ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ನಾಡ ಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಇಂದು ವಾಣಿಜ್ಯ ಕೇಂದ್ರವಾಗಿ ವಹಿವಾಟಿನಲ್ಲಿ ದೇಶದಲ್ಲೇ ಸಾಕಷ್ಟು ಹೆಸರು ಮಾಡಿದೆ ಎಂದು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ 517ನೇ ಕೆಂಪೇಗೌಡ ಜಯಂತಿಯಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಬೆಂಗಳೂರು ರಾಜ್ಯದ ರಾಜಧಾನಿ ಜೊತೆಗೆ ಐಟಿ-ಬಿಟಿ ಅಭಿವೃದ್ಧಿಯಾಗಿ ಆಮುದು, ರಪ್ತು ಮಾಡುವ ತಯಾರಿಕಾ ಕಾರ್ಖಾನೆಗಳು ಬೆಳೆದು ರಾಜ್ಯಕ್ಕೆ ಸುಮಾರು 65% ತೆರಿಗೆ ಸೇರಿದಂತೆ ಇತರೆ ಆದಾಯ ಬರುತ್ತಿದೆ ಎಂದರು.

ನಾಡಪ್ರಭು ಕೆಂಪೇಗೌಡರ ಮಾರ್ಗದರ್ಶನಗಳನ್ನು ನಾವು ಅಳವಡಿಸಿಕೊಂಡು ರಾಜ್ಯವನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಅಲ್ಲದೇ, ಶ್ರೀರಂಗಪಟ್ಟಣದಲ್ಲಿ ಕೆಂಪೇಗೌಡರ ಪುತ್ಥಳಿಯನ್ನು ಪ್ರಸ್ಥಾಪಿಸುವುದಾಗಿ ಹೇಳಲಾಗುತ್ತಿತ್ತು. ಆದರೆ, ಕಾರಣಾಂತರದಿಂದ ತಡವಾಗಿದೆ. ಇನ್ನು ಮೂರು ತಿಂಗಳ ಒಳಗಾಗಿ ಕೆಂಪೇಗೌಡರ ವೃತ್ತದಲ್ಲಿ ಪುತ್ಥಳಿ ಪ್ರತಿಸ್ಥಾಪಿಸಲಾಗುತ್ತದೆ ಎಂದರು.

ತಹಸೀಲ್ದಾರ್ ಚೇತನ ಯಾದವ್ ಮಾತನಾಡಿ, ಕೆಂಪೇಗೌಡರ ಆಡಳಿತವನ್ನು ಅರಿತು ಸರ್ಕಾರಿ ಅಧಿಕಾರಿಗಳು ಸೇರಿದಂತೆ ಮುಂದಿನ ಪೀಳಿಗೆಯ ಯುವಕರು ಆದರ್ಶಗಳ ಪಾಲಿಸಬೇಕು ಎಂದರು.


ಈ ವೇಳೆ ತಾ.ಪಂ ಇಒ ಚಂದ್ರು, ಪುರಸಭೆ ಮಾಜಿ ಅಧ್ಯಕ್ಷ ಎಂ.ಎಲ್.ದಿನೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜು, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೂಡಲಕುಪ್ಪೆ ರವಿಶಂಕರ್ ಸೇರಿದಂತೆ ಒಕ್ಕಲಿಗ ಸಮಾಜದ ಮುಖಂಡರು, ಇತರೆ ಸಂಘಟನೆಗಳ ಮುಖಂಡರು , ಅಧಿಕಾರಿ ಸಿಬ್ಬಂದಿ ಹಾಜರಿದ್ದರು. ನಾಡ ಪ್ರಭು ಕೆಂಪೇಗೌಡ ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.