ಪರೀಕ್ಷೆ ತಡವಾಗುತ್ತಿದೆ ಎಂದು ಸಮರ್ಥನೆ ನೀಡಿದ್ದಾರೆ.
ಸೋಮವಾರವಷ್ಟೇ ಅರೆ ವೈದ್ಯಕೀಯ ಮಂಡಳಿ ಅಧಿಕಾರಿಗಳ ಸಭೆ ನಡೆಸಿದ್ದು ಶೈಕ್ಷಣಿಕ ವೇಳಾಪಟ್ಟಿ ಅನುಸಾರ ಚುಟವಟಿಕೆ ನಡೆಸುತ್ತಿರುವ ಸಂಬಂಧ ಪ್ರತೀ ದಿನವೂ ಮಾಹಿತಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
-ಡಾ.ಸುಜಾತಾ ರಾಥೋಡ್, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ
;Resize=(128,128))
;Resize=(128,128))
;Resize=(128,128))