ಕನ್ನಡಪ್ರಭ ವಾರ್ತೆ ಅರಸೀಕೆರೆ

ಕ್ಷೇತ್ರದ ರಾಜಕೀಯ ಪರಿಸ್ಥಿತಿ, ಗ್ರಾಮೀಣ ಜನರ ಸಮಸ್ಯೆಗಳು ಹಾಗೂ ಸಂಘಟನಾ ರಾಜಕಾರಣದ ಅನುಭವ ಹೊಂದಿರುವ ನಾಯಕ ಎನ್.ಆರ್. ಸಂತೋಷ್ ಅವರ ಬಗ್ಗೆ ಟೀಕೆ ಮಾಡುವ ನೈತಿಕ ಹಕ್ಕು ಗೀಜಿಹಳ್ಳಿ ಧರ್ಮಶೇಖರ್ ಅವರಿಗೆ ಇಲ್ಲ ಎಂದು ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಅಜ್ಜಪ್ಪ ತಿರುಗೇಟು ನೀಡಿದರು.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಬಳಸಿಕೊಂಡು ಕೆಲವರು ನಾಯಕರ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ಎನ್.ಆರ್. ಸಂತೋಷ್ ಅವರು ಕ್ಷೇತ್ರದ ಜನರ ಪರ ಹೋರಾಟ ನಡೆಸುತ್ತಿರುವ ನಾಯಕನಾಗಿದ್ದು, ಅವರ ಕಾರ್ಯಶೈಲಿಯನ್ನು ಮೆಚ್ಚಿಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾವಿರಾರು ಮತದಾರರು ಬೆಂಬಲ ವ್ಯಕ್ತಪಡಿಸಿದ್ದರು ಎಂದು ಹೇಳಿದರು. ಸೋಲಿನ ನಂತರವೂ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿರುವ ಸಂತೋಷ್ ಅವರು ಅಕ್ರಮಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಇದರಿಂದ ಆತಂಕಗೊಂಡ ಕೆಲವರು ದುರುದ್ದೇಶಪೂರಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕ್ಷೇತ್ರದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದು, ಸೂಕ್ತ ಸಮಯದಲ್ಲಿ ಉತ್ತರ ನೀಡಲಿದ್ದಾರೆ ಎಂದು ಹೇಳಿದರು. ಹಣಬಲದ ರಾಜಕಾರಣ ಶಾಶ್ವತವಾಗುವುದಿಲ್ಲ. ಜನರ ವಿಶ್ವಾಸ ಮತ್ತು ಸೇವಾಭಾವನೆಯೇ ರಾಜಕೀಯದಲ್ಲಿ ಉಳಿಯುವ ಶಕ್ತಿ ಎಂಬುದನ್ನು ಕೆಲವರು ಅರಿತುಕೊಳ್ಳಬೇಕು ಎಂದು ಪರೋಕ್ಷವಾಗಿ ಟೀಕಿಸಿದರು.ಸುದ್ದಿಗೋಷ್ಠಿಯಲ್ಲಿ ಗೀಜಿಹಳ್ಳಿ ಮಲ್ಲಿಕಾರ್ಜುನ, ಯಳವಾರೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಲಿಂಗರಾಜು, ರಾಘವೇಂದ್ರ, ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.