The struggle of farmers of Shadipura village has been going on for 100 days.

ಒತ್ತುವರಿ ತೆರವುಗೊಳಿಸಿ

-----

-ಗೋರ್ ಸೇನೆ ರಾಷ್ಟ್ರೀಯ ಅಖಿಲ ಭಾರತ ಉಪಾಧ್ಯಕ್ಷ ಶಂಕರ್ ಪವಾರ್ ಮಾಹಿತಿ

----

ಕನ್ನಡಪ್ರಭ ವಾರ್ತೆ ಚಿಂಚೋಳಿತಾಲೂಕಿನ ಶಾದಿಪೂರ ಗ್ರಾಮದ ಸರ್ವೆ ನಂಬರ್ 126 ಮತ್ತು 127 ರ 188 ಎಕರೆ ಸರ್ಕಾರಿ ಜಮೀನಿನಲ್ಲಿ ತೆಲಂಗಾಣ ರಾಜ್ಯದ ಪ್ರಭಾವಿಗಳು ನಡೆಸುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಒತ್ತುವರಿ ತೆರವುಗೊಳಿಸಿ, ಗಡಿ ಕಲ್ಲು ನೆಡಲು ಆಗ್ರಹಿಸಿ 58 ದಲಿತ ರೈತ ಕುಟುಂಬಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಜುಲೈ 25ಕ್ಕೆ 100ನೇ ದಿನಕ್ಕೆ ಕಾಲಿಟ್ಟಿದೆ ಎಂದು ಗೋರ್ ಸೇನೆ ರಾಷ್ಟ್ರೀಯ ಅಖಿಲ ಭಾರತ ಉಪಾಧ್ಯಕ್ಷ ಶಂಕರ್ ಪವಾರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತಾಡಿದ ಅವರು 2001-02ರಲ್ಲಿ ಸರ್ಕಾರದಿಂದ ಕಾನೂನುಬದ್ಧವಾಗಿ ಮಂಜೂರಾದ ಈ ಜಮೀನನ್ನು ಉಳಿಸಿಕೊಳ್ಳಲು ಬಡ ದಲಿತ ಕುಟುಂಬಗಳು ಕಳೆದ 100 ದಿನಗಳಿಂದ ಬಿಸಿಲು ಮಳೆ ಅಭಾವ ತೆರೆದ ಆಕಾಶದಡಿ ಹೋರಾಟ ಮಾಡುತ್ತಿದ್ದರೂ, ಸ್ಥಳೀಯ ಆಡಳಿತ ಯಂತ್ರವು ತೆಲಂಗಾಣದ ಒತ್ತುವರಿಕೋರರ ಪರವಾಗಿ ಕೆಲಸ ಮಾಡುತ್ತಿರುವ ಗಂಭೀರ ಅನುಮಾನ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಆಘಾತಕಾರಿ ಸತ್ಯಗಳು: ಭೂದಾಖಲೆಗಳ ಇಲಾಖೆ (ADLR/DDLR) ತಯಾರಿಸಿರುವ ಇತ್ತೀಚಿನ ಸ್ಥಳ ನಕಾಶೆ ಮತ್ತು ವರದಿ ಪರಿಶೀಲಿಸಿದಾಗ ಅಧಿಕಾರಿಗಳ ಧೋರಣೆ ಸ್ಪಷ್ಟವಾಗಿ ಬಯಲಾಗಿದೆ. 1961ರ ಅಂತರರಾಜ್ಯ ಗಡಿ ಒಪ್ಪಂದ ಮರೆಮಾಚುವಿಕೆ 1961-62 ರ ಜಂಟಿ ಪರಿಶೀಲನಾ ವರದಿ (File No: HBC. 1/16/59-60) ಮತ್ತು 1962 ರ ಮೈಸೂರು ಸರ್ಕಾರಿ ಆದೇಶದ ಪ್ರಕಾರ ಕರ್ನಾಟಕ-ತೆಲಂಗಾಣ ಗಡಿಯಲ್ಲಿ ನೆಡಲಾಗಿರುವ ಅಧಿಕೃತ ಗಡಿ ಕಲ್ಲುಗಳ ಉಲ್ಲೇಖವನ್ನೇ ನಕಾಶೆಯಲ್ಲಿ ಅಧಿಕಾರಿಗಳು ಸಂಪೂರ್ಣ ಕೈಬಿಟ್ಟಿದ್ದಾರೆ.

ದಲಿತರ ಜಮೀನನ್ನು ತೆಲಂಗಾಣದವರ ಸಾಗುವಳಿ ಎಂದು ನಮೂದು ಮಾಡಿದ್ದಾರೆ. ಸ.ನಂ.126ರಲ್ಲಿ ದಲಿತ ಕುಟುಂಬಗಳಿಗೆ ಮಂಜೂರಾದ 188 ಎಕರೆ ಜಮೀನನ್ನು ಪ್ರತ್ಯೇಕವಾಗಿ ತೋರಿಸದೆ, ಇಡೀ 321 ಎಕರೆ 19 ಗುಂಟೆ ಜಮೀನನ್ನು ತೆಲಂಗಾಣ ರಾಜ್ಯದ ಜನರು ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿದ್ದಾರೆ ಎಂದು ನಮೂದಿಸುವ ಮೂಲಕ ತೆಲಂಗಾಣದ ಒತ್ತುವರಿಕೋರರಿಗೆ ಪರೋಕ್ಷವಾಗಿ ಅನುಕೂಲ ಮಾಡಿಕೊಡಲು ಯತ್ನಿಸಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಸ್ಥಳದಲ್ಲಿ ಅಕ್ರಮ ಕೆಂಪು ಮಣ್ಣಿನ ಗಣಿಗಾರಿಕೆ ನಡೆಯುತ್ತಿರುವುದು ತಹಸೀಲ್ದಾರ್‌ ಮತ್ತು ADLR ತಪಾಸಣೆಯಲ್ಲಿ ದೃಢಪಟ್ಟಿದ್ದರೂ, ಗಣಿ ಇಲಾಖೆ ಮತ್ತು ಜಿಲ್ಲಾಡಳಿತ ಅಕ್ರಮ ಗಣಿಗಾರಿಕೆಯನ್ನು ಬಂದ್ ಮಾಡಿಲ್ಲ, ಮುಖ್ಯ ಕಾರ್ಯದರ್ಶಿಗಳ ಆದೇಶವಿದ್ದರೂ ಜಂಟಿ ಸರ್ವೆ ಮಾಡುತ್ತಿಲ್ಲ. ಬೆಂಗಳೂರಿನ ಸಚಿವಾಲಯದಿಂದ ರಾಜ್ಯ ಮುಖ್ಯ ಕಾರ್ಯದರ್ಶಿಗಳು, ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಆಯುಕ್ತರು ಸಾಲು ಸಾಲು ಆದೇಶಗಳನ್ನು ರವಾನಿಸಿದ್ದಾರೆ. ಜೂನ್ 22 ರಂದೇ DDLR ಕಲಬುರಗಿ ಅವರು ಇದು ಅಂತರರಾಜ್ಯದ ಗಡಿವಿವಾದವಾದ್ದರಿಂದ ಜಂಟಿ ಸರ್ವೆ ಅಗತ್ಯ ಎಂದು ವರದಿ ಸಲ್ಲಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಕಲಬುರಗಿ ಜಿಲ್ಲಾಧಿಕಾರಿಗಳು ತೆಲಂಗಾಣ (ವಿಕಾರಾಬಾದ್) ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿ ಜಂಟಿ ಸರ್ವೆಗೆ ದಿನಾಂಕ ನಿಗದಿಪಡಿಸಿಲ್ಲ. 1961-62ರ ಗಡಿ ಒಪ್ಪಂದದ ನಕಾಶೆಯನ್ನು ಆಧಾರವಾಗಿಟ್ಟುಕೊಂಡು ನೈಜ ಗಡಿಯನ್ನು ಗುರುತಿಸಬೇಕು. ಕಲಬುರಗಿ ಜಿಲ್ಲಾಧಿಕಾರಿಗಳು ತಕ್ಷಣವೇ ತೆಲಂಗಾಣದ ವಿಕಾರಾಬಾದ್ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ, ಗಡಿ ಕಲ್ಲು ನೆಡಲು ಸ್ಥಳ ಸರ್ವೆಯ ದಿನಾಂಕವನ್ನು ಪ್ರಕಟಿಸಬೇಕು.

ಅಕ್ರಮ ಗಣಿಗಾರಿಕೆ ತಕ್ಷಣ ಬಂದ್ ಮಾಡಿ: ಸ.ನಂ. 126 ಮತ್ತು 127 ರಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಇಂದೇ ಸ್ಥಗಿತಗೊಳಿಸಿ ಯಂತ್ರೋಪಕರಣ ಜಪ್ತಿ ಮಾಡಬೇಕೆಂದು ಗೋರ್ ಸೇನಾ ರಾಷ್ಟ್ರೀಯ ಸಂಘಟನೆ ಉಪಾಧ್ಯಕ್ಷರು ಶಂಕರ್ ಪವಾರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಫೋಟೊ

ಚಿಂಚೋಳಿ ತಾಲೂಕಿನ ಶಾದಿಪುರ ಗ್ರಾಮದಲ್ಲಿ ದಲಿತ ಕುಟುಂಬಗಳು 100 ದಿನಗಳಿಂದ ಜಮೀನಿಗಾಗಿ ಹೋರಾಟ ನಡೆಸುತ್ತಿದ್ದಾರೆ.