ಕೇವಲ ಸತ್ಯ ಮತ್ತು ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಸಿಕ್ಕಿಲ್ಲ.
ಹೂವಿನಹಡಗಲಿ: ಈ ದೇಶವನ್ನು ಬ್ರಿಟಿಷರಿಂದ ಬಂಧ ಮುಕ್ತ ಮಾಡಲು ಜೀವದ ಹಂಗು ತೊರೆದು ಸಾಕಷ್ಟು ಹೋರಾಟಗಾರರು ಹತರಾಗಿದ್ದಾರೆ. ಕೇವಲ ಸತ್ಯ ಮತ್ತು ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಸಿಕ್ಕಿಲ್ಲ. ಇದರಲ್ಲಿ ಕ್ರಾಂತಿಕಾರರ ಹೋರಾಟವೂ ಬಹಳ ಮಹತ್ವ ಪಡೆದಿತ್ತು ಎಂದು ಕಲಬುರಗಿ ವಿವಿ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ.ಬಿ.ಸಿ. ಮಹಾಬಲೇಶ್ವರಪ್ಪ ಹೇಳಿದರು.
ಇಲ್ಲಿನ ಎಸ್‌ಆರ್‌ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಇಲಾಖೆ, ಬೆಂಗಳೂರಿನ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಏಕೀಕರಣ ಚಳವಳಿ ವಿಚಾರ ಸಂಕಿರಣದಲ್ಲಿ ಮಾತನಾಡಿದರು.ಇತಿಹಾಸದ ಬಗ್ಗೆ ಮಾತನಾಡಲು ಗಟ್ಟಿತನ ಇರಬೇಕು. ಧರ್ಮ, ಜಾತಿ, ಲಿಂಗ ಬೇಧದ ಹಂಗು ತೊರೆದು ಮಾತನಾಡಬೇಕಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಕಡೆ ಗಾಂಧೀಜಿ ಅನುಯಾಯಿಗಳು ಮತ್ತು ಕ್ರಾಂತಿಕಾರರ ಹೋರಾಟಗಾರರ ಹೋರಾಟ ಶೇ.50ರಷ್ಟು ಇದೆ. ಬ್ರಿಟಿಷರನ್ನು ಈ ದೇಶದಿಂದ ಹೊರ ಹಾಕಲು ಹತ್ತಾರು ಚಳವಳಿ, ಸತ್ಯಾಗ್ರಹ ನಡೆದಿದೆ. ಹೋರಾಟಕ್ಕಾಗಿ ಗಾಂಧೀಜಿ ಹುಟ್ಟು ಹಾಕಿದ ಕಾಂಗ್ರೆಸ್‌ನಿಂದ ಸ್ವಾತಂತ್ರ್ಯ ಸಿಕ್ಕಿಲ್ಲ. ಇದಕ್ಕಾಗಿ ನೇತಾಜಿ ಸುಭಾಷಶ್ಚಂದ್ರರ ಕ್ರಾಂತಿಕಾರರ ಬೆಳವಣಿಗೆ ಹೋರಾಟಕ್ಕೆ ಹೆಚ್ಚು ಬಲ ತುಂಬಿದೆ ಎಂದರು.
ಗಾಂಧೀಜಿ ಮತ್ತು ಕ್ರಾಂತಿಕಾರಿ ಹೋರಾಟಗಾರರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಇವುಗಳ ನಡುವೆ ಅಂಬೇಡ್ಕರ್ ಒಬ್ಬ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಈ ಹೋರಾಟ ಭಾರತೀಯ ಸಂಸ್ಕೃತಿ ಪುರುತ್ಥಾನಕ್ಕಾಗಿ ನಡೆದ ಹೋರಾಟವಾಗಿತ್ತು ಎಂದರು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಕೃಷ್ಣನಾಯ್ಕ, ಇತಿಹಾಸ ಬಲ್ಲವರು ಮಾತ್ರ ಇತಿಹಾಸ ಸೃಷ್ಠಿಸಲು ಸಾಧ್ಯವಾಗುತ್ತದೆ. ಇದೊಂದು ಬಹಳಷ್ಟು ಆಸಕ್ತಿ ಮತ್ತು ಕುತೂಹಲ ವಿಷಯವಾಗಿದೆ. ಈ ವಿಚಾರ ಸಂಕಿರಣದಲ್ಲಿ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿಯಿಂದ ಭಾಗವಹಿಸಬೇಕೆಂದು ಹೇಳಿದರು.
ಜೂ.2ರಂದು ಹೂವಿನಹಡಗಲಿಯಲ್ಲಿ ಉದ್ಯೋಗ ಮೇಳ ಮತ್ತು ಸರ್ಕಾರಿ ಹುದ್ದೆಗಾಗಿ ಉಚಿತ ಕೋಚಿಂಗ್ ತರಬೇತಿ ನೀಡುವ ಕಾರ್ಯಕ್ರಮವಿದೆ. ವಿದ್ಯಾವಂತ ಯುವಕರು ಈ ಮೇಳದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕಿದೆ. ಮಹಿಳೆಯರಿಗೂ ಉಚಿತ ಉದ್ಯೋಗ ತರಬೇತಿ ನೀಡಲಾಗುತ್ತಿದೆ. ಅವರು ಉತ್ಪಾದನೆ ಮಾಡುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಪ್ರತಿಯೊಬ್ಬರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.ಪ್ರಾಚಾರ್ಯ ಎಂ.ವಿಜಯಕುಮಾರ, ಡಾ.ಭೀಮಪ್ಪ, ಡಾ.ಬೂದನೂರು ಸುರೇಶ, ಉಮಾದೇವಿ, ಸುನಿತಾ, ಡಾ.ಸತೀಶ ಪಾಟೀಲ್, ಡಾ.ವೆಂಕಟೇಶ, ಶಂಕರ ಬೆಟಗೇರಿ, ಎಂ.ಪಿ.ಎಂ. ದಯಾನಂದ ಸ್ವಾಮಿ, ಡಾ.ಕೆ.ಸತೀಶ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎಚ್.ಡಿ.ಜಗ್ಗಿನ್, ರಾಘವೇಂದ್ರ ಶೆಟ್ಟಿ, ಕೆ.ಅಯ್ಯನಗೌಡ, ಡಾ.ತಿಪ್ಪೇಸ್ವಾಮಿ ಇದ್ದರು.