The Struggle for Water: Farmers Emerge Victorious

-ರೈತರ ಹೋರಾಟಕ್ಕೆ ಮಣಿದ ಸರ್ಕಾರ । ಬಸವಸಾಗರದಿಂದ 3 ದಿನಗಳ ನೀರು ಬಿಡುಗಡೆಗೆ ಆದೇಶ

-14 ದಿನಗಳ ಧರಣಿ, ಬಂದ್‌ಗೆ ಜಯ: ಕಾಲುವೆಗೆ 1.5 ಟಿಎಂಸಿ ನೀರು

--

ಕನ್ನಡಪ್ರಭ ವಾರ್ತೆ ಯಾದಗಿರಿ

ನಾರಾಯಣಪುರದ ಬಸವ ಸಾಗರ ಜಲಾಶಯದಿಂದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ, ಕಳೆದ 14 ದಿನಗಳಿಂದ ಜಿಲ್ಲೆಯ ಶಹಾಪುರ, ಹುಣಸಗಿ ಭಾಗದಲ್ಲಿ ನಿರಂತರ ನಡೆಯುತ್ತಿದ್ದ ರೈತರ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ನಾರಾಯಣಪುರದ ಬಸವಸಾಗರ ಡ್ಯಾಂನಿಂದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಮೂರು ದಿನಗಳ ಕಾಲ 1.5 ಟಿಎಂಸಿ ನೀರು ಹರಿಸಲು ಸರ್ಕಾರ ಆದೇಶ ಹೊರಡಿಸಿದೆ.

ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿರುವ ಬಸವಸಾಗರ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸುವುದು ಸ್ಥಗಿತಗೊಂಡಿತ್ತು. ಇದರಿಂದ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ನೀರಿಗಾಗಿ ರೈತರು ನಿರಂತರ ಹೋರಾಟ ನಡೆಸಿದ್ದರು.

ರಾಜ್ಯ ಸರ್ಕಾರದ ಅಧಿಕೃತ ಆದೇಶದಂತೆ ನ.24, 25, 26 ರವರೆಗೆ ಮೂರು ದಿನಗಳ ಕಾಲ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಎಡದಂಡೆ ಕಾಲುವೆಗೆ 4,000 ಕ್ಯೂಸೆಕ್, ಬಲದಂಡೆ ಕಾಲುವೆಗೆ 1,000 ಕ್ಯೂಸೆಕ್ ಸೇರಿದಂತೆ ದಿನಕ್ಕೆ 5,000 ಕ್ಯೂಸೆಕ್ ನೀರನ್ನು ಲಘು ಬೆಳೆಗಳಿಗೆ ಹರಿಸಲಾಗುತ್ತಿದೆ. ಕೃಷ್ಣಾ ಭಾಗ್ಯ ಜಲ ನಿಗಮದ (ಕೆಬಿಜೆಎನ್‌ಎಲ್) ಅಧಿಕಾರಿಗಳು ಈಗಾಗಲೇ ಗೇಟ್ ಓಪನ್ ಮಾಡಿ, ನ.26ರವರೆಗೆ ದಿನನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸುತ್ತಿದ್ದಾರೆ. 14 ದಿನಗಳ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಭೀಮರಾಯನಗುಡಿಯ ಕೆಬಿಜೆಎನ್‌ಎಲ್ ಕಚೇರಿ ಮುಂಭಾಗದಲ್ಲಿ ಕಳೆದ 14 ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದರು. ರೈತ ಮುಖಂಡರುಗಳಾದ ಚೆನ್ನಪ್ಪ ಆನೆಗುಂದಿ, ಮಲ್ಲಿಕಾರ್ಜುನ ಸತ್ಯಂಪೇಟೆ, ಲಕ್ಷ್ಮಿಕಾಂತ ಪಾಟೀಲ, ಶರಣು ಮಂದಾರವಾಡ ಸೇರಿದಂತೆ ಅನೇಕ ರೈತ ಮುಖಂಡರುಗಳ ನೇತೃತ್ವದಲ್ಲಿ ವಿವಿಧ ರೈತಪರ ಸಂಘಟನೆಗಳು ಹೋರಾಟ ನಡೆಸಿದ್ದವು.

ಡಿ.31ರವರೆಗೂ ನೀರು ಹರಿಸಬೇಕು ಎಂದು ರೈತರು ಒತ್ತಾಯಿಸಿದ್ದರು. ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ, ಎಸ್ಪಿ ಪೃಥ್ವಿಕ್ ಶಂಕರ್ ಹಾಗೂ ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರುಗಳು ರೈತರ ಧರಣಿ ಕೈಬಿಡುವಂತೆ ಮನವೊಲೈಸಲು ಸತತ ಪ್ರಯತ್ನ ನಡೆಸಿದ್ದರು.

ವಿವಿಧ ಮಠಾಧೀಶರು ಸೇರಿದಂತೆ ರಾಜಕೀಯ ಮುಖಂಡರುಗಳು ಪಕ್ಷಾತೀತವಾಗಿ ರೈತರ ಹೋರಾಟಕ್ಕೆ ದನಿಗೂಡಿಸಿದ್ದರು.

ಸದ್ಯ, ಮೂರು ದಿನಗಳ ಕಾಲ ನೀರು ಹರಿಸಲು ಸರ್ಕಾರ ಆದೇಶ ಮಾಡಿ, ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ರೈತರು ಹೋರಾಟವನ್ನು ಕೈಬಿಟ್ಟಿದ್ದಾರೆ. ಹೋರಾಟನಿರತ ರೈತ ಮುಖಂಡ ಲಕ್ಷ್ಮೀಕಾಂತ ಪಾಟೀಲರಿಗೆ ಹೋರಾಟ ಸ್ಥಳದಲ್ಲಿಯೇ ಕ್ಷೀರಾಭಿಷೇಕ ಮಾಡಿ ರೈತರು ಸಂಭ್ರಮಿಸಿದರು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಚೆನ್ನಪ್ಪ ಆನೆಗುಂದಿ, ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಎಸ್. ಎಂ. ಸಾಗರ, ಮಲಕಣ್ಣ ಚಿಂತಿ, ಭೀಮರಾಯ ಪೂಜಾರಿ, ತಮ್ಮಣ್ಣ ಜಹಾಗೀದಾರ, ಭೀಮಣ್ಣ ದಫೇದಾರ, ಸುರೇಶ ಪರಸಾಪುರ ಮುಂತಾದವರು ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದರು.

..ಕೋಟ್‌..

ರೈತರ ಹೋರಾಟಕ್ಕೆ ಸರ್ಕಾರ ಮಣಿದಿದೆ ನಿಜ. ಆದರೆ, 80 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಮೆಣಸಿನಕಾಯಿ ಸೇರಿದಂತೆ ತೊಗರಿ ಬೆಳೆ ಉಳಿಸಿಕೊಳ್ಳಲು ನಾರಾಯಣಪುರ ಜಲಾಶಯದಿಂದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಡಿ.31 ರವರೆಗೆ 9 ಟಿಎಂಸಿ ನೀರನ್ನು ಕೇಳಿದ್ದೆವು. ದಿನಕ್ಕೆ 4 ಸಾವಿರ ಕ್ಯೂಸೆಕ್‌ನಂತೆ 12 ಸಾವಿರ ಕ್ಯೂಸೆಕ್‌ ನೀರು ಬಿಡಲಾಗುತ್ತಿದೆ. ಇದರಲ್ಲಿ ಇಂಡಿ ಶಾಖಾ ಕಾಲುವೆ ಸಹ ನೀರು ಪಡೆಯುತ್ತಿರುವುದರಿಂದ ನಮಗೆ ಇದರಲ್ಲಿ ಕಡಿತವಾದಂತಾಗಿದೆ.

- ಚೆನ್ನಪ್ಪ ಆನೆಗುಂದಿ, ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ, ಶಹಾಪುರ.

ಫೋಟೊ: 25ವೈಡಿಆರ್‌5

ನಾರಾಯಣಪುರದ ಬಸವಸಾಗರ ಡ್ಯಾಂನಿಂದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಮೂರು ದಿನಗಳ ಕಾಲ 1.5 ಟಿಎಂಸಿ ನೀರು ಹರಿಸಲು ಸರ್ಕಾರ ಆದೇಶಿಸಿದ್ದರಿಂದ, ಕಾಲುವೆಗಳಿಗೆ ನೀರು ಹರಿಸಲಾಯಿತು.

-

25ವೈಡಿಆರ್‌6 : ನಾರಾಯಣಪುರದ ಬಸವಸಾಗರ ಡ್ಯಾಂನಿಂದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಮೂರು ದಿನಗಳ ಕಾಲ 1.5 ಟಿಎಂಸಿ ನೀರು ಹರಿಸಲು ಸರ್ಕಾರ ಆದೇಶಿಸಿದ್ದರಿಂದ, ಜಲಾಶಯದ ಮೂಲಕ ಕಾಲುವೆಗಳಿಗೆ ನೀರು ಹರಿಸಲಾಯಿತು.

-

25ವೈಡಿಆರ್7: 14 ದಿನಗಳ ಕಾಲ ರೈತರ ಹೋರಾಟಕ್ಕೆ ಜಯ ಸಿಕ್ಕಂತಾಗಿ, ರೈತ ಮುಖಂಡ ಲಕ್ಷ್ಮೀಕಾಂತ ಪಾಟೀಲರಿಗೆ ಹೋರಾಟ ಸ್ಥಳದಲ್ಲಿಯೇ ಕ್ಷೀರಾಭಿಷೇಕ ಮಾಡಿ ರೈತರು ಸಂಭ್ರಮಿಸಿದರು.