ಮಲೆನಾಡು ಕೇಂದ್ರ ಸ್ಥಾನವಾದ ಶಿವಮೊಗ್ಗದಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಕಳೆದ 13 ದಿನಗಳಿಂದ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪಕ್ಕೆ ತಿರುಗುತ್ತಿದ್ದು, ಶನಿವಾರ ಬೃಹತ್ ಪ್ರತಿಭಟನೆ ನಡೆಯಲಿದೆ.

ಗೋಪಾಲ್ ಯಡಗೆರೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಲೆನಾಡು ಕೇಂದ್ರ ಸ್ಥಾನವಾದ ಶಿವಮೊಗ್ಗದಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಕಳೆದ 13 ದಿನಗಳಿಂದ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪಕ್ಕೆ ತಿರುಗುತ್ತಿದ್ದು, ಶನಿವಾರ ಬೃಹತ್ ಪ್ರತಿಭಟನೆ ನಡೆಯಲಿದೆ.

ಇದೊಂದು ಪಕ್ಷಾತೀತ ಹೋರಾಟವಾಗಿ ಮುನ್ನಡೆಯುತ್ತಿದ್ದು, ಜಿಲ್ಲಾ ವಕೀಲರ ಸಂಘ ಇದರ ನೇತೃತ್ವ ವಹಿಸಿಕೊಂಡಿದ್ದರೂ, ಜಿಲ್ಲೆಯ ಬಹುತೇಕ ಎಲ್ಲ ಸಂಘಟನೆಗಳು, ಪತ್ರಕರ್ತ ಸಂಘಟನೆಗಳು, ಮಠಾಧೀಶರು, ಸಾಮಾನ್ಯ ಜನರು ಕೂಡ ಇದನ್ನು ಬೆಂಬಲಿಸಿ ಹೋರಾಟದಲ್ಲಿ ಸರದಿ ಮೇಲೆ ಭಾಗಿಯಾಗುತ್ತಿದ್ದಾರೆ. ಈವರೆಗೆ ಈ ಹೋರಾಟ ಕೇವಲ ಧರಣಿ ಪ್ರತಿಭಟನೆಗೆ ಸೀಮಿತವಾಗಿದ್ದು, ಮುಂದಿನ ದಿನಗಳಲ್ಲಿ ಇದರ ಸ್ವರೂಪ ಬೇರೆಯದೇ ಆಗಿರುವ ಸಾಧ್ಯತೆ ಇದೆ.

ಗುಲ್ಬರ್ಗಾ ಸಂಚಾರಿ ಪೀಠಕ್ಕೆ ನಡೆದ ಹೋರಾಟದ ಮಾದರಿಯಲ್ಲಿಯೇ ಈ ಹೋರಾಟ ಕೂಡ ತಿರುವು ಪಡೆಯುವ ಸಾಧ್ಯತೆ ಇದೆ.

ಈ ಹೋರಾಟ ಆರಂಭದ ಕಿಡಿ ಹೊತ್ತಿದ್ದು, ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಅಲ್ಲಿನ ವಕೀಲರು ಪತ್ರ ಬರೆದಿದ್ದು, ಇದಕ್ಕೆ ಪೂರಕ ಸ್ಪಂದನೆ ಸಿಕ್ಕಿದೆ ಎಂಬ ಮಾಹಿತಿಯಿಂದ. ಅಲ್ಲದೆ ಈ ಪೀಠದ ವ್ಯಾಪ್ತಿಗೆ ಶಿವಮೊಗ್ಗವನ್ನು ಕೂಡ ಸೇರಿಸಲಾಗುತ್ತಿದೆ ಎಂಬ ಮಾಹಿತಿ ಕೇಳಿ ಬಂದಿತು. ಇದು ಇಲ್ಲಿನ ಜನರನ್ನು, ಸಂಘಟನೆಗಳನ್ನು ಕೆರಳಿಸಿತು. ಇದು ಕೇವಲ ಭಾವನಾತ್ಮಕ ಹೋರಾಟವಲ್ಲ, ಬದಲಾಗಿ ತಾಂತ್ರಿಕ ಅಂಶಗಳು ಕೂಡ ಈ ಹೋರಾಟಕ್ಕೆ ಪೂರಕವಾಗಿ ಬೆಂಬಲ ನೀಡುವಂತಿದೆ.

ಮುಖ್ಯವಾಗಿ ಈ ಹೋರಾಟಕ್ಕೆ ಈ ಮಟ್ಟಿನ ಬೆಂಬಲ ದೊರಕಲು ಕಾರಣ ಸಾಮಾನ್ಯರಿಗೆ ಇದು ಲಾಭವಾಗುತ್ತದೆ ಎಂಬುದರಿಂದ. ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ನ್ಯಾಯದಾನ ಎಂಬುದೇ ಕನಸಿನ ಗಂಟು ಎಂಬಂತಹ ಸ್ಥಿತಿಯಲ್ಲಿ ಹೈಕೋರ್ಟ್ ಗೆ ಕೇಸನ್ನು ಒಯ್ಯಲು ಬೆಂಗಳೂರಿಗೆ ಅಲೆಯುವ, ದುಬಾರಿ ವೆಚ್ಚವನ್ನು ಭರಿಸುವುದು ಸುಲಭವಲ್ಲ. ಆದರೆ ಈವರೆಗೆ ಇದು ಅನಿವಾರ್ಯವಾಗಿತ್ತು. ಆದರೆ ಪರಿಸ್ಥಿತಿ ಬದಲಾಗುತ್ತಿದೆ. ವ್ಯವಸ್ಥೆಗಳು ಮನೆ ಬಾಗಿಲಿಗೆ ಬರುತ್ತಿದೆ. ಇದೇ ರೀತಿ ನ್ಯಾಯದಾನ ಕೂಡ ಬಡವರ ಮನೆ ಬಾಗಿಲಿಗೆ ಬರಬೇಕೆಂಬ ಚಿಂತನೆ ಹುಟ್ಟಿಕೊಂಡ ಬಳಿಕ ಹೊಸ ಬೇಡಿಕೆಗಳು ಸಹಜವಾಗಿದೆ. ಹೀಗಾಗಿ ಅವಶ್ಯಕತೆ ಇರುವೆಡೆ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವುದು ಅತ್ಯಂತ ಮುಖ್ಯವಾಗಿದೆ. ಸಧ್ಯ ಬೆಂಗಳೂರಿಗೆ ರೈಲು, ಹೆದ್ದಾರಿ, ವಿಮಾನ ಸೇರಿದಂತೆ ಉತ್ತಮ ಸಂಪರ್ಕ ವ್ಯವಸ್ಥೆಗಳಿವೆ. ಆದರೆ ಮಂಗಳೂರು ಸಂಚಾರಿ ಪೀಠ ರಚಿಸಿ ಆ ವ್ಯಾಪ್ತಿಗೆ ಶಿವಮೊಗ್ಗವನ್ನು ಸೇರಿಸಿದರೆ ಈ ಭಾಗದ ಜನರಿಗೆ ಅದರಲ್ಲಿಯೂ ತೀರಾ ಗ್ರಾಮೀಣ ಪ್ರದೇಶದ ಜನರಿಗೆ ಹೋಗಿ ಬರುವುದು ಕಷ್ಟಕರವಾದ ಕೆಲಸ. ಜೊತೆಗೆ ಆರ್ಥಿಕ ಹೊರೆಯೂ ಜಾಸ್ತಿ.

ಮಲೆನಾಡು, ಮಧ್ಯ ಕರ್ನಾಟಕಕ್ಕೆ ಲಾಭ: ಶಿವಮೊಗ್ಗವನ್ನು ಕೇಂದ್ರವಾಗಿರಿಸಿಕೊಂಡು ಹೈಕೋರ್ಟ್ ಸಂಚಾರಿ ಪೀಠ ರಚನೆಯಾದರೆ ಶಿವಮೊಗ್ಗ ಮಾತ್ರವಲ್ಲದೆ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ, ಗದಗ ಸೇರಿದಂತೆ ಮಧ್ಯ ಕರ್ನಾಟಕ ಜಿಲ್ಲೆಗಳಿಗೆ ಮಾತ್ರವಲ್ಲ, ಉಡುಪಿ, ಮಂಗಳೂರು ಜಿಲ್ಲೆಗಳಿಗೂ ಲಾಭ ಖಂಡಿತ. ಮಲೆನಾಡು ಮತ್ತು ಮಧ್ಯ ಕರ್ನಾಟಕದ ಮೂರು ಜಿಲ್ಲೆಗಳ ಸುಮಾರು 82 ಲಕ್ಷ ಕಕ್ಷಿದಾರರು ಇದರ ಲಾಭ ಪಡೆಯಲಿದ್ದಾರೆ ಎಂದು ಒಂದು ಅಂದಾಜು.

ನಿಯಮಗಳ ಒಳಗೇ ಬೇಡಿಕೆಯಿದೆ: ದೇಶದ ಹಲವೆಡೆ ನ್ಯಾಯದಾನ ವ್ಯವಸ್ಥೆಯ ವಿಕೇಂದ್ರೀಕರಣ ದೃಷ್ಟಿಯಿಂದ ಸಂಚಾರಿ ಹೈಕೋರ್ಟ್ ಪೀಠ ರಚನೆಯಾಗಿದೆ. ಈ ದೃಷ್ಟಿಯಿಂದ ಹೈಕೋರ್ಟ್ ಪೀಠಗಳ ಸ್ಥಾಪನೆಗೆ ಜಸ್ವಂತ್ ಸಿಂಗ್ ಆಯೋಗ ನೀಡಿದ ವರದಿ ಕೂಡ ಪೂರಕವಾಗಿದೆ. ಆಯೋಗವು ಶಿಫಾರಸು ಮಾಡಿರುವ ದೂರ, ಪ್ರಕರಣಗಳ ಸಂಖ್ಯೆ ಹಾಗೂ ಭೌಗೋಳಿಕ ಹಿನ್ನೆಲೆಯ ಎಲ್ಲಾ ಮಾನದಂಡಗಳನ್ನು ಶಿವಮೊಗ್ಗ ಜಿಲ್ಲೆಯು ಪೂರೈಸುತ್ತದೆ ಎಂಬುದು ಇಲ್ಲಿ ಗಮನಾರ್ಹ.

2026ರ ಮೊದಲ ತ್ರೈಮಾಸಿಕದ ಮಾಹಿತಿಯಂತೆ ಪ್ರಮುಖವಾಗಿ ಮಧ್ಯ ಕರ್ನಾಟಕದ ಐದು ಜಿಲ್ಲೆಗಳಲ್ಲಿಯೇ ಸುಮಾರು 86 ಸಾವಿರ ಪ್ರಕರಣಗಳು ಬಾಕಿ ಇದೆ. ಈ ಭಾಗದಿಂದ ಸುಮಾರು 2800 ರಿಟ್‌ ಅರ್ಜಿಗಳು ಕೂಡ ಸಲ್ಲಿಕೆಯಾಗಿದೆ.

ಅಲ್ಲಿಗೆ ಸಿಕ್ಕಿದ್ದು ಇಲ್ಲಿಗೂ ಬರಲಿ: ರಾಜ್ಯದಲ್ಲಿ ಕೆಲ ದಶಕದ ಹಿಂದೆಯೇ ಉತ್ತರ ಕರ್ನಾಟಕದಲ್ಲಿ ಸಂಚಾರಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಹೋರಾಟ ನಡೆಯಿತು. ಇದರ ಫಲವಾಗಿ 2008ರಲ್ಲಿ ಧಾರವಾಡ ಮತ್ತು ಕಲ್ಬುರ್ಗಿಯಲ್ಲಿ ಸಂಚಾರಿ ಹೈಕೋರ್ಟ್‌ ಪೀಠ ಸ್ಥಾಪನೆಯಾಗಿ, 2013ರಲ್ಲಿ ಇದನ್ನು ಶಾಶ್ವತ ಪೀಠವಾಗಿ ಪರಿವರ್ತಿಸಲಾಯಿತು.

ಶಿವಮೊಗ್ಗದಲ್ಲಿ ಸಂಚಾರಿ ಹೈಕೋರ್ಟ್‌ ಪೀಠ ರಚನೆಗೆ ಬೇಕಾದ ಜಾಗದ ವ್ಯವಸ್ಥೆಯೂ ಇಲ್ಲಿ ಸಾಕಷ್ಟಿದೆ. ಸರ್ಕಾರಕ್ಕೆ ಸೇರಿದ ಹಳೇ ಕಟ್ಟಡಗಳು, ಜಾಗಗಳು ನಗರದ ಮಧ್ಯ ಭಾಗದಲ್ಲಿಯೇ ಇದೆ. ಇದನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ಹೋರಾಟಗಾರರು ಸಲಹೆ ನೀಡುತ್ತಾರೆ.

ಇಂದು ಬೃಹತ್‌ ಹೋರಾಟ

ಶಿವಮೊಗ್ಗದಲ್ಲಿ ಹೈಕೋರ್ಟ್‌ ಸಂಚಾರಿ ಪೀಠ ಸ್ಥಾಪನೆಗೆ ಒತ್ತಾಯಿಸಿ ಶನಿವಾರ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ಮತ್ತು ಸಭೆಯನ್ನು ಆಯೋಜಿಸಲಾಗಿದೆ. ಜಿಲ್ಲಾ ನ್ಯಾಯಾಲಯದ ಆವರಣದಿಂದ ಪ್ರತಿಭಟನಾ ಮೆರವಣಿಗೆ ಹೊರಟು, ನಗರದ ಪ್ರಮುಖ ಮಾರ್ಗಗಳ ಮೂಲಕ ಹಾದು ಪುನಃ ನ್ಯಾಯಾಲಯದ ಆವರಣಕ್ಕೆ ಮರಳಿ ಬರಲಿದೆ. ಇಲ್ಲಿ ಸಭೆ ನಡೆಯಲಿದೆ.