ಸಾರಾಂಶ
ಮುಂಡಗೋಡ: ಘಟ್ಟದ ಮೇಲಿನ ತಾಲೂಕುಗಳು ಅಭಿವೃದ್ಧಿಯಾಗಬೇಕಾದರೆ ಪ್ರತ್ಯೇಕ ಜಿಲ್ಲೆಯೊಂದೇ ಪರಿಹಾರ. ನೂತನ ಜಿಲ್ಲೆಗೆ ಅದಕ್ಕೆ ಕದಂಬ ಕನ್ನಡ ಎಂದು ನಾಮಕರಣ ಮಾಡಬೇಕು. ಶಿರಸಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು. ಬೇಡಿಕೆ ಈಡೇರುವ ವರೆಗೂ ಹೋರಾಟ ನಿಲ್ಲದು ಎಂದು ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ತಿಳಿಸಿದರು.ಪಟ್ಟಣದ ನಗರಸಭಾ ಭವನದಲ್ಲಿ ಭಾನುವಾರ ಪ್ರತ್ಯೇಕ ಜಿಲ್ಲೆ ಹೋರಾಟದ ಸಮಾನ ಮನಸ್ಕರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈ ಹೋರಾವು ಜಾತ್ಯತೀತ ಹಾಗೂ ಪಕ್ಷಾತೀತವಾಗಿದೆ. ಹೋರಾಟದಲ್ಲಿ ಘಟ್ಟದ ಮೇಲಿನ ತಾಲೂಕಿನ ಸರ್ವಜನರು ಭಾಗವಹಿಸಿ ಶಕ್ತಿ ತುಂಬುವ ಕೆಲಸ ಮಾಡಿದರೆ ಶೀಘ್ರದಲ್ಲಿ ಶಿರಸಿ ಜಿಲ್ಲಾ ಕೇಂದ್ರ ಸ್ಥಾನವನ್ನಾಗಲಿದೆ ಎಂದರು.
ಮುಂಡಗೋಡ, ಶಿರಸಿ, ಸಿದ್ದಾಪುರ ಸೇರಿದಂತೆ ಘಟ್ಟದ ಮೇಲಿನ ತಾಲೂಕಿನವರು ಜಿಲ್ಲಾ ಕೇಂದ್ರ ಸ್ಥಾನ ಕಾರವಾರಕ್ಕೆ ಹೋಗಬೇಕಾದರೆ ಸುಮಾರು ೨೦೦ ಕಿಮೀ ಕ್ರಮಿಸಬೇಕು. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಶಿರಸಿಯನ್ನು ಈಗಾಗಲೇ ಶೈಕ್ಷಣಿಕ ಜಿಲ್ಲೆಯನ್ನಾಗಿ ಮಾಡಲಾಗಿದ್ದು, ಅದೇ ರೀತಿ ಕಂದಾಯ ಜಿಲ್ಲೆಯನ್ನಾಗಿ ಘೋಷಣೆ ಮಾಡಿದರೆ ದೂರದ ಕಾರವಾರಕ್ಕೆ ಅಲೆದಾಡುವುದು ತಪ್ಪುತ್ತದೆ ಎಂದರು. ಮೆಡಿಕಲ್ ಕಾಲೇಜು, ಕೊಂಕಣ ರೈಲ್ವೆ ಎಲ್ಲವೂ ಕಾರವಾರದಲ್ಲಿಯೇ ಇದೆ. ಯಾವುದೇ ಅಭಿವೃದ್ಧಿ ಯೋಜನೆಗಳು ಬಂದರೂ ಅವು ಕರಾವಳಿಯಲ್ಲಿ ಆಗುತ್ತಿವೆಯೇ ವಿನಾ ಘಟ್ಟದ ಮೇಲಿನ ಪ್ರದೇಶಗಳಿಗೆ ದೊರಕುತ್ತಿಲ್ಲ. ಅಂದು ಬ್ರಿಟಿಷರು ತಮ್ಮ ಅನುಕೂಲಕ್ಕಾಗಿ ಕೇಂದ್ರ ಮಾಡಿಕೊಂಡ ಕಾರವಾರವನ್ನೇ ಇಂದಿಗೂ ನಾವು ಜಿಲ್ಲಾ ಕೇಂದ್ರವೆಂದು ಬಳಸುತ್ತಿದ್ದೇವೆ. ರಾಮನಗರದಂತಹ ಚಿಕ್ಕ ಪ್ರದೇಶಗಳೇ ಜಿಲ್ಲೆಯಾಗಿರುವಾಗ ನಾವು ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.ಕಾನೂನಿನ ಪ್ರಕಾರ ಜಿಲ್ಲಾ ಕೇಂದ್ರ ಎಲ್ಲ ತಾಲೂಕುಗಳಿಗೆ ೮೦ ಕಿಮೀಗಿಂತ ಹೆಚ್ಚು ದೂರದಲ್ಲಿರಬಾರದು. ಆದರೆ ನಮಗೆ ೨೦೦ ಕಿ.ಮೀ ದೂರದಲ್ಲಿದ್ದರೂ ನಾವ್ಯಾರೂ ಈ ಕುರಿತು ಪ್ರತಿಭಟನೆ ಮಾಡುತ್ತಿಲ್ಲ. ಹೋರಾಟ ಮಾಡಲು ನಮ್ಮೆಲ್ಲರಿಗೂ ಶಕ್ತಿ ಇದೆ. ಆದರೆ ನಮ್ಮಲ್ಲಿರುವ ನಕಾರಾತ್ಮಕತೆಯೇ ನಮ್ಮ ಹೋರಾಟಕ್ಕೆ ತಡೆಯಾಗಿದೆ. ನಮ್ಮಲ್ಲಿರುವ ಶಕ್ತಿ ನಮಗೆ ಅರಿವಾಗಬೇಕು. ಕದಂಬರನ್ನು ಮರೆತ ಕರ್ನಾಟಕದಲ್ಲಿ ಕದಂಬರ ಹೆಸರಿನ ಜಿಲ್ಲೆ ರಚಿಸೋಣ ಎಂದರು. ಕದಂಬ ಕನ್ನಡ ಜಿಲ್ಲೆ ರಚನೆಯಾಗುವಂತೆ ಆಗ್ರಹಿಸಿ ಎಲ್ಲ ಕಡೆ ಪೂರ್ವಭಾವಿ ಸಭೆಗಳನ್ನು ನಡೆಸಲಾಗುತ್ತದೆ. ಎಲ್ಲ ರೀತಿಯ ಹೋರಾಟಗಳನ್ನು ನಡೆಸಿ ಕದಂಬ ಕನ್ನಡ ಜಿಲ್ಲೆ ಮಾಡಿಯೇ ಮಾಡುತ್ತೇವೆ ಎಂದು ಕದಂಬ ಕನ್ನಡ ಜಿಲ್ಲೆ ರಚನೆ ಹಾಗು ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತ ಮೂರ್ತಿ ಹೆಗಡೆ ಹೇಳಿದರು.
ಸಭೆಯಲ್ಲಿ ಬಸವರಾಜ ಓಶಿಮಠ್, ಎಂ.ಎಂ. ಭಟ್ಟ, ಸದಾನಂದ ದೇಶಳ್ಳಿ, ಜಿ.ಎಸ್. ಹೆಗಡೆ, ಎಸ್. ಫಕೀರಪ್ಪ ಹನುಮಂತ ಆರೇಗೊಪ್ಪ, ಅಶೋಕ ಚಲವಾದಿ, ಭೀಮಣ್ಣ ಬೋವಿ, ಎಸ್.ಬಿ. ಹೂಗಾರ್, ಚಿದಾನಂದ ಹರಿಜನ, ಆರ್.ಜೆ. ಬೆಳ್ಳನವರ, ಗುಡ್ಡಪ್ಪ ಕಾತೂರ, ಬಸವರಾಜ ಸಂಗಮೇಶ್ವರ, ಮಂಜುನಾಥ ಪಾಟೀಲ್, ಸುಭಾಸ ವಡ್ಡರ್, ಎಸ್.ಬಿ. ಹೂಗಾರ್ ಸೇರಿದಂತೆ ಸಾರ್ವಜನಿಕರು ಇದ್ದರು. ಸಲ್ಮಾ ಕಿರಣ ಶೇರಖಾನೆ, ಎಸ್.ಡಿ ಮುಡೆಣ್ಣವರ ಮುಂತಾದವರು ಉಪಸ್ಥಿತರಿದ್ದರು.ಬೆಳಗಾವಿ ಸುವರ್ಣ ಸೌಧದ ಎದುರು ಹೋರಾಟಶಿರಸಿಯನ್ನು ಕದಂಬ ಜಿಲ್ಲೆಯನ್ನಾಗಿ ರಚನೆಗೆ ಒತ್ತಡ ತರಲು ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಬೆಳಗಾವಿ ಸುವರ್ಣಸೌಧದ ಮುಂದೆ ಹೋರಾಟ ಪ್ರತಿಭಟನೆ ಹಮ್ಮಿಕೊಳ್ಳುವುದು. ಅಲ್ಲದೇ ಡಿ. ೩೦ರಂದು ಮುಂಡಗೋಡನಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಂಡು ತಹಸೀಲ್ದಾರ್ ಮೂಲಕ ಮನವಿ ಅರ್ಪಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.