ಸಾರಾಂಶ
ಆಡಳಿತಾರೂಢ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಭಾಗದ ರೈತರ ಬಹುದಿನದ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡಬೇಕು
ನರಗುಂದ: ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಬಹುದಿನದ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಯಾಗುವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಕರವೇ ಪ್ರವೀಣ ಶೆಟ್ಟಿ ಬಣದ ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟಿ ಹೇಳಿದರು.
ಅವರು ಗುರವಾರ ಪಟ್ಟಣದ ಈರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ನರಗುಂದದಿಂದ ಗದಗವರೆಗಿನ ಪಾದಯಾತ್ರೆಯಲ್ಲಿ ಮಾತನಾಡಿ, ಕಳೆದ 9 ವರ್ಷದಿಂದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಮಹದಾಯಿ ಹಾಗೂ ಕಳಸಾ ಬಮಡೂರಿ ನಾಲಾ ಯೋಜನೆ ಜಾರಿಗೆ ಹೋರಾಟ ಮಾಡಿದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯೋಜನೆ ಜಾರಿ ಮಾಡದೇ ಅನ್ಯಾಯ ಮಾಡುತ್ತಿವೆ ಎಂದು ಆರೋಪಿಸಿದರು.ಆಡಳಿತಾರೂಢ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಭಾಗದ ರೈತರ ಬಹುದಿನದ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡಬೇಕು ಮತ್ತು ಕಪ್ಪತ್ತಗುಡ್ಡವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಭಯ ಸರ್ಕಾರಗಳ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ನರಗುಂದದಿಂದ ಮಹದಾಯಿ ಯೋಜನೆ ಜಾರಿಗೆ ಗದಗವರೆಗೆ ಪಾದಯಾತ್ರೆ ಮಾಡಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಯೋಜನೆ ಜಾರಿಗೆ ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ರಾಜ್ಯದ 28 ಸಂಸದರ ಮನೆ ಮುಂದೆ ಕರವೇ ಹಾಗೂ ರೈತ ಸಂಘಟನೆಯಿಂದ ಧರಣಿ ಹಮ್ಮಿಕೊಳ್ಳಲಾಗುವುದು ಎಂದರು.ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಬಂಡಾಯ ನೆಲದಲ್ಲಿ ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಜಾರಿಗೆ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ವನ್ಯಜೀವಿ ಮಂಡಳಿ ಉದ್ದೇಶ ಪೂರ್ವಕವಾಗಿ ಈ ಯೋಜನೆಗೆ ಪರವಾನಗಿ ನೀಡುತ್ತಿಲ್ಲ ಎಂದು ದೂರಿದರು.
ಈ ಸಂದರ್ಭದಲ್ಲಿ ಪ್ರವೀಣ ಶೆಟ್ಟಿ ಬಣದ ಕರವೇ ಪದಾಧಿಕಾರಿಗಳಾದ ಶಿವರಾಜಗೌಡ, ಉಮೇಶ, ಮಂಜೇಶ, ರಾಜಗಳ್ಳಿ ರವಿ, ಶರಣು, ಶ್ರೀನಿವಾಸ, ರಾಜೇಶ ಡವಳೆ, ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಬಸವರಾಜ ಸಾಬಳೆ, ಚನ್ನು ನಂದಿ, ರಾಘವೇಂದ್ರ ಗುಜಮಾಗಡಿ, ಎಸ್.ಬಿ. ಜೋಗಣ್ಣವರ, ಹನಮಂತ ಮಡಿವಾಳರ, ಸುಭಾಸ ಗಿರಿಯಣ್ಣವರ, ಅರ್ಜುನ ಮಾನೆ, ಶಿವಪ್ಪ ಸಾತಣ್ಣವರ, ವಾಸು ಚವ್ಹಾಣ ಸೇರಿದಂತೆ ಮುಂತಾದವರು ಇದ್ದರು.