ಸಾರಾಂಶ
ಹೊನ್ನಾವರ: ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರವನ್ನು ಆರಂಭಿಸಿದ್ದಾರೆ.
ಕರ್ನಾಟಕ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಕರೆಯ ಮೇರೆಗೆ ತಹಸೀಲ್ದಾರ್ ಕಚೇರಿ ಎದುರು ಸೋಮವಾರದಿಂದ ೨ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಪ್ರಾರಂಭಿಸಿದ್ದಾರೆ.ಹೋರಾಟದಿಂದ ಕಂದಾಯ ಇಲಾಖೆಯ ಬಹುತೇಕ ಕಾರ್ಯಗಳು ಸ್ಥಗಿತಗೊಂಡಿದೆ. ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿನ ಬಹುತೇಕ ಕೌಂಟರ್‌ಗಳು ಬಂದ್ ಆಗಿದೆ. ಇದರಿಂದ ದೂರದ ಹಳ್ಳಿಗಳಿಂದ ಬಂದ ಜನರು ತಮ್ಮ ಕೆಲಸ ಮಾಡಿಸಿಕೊಳ್ಳಲು ಆಗದೆ ಬರಿಗೈಯಲ್ಲಿ ವಾಪಸ್ ಹೋಗುವಂತಾಗಿದೆ.
ಭರವಸೆ ಈಡೇರಿಸದ ಸರ್ಕಾರ: ಈ ಹಿಂದೆ ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರ ನಡೆಸಿದಾಗ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ಎಲ್ಲ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆಯನ್ನು ನೀಡಿದ್ದರು. ಸಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ನಡೆಸಿದ್ದ ಮೊದಲ ಮುಷ್ಕರದಿಂದ ಯಾವ ಲಾಭವೂ ಆಗಲಿಲ್ಲ. ಈತನಕ ಬೇಡಿಕೆ ಈಡೇರಿಸದ ಕಾರಣ ಈಗ ಮತ್ತೆ ಮುಷ್ಕರವನ್ನು ಆರಂಭಿಸಿದ್ದಾರೆ. ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೆ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿಯನ್ನು ನಿಗದಿಪಡಿಸಿ ಆದೇಶ ನೀಡಬೇಕು. ಸೇವಾ ವಿಷಯಗಳಿಗೆ ಸಂಬಂಧಿಸಿ ಸೌಲಭ್ಯ ಕಲ್ಪಿಸಬೇಕು. ಅಂತರ್ ಜಿಲ್ಲಾ ವರ್ಗಾವಣೆಯನ್ನು ಮರುಸ್ಥಾಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಸಂಘದ ತಾಲೂಕು ಅಧ್ಯಕ್ಷೆ ವೈಭವಿ ಭಂಡಾರಿ, ಪ್ರಧಾನ ಕಾರ್ಯದರ್ಶಿ ಸುನೀಲಕುಮಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಕ್ಷಿತ ಪೂಜಾರಿ, ತಾಲೂಕು ಗೌರವಾಧ್ಯಕ್ಷ ಮಹೇಂದ್ರ ಗೌಡ, ಜಿಲ್ಲಾ ಕಾರ್ಯಕಾರಿ ಸದಸ್ಯ ಕರಿಯಪ್ಪ ಕೆ., ಸಂಘಟನಾ ಕಾರ್ಯದರ್ಶಿ ನಿಸರ್ಗ ಮತ್ತಿತರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.೨೦ರಿಂದ ದಾಂಡೇಲಿ ಪ್ರೀಮಿಯರ್ ಲೀಗ್ ಕ್ರಿಕೆಟ್
ದಾಂಡೇಲಿ: ದಾಂಡೇಲಿ ಪ್ರೀಮಿಯರ್ ಲೀಗ್ ಆಶ್ರಯದಡಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಫೆ. ೨೦ರಿಂದ ಫೆ. ೨೩ರ ವರೆಗೆ ನಗರದ ಡಿಎಫ್‌ಎ ಮೈದಾನದಲ್ಲಿ ನಡೆಯಲಿದೆ ಎಂದು ದಾಂಡೇಲಿ ಪ್ರೀಮಿಯರ ಲೀಗ್‌ನ ಅಧ್ಯಕ್ಷ ವಿಷ್ಣುಮೂರ್ತಿ ರಾವ್ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾಂಡೇಲಿ ಪ್ರೀಮಿಯರ್ ಲೀಗ್ ಕಳೆದ ಮೂರು ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಕಳೆದ ವರ್ಷ ಮೊದಲು ಬಾರಿಗೆ ಹೊನಲು ಬೆಳಕಿನ ಪಂದ್ಯಾವಳಿ ಆಯೋಜಿಸಲಾಗಿದ್ದು, ಈ ವರ್ಷವೂ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದರು.ಫೆ. ೨೦ರಂದು ಕ್ರಿಕೆಟ್ ಪಂದ್ಯಾವಳಿಯ ವಿಧ್ಯುಕ್ತ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನೆಯ ದಿನ ವಿಶೇಷ ಪ್ರದರ್ಶನ ಪಂದ್ಯ ಹೊನಲು ಬೆಳಕಿನಲ್ಲಿ ನಡೆಯಲಿದೆ. ಫೆ. ೨೧ರಿಂದ ಫೆ. ೨೩ರ ವರೆಗೆ ಒಟ್ಟು ೩ ದಿನ ಕ್ರಿಕೆಟ್ ಹಬ್ಬ ನಡೆಯಲಿದ್ದು, ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.ಪ್ರಥಮ ಸ್ಥಾನ ಪಡೆದ ತಂಡಕ್ಕೆ ₹2 ಲಕ್ಷ ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ₹1 ಲಕ್ಷದ ಬಹುಮಾನ ಹಾಗೂ ಫಲಕಗಳನ್ನು ನೀಡಲಾಗುವುದು ಎಂದರು.
ದಾಂಡೇಲಿ ಪ್ರೀಮಿಯರ್ ಲೀಗ್‌ನ ಉಪಾಧ್ಯಕ್ಷ ನಿಥಿನ್ ಕಾಮತ ಮಾತನಾಡಿದರು. ರಮೇಶ ನಾಯ್ಕ, ನರಸಿಂಗದಾಸ ರಾಟಿ, ಶಮನ ಅಬ್ದುಲ್ ಉಪಸ್ಥಿತರಿದ್ದರು.