ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಸಾಲ ಮಂಜೂರಾತಿ ಮಾಡಿ ಜನಸಾಮಾನ್ಯರಿಗೆ ಕಿರುಕುಳ ನೀಡುತ್ತಿದ್ದು, ಈ ರೀತಿ ನಡೆದುಕೊಳ್ಳುತ್ತಿರುವ ಮೈಕ್ರೋ ಫೈನಾನ್ಸ್ ಮುಚ್ಚುವ ತನಕ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲವೆಂದು ನಗರದ ಕೆ.ಆರ್. ಪುರಂ ಬಡಾವಣೆಯಲ್ಲಿರುವ ಕಿನಾರ ಕ್ಯಾಪಿಟಲ್ ಫೈನಾನ್ಸ್ ಕಚೇರಿ ಮುಂದೆ ಮಂಗಳವಾರ ಕರವೇ ಮತ್ತು ರೈತ ಸಂಘದಿಂದ ಜಂಟಿಯಾಗಿ ಪ್ರತಿಭಟನೆ ನಡೆಸಿದರು.ನಗರದ ಹೇಮಾವತಿ ಪ್ರತಿಮೆಯ ಮುಂಭಾಗದಿಂದ ಪಾದಯಾತ್ರೆ ಹೊರಟು ನಗರದ ಕೆ.ಆರ್. ಪುರಂನಲ್ಲಿರುವ ಕಿನಾರ ಕ್ಯಾಪಿಟಲ್ ಫೈನಾನ್ಸ್ ಕಚೇರಿ ಮುಂದೆ ಘೋಷಣೆ ಕೂಗಿ ಪ್ರತಿಭಟಿಸಿದರು. ಈ ವೇಳೆ ಪ್ರತಿಭಟನೆ ನಡೆಸುವಾಗ ಫೈನಾನ್ಸ್ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಬೀಗ ಹಾಕಿಕೊಂಡು ಹೊರ ನಡೆದ ಪ್ರಸಂಗ ನಡೆಯಿತು.
ಇದೇ ವೇಳೆ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯ ರೈತ ಸಂಘ ರಕ್ಷಣಾ ವೇದಿಕೆ, ಹಾಸನ ಜಿಲ್ಲೆ, ಹಾಸನ ಇದರ ವತಿಯಿಂದ ಜಂಟಿ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಕಿನಾರ ಕ್ಯಾಪಿಟಲ್ ಫೈನಾನ್ಸ್ ಇದರ ವಿರುದ್ಧವಾಗಿ ನಮ್ಮ ಪ್ರತಿಭಟನೆ. ಈ ಫೈನಾನ್ಸ್‌ನವರು ಆರ್.ಬಿ.ಐ ಬ್ಯಾಂಕಿನ ಸಾಲದ ಬಡ್ಡಿಯ ನಿಯಮವನ್ನು ಮುರಿದು ರೈತರಿಗೆ ಹಣದ ಆಸೆಯನ್ನು ತೋರಿಸಿ, ಬೆಳೆಯನ್ನು ಬೆಳೆಯಲು ರೈತರು, ಕೂಲಿ ಕಾರ್ಮಿಕರು, ಹಾಗೂ ಇನ್ನಿತರೆ ಜನಸಾಮಾನ್ಯರು ಪಡೆದ ಸಾಲವನ್ನು ಒಂದು ತಿಂಗಳ ಕಂತು ಕಟ್ಟದೆ ಇದ್ದ ಪಕ್ಷದಲ್ಲಿ ೨ನೇ ತಿಂಗಳಿಗೆ ಮನೆಯ ಬಳಿ ಬಂದು ಸಾಲವನ್ನು ಕೇಳುವುದು, ನ್ಯಾಯಾಲಯದಲ್ಲಿ ದಾವೆಯನ್ನು ಹೂಡುಲಾಗುವುದು. ಸಾಲವನ್ನು ಹಾಸನದಲ್ಲಿ ನೀಡಿ, ಬೆಂಗಳೂರಿನಲ್ಲಿ ದಾವೆಯನ್ನು ಹೂಡುವುದು, ರೈತರು ಹಾಸನದಲ್ಲಿ ವಾಸವಿದ್ದವರು ಬೆಂಗಳೂರಿಗೆ ಹೋಗಿ ಮೊಕದ್ದಮೆಯನ್ನು ಹೂಡುವುದು, ಮನೆ ಬಳಿಗೆ ರಾತ್ರಿ ವೇಳೆ ಹೋಗಿ ತೊಂದರೆ ಕೊಡುವುದು ಹಾಗೂ ಜನಸಾಮಾನ್ಯರ ಮಾನ ಹೋಗುವ ರೀತಿಯಲ್ಲಿ ಈ ಫೈನಾನ್ಸ್‌ನವರು ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ಮಾತನಾಡಿ, ಕರ್ನಾಟಕ ಸರ್ಕಾರವು ಈಗಾಗಲೇ ಫೈನಾನ್ಸ್‌ನವರು ನಡೆಸುವ ಸಾಲದ ಸಲುವಾಗಿ ನೋಟಿಸ್ ನೀಡಿದ್ದರೂ ಸಹ ಇವರು ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳದೆ ಮತ್ತೇ ಅದೇ ರೀತಿ ಹಾಸನದಲ್ಲಿ ನಡೆದುಕೊಳ್ಳುತ್ತಿರುವುದು ನಿಜವಾಗಲೂ ದುಃಖ ತರುವಂತಹ ವಿಷಯವಾಗಿರುತ್ತದೆ. ಈ ರೀತಿಯ ಫೈನಾನ್ಸ್‌ನವರನ್ನು ನಮ್ಮ ರಾಜ್ಯದಿಂದ ಹೊರದೂಡಬೇಕು, ಹಾಗೂ ಈ ರೀತಿ ನಡೆದುಕೊಳ್ಳುತ್ತಿರುವವರ ಮೈಕ್ರೋ ಫೈನಾನ್ಸ್ ಹಾಗೂ ಕಿನಾರ ಕ್ಯಾಪಿಟಲ್ ಹಾಗೂ ಇನ್ನಿತರೆ ಫೈನಾನ್ಸ್‌ನನ್ನು ಮುಚ್ಚುವ ತನಕ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ತಮ್ಮ ನಿರ್ಧಾರ ತಿಳಿಸಿದರು.
ಈ ವೇಳೆ ಫೈನಾನ್ಸ್ ಅಧಿಖಾರಿಗಳು ಸ್ಥಳಕ್ಕೆ ಬಾರದಿದ್ದರೇ ಕಚೇರಿಗೆ ಬೀಗ ಹಾಕುವುದಾಗಿ ಹಠ ಹಿಡಿದಾಗ ಕೆಲ ಸಿಬ್ಬಂದಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಚರ್ಚಿಸಿ ಪ್ರತಿಭಟನಾನಿರತರ ಮನವಿಗೆ ಸ್ಪಂದಿಸಿದ ಪ್ರಸಂಗ ನಡೆಯಿತು.ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್ ಗೌಡ, ಪ್ರಧಾನ ಕಾರ್ಯದರ್ಶಿ ಶರೀಫ್, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆನೆಕರೆ ರವಿ, ರಾಜ್ಯ ಸಂಚಾಲಕ ಮೊಹಮ್ಮದ್ ಸಾದಿಕ್, ಕಮಲಮ್ಮ, ಕಾರ್ಯದರ್ಶಿ ಮಧು, ಪವನ್, ಅರುಣ್, ಸತೀಶ್, ಶಶಿಕುಮಾರ್, ಪವಿತ್ರ, ಇತರರು ಉಪಸ್ಥಿತರಿದ್ದರು.