ಮೂಡಾ ಹಗರಣ ಸಿಬಿಐಗೆ ಒಪ್ಪಿಸುವವರೆಗೆ ಹೋರಾಟ ನಿಲ್ಲದು

| Published : Oct 20 2024, 01:54 AM IST

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವವರೆಗೆ ಬಿಜೆಪಿ ಹೋರಾಟ ಮುಂದುವರೆಸುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣ ಹೊರ ಬಂದ ಬಳಿಕ ತಮ್ಮ ಪತ್ನಿ ಪಾರ್ವತಿಯವರು ಮೂಡಕ್ಕೆ ಪತ್ರ ಬರೆದಿಲ್ಲ ಎನ್ನುತ್ತಿದ್ದ ಸಿಎಂ ಸಿದ್ದರಾಮಯ್ಯನವರು ಪತ್ರ ಬಹಿರಂಗವಾದ ಬಳಿಕ ಬೇರೆಯದೇ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಪತ್ರದ ಮೇಲೆ ವೈಟ್ನರ್ ಹಾಕಿ ತಿದ್ದುಪಡಿ ಮಾಡಲಾಗಿದೆ. ಮುಡಾಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಹೆಲಿಕಾಪ್ಟರ್‌ನಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತೆಗೆದುಕೊಂಡು ಹೋಗಿ ಹಗರಣ ಮುಚ್ಚುವ ಪ್ರಯತ್ನ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ನೋಟೀಸ್‌ ನೀಡಿದರೂ ಕೂಡ ಮುಡಾ ಅಧಿಕಾರಿಗಳು ಸುಮ್ಮನಿದ್ದರು. ಹೀಗಾಗಿ ಇಡಿ ನೇರವಾಗಿ ಮುಡಾ ಕಚೇರಿಗೆ ರೈಡ್ ಮಾಡಿದೆ. ಈ ಮೂಲಕ ಎಲ್ಲವೂ ಬಯಲಾಗಿದೆ ಎಂದು ಹೇಳಿದರು.

2004 ರಿಂದ ಮುಡಾದಲ್ಲಿ ಸಾವಿರಾರು ಕೋಟಿ ಹಗರಣವಾಗಿದ್ದು, ಬಡವರಿಗೆ ಸಲ್ಲಬೇಕಾದ ನಿವೇಶನಗಳು ಪ್ರಭಾವಿಗಳ ಪಾಲಾಗಿದೆ. ಇದಕ್ಕೆ ಅಧಿಕಾರದಲ್ಲಿರುವ ಕಾಂಗ್ರೆಸ್‌ ನಾಯಕರೇ ಕಾರಣ. ಈ ಹಗರಣವನ್ನು ಕಾಂಗ್ರೆಸ್‌ ಸರ್ಕಾರದ ಅಧೀನದಲ್ಲಿರುವ ಎಸ್ಐಟಿಯಿಂದ ತನಿಖೆ ಮಾಡಿಸಿದರೆ ಅದು ಪಾರದರ್ಶಕವಾಗಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ಮಸಿ ಬೆಳೆಯುವ ಪ್ರಯತ್ನ ಮಾಡದೆ, ಕೋರ್ಟ್ ಆದೇಶಕ್ಕೆ ಬೆಲೆ ಕೊಟ್ಟು, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸಿಎಂ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಸಿಲುಕಿದ ಬಳಿಕ ಈಗ ವಿರೋಧ ಪಕ್ಷಗಳಿಗೆ ಧಮಕಿ ಹಾಕುತ್ತಿದ್ದಾರೆ. ಆಡಳಿತ ಪಕ್ಷದ ಹಗರಣಗಳನ್ನು ಬೀದಿಗೆ ತರಬೇಡಿ ಎಂದು ವಿವಿಧ ರೀತಿಯಲ್ಲಿ ಧಮಕಿ ಹಾಕಿ, ಗಧಾಪ್ರಹಾರ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಿವರಾಜ್, ಹರಿಕೃಷ್ಣ, ಮಾಲತೇಶ್, ಜಗದೀಶ್, ಅಣ್ಣಪ್ಪ, ಚಂದ್ರಶೇಖರ್ ಇದ್ದರು.

*ಸರ್ಕಾರ ಸಹಕಾರ ನೀಡಿದರೆ ವಿಮಾನ ಸಮಸ್ಯೆ ಇರಲ್ಲ:

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ 12ವಿಮಾನಗಳು ಹಾರಾಟ ಮಾಡುತ್ತಿದ್ದು, ಸರ್ಕಾರ ಸಹಕಾರ ನೀಡಿದರೆ ಅಲ್ಲಿ ಯಾವುದೇ ಸಮಸ್ಯೆ ಉದ್ಭವವಾಗುವುದಿಲ್ಲ ಎಂದರು. ಸಹ್ಯಾದ್ರಿ ಕಾಲೇಜಿನಲ್ಲಿ ವಿಜ್ಞಾನಿ ಕೇಂದ್ರ ಸ್ಥಾಪನೆಗೆ ₹20 ಕೋಟಿ ಹಣ ಕೇಂದ್ರದಿಂದ ಮಂಜೂರಾಗಿದೆ. ಇದರಿಂದ ನೂರಾರು ಬಡ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ. ಹಿಂದೆ ಖೇಲ್ ಇಂಡಿಯಾ ಸಂಕಿರಣಕ್ಕೆ ₹25 ಕೋಟಿ ಹಣ ಬಂದಿತ್ತು. ಆದರೆ ಕೆಲವರು ವಿರೋಧ ಮಾಡಿದ್ದರಿಂದ ಹಣ ವಾಪಾಸ್ಸಾಯಿತು. ಈಗ ನಗರದಲ್ಲಿ ಮಕ್ಕಳಿಗೆ ಅಗತ್ಯವಾದ ಒಂದು ವಿಜ್ಞಾನ ಕೇಂದ್ರವಾಗಿದ್ದು, ವಿರೋಧಿಸಿದವರ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್‌ ಎಂದರೆ ನ್ಯಾಷನಲ್ ಕರಪ್ಷನ್‌ ಪಾರ್ಟಿ:

ಕಾಂಗ್ರೆಸ್ ಎಂಬುದು ಈಗ ಇಂಡಿಯನ್ ನ್ಯಾಷನಲ್ ಕರಪ್ಷನ್ ಪಾರ್ಟಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. 2005ರಲ್ಲಿ ನಡೆದ 2ಜಿ ಸ್ಪೆಕ್ಟ್ರಮ್‌, ಕಾಮನ್‌ವೆಲ್ತ್, ಆದರ್ಶ್ ಸೊಸೈಟಿ ಹಗರಣ, ನ್ಯಾಷನಲ್ ಹೆರಾಲ್ಡ್ ಹಗರಣಗಳು ದೇಶದ ಜನರ ಕಣ್ಮುಂದೆ ಇದೆ. ಈಗ ವಕ್ಫ್ ಆಸ್ತಿಯನ್ನೂ ಕೂಡ ಕಾಂಗ್ರೆಸ್ ನಾಯಕರು ಲೂಟಿ ಮಾಡಿದ್ದಾರೆ ಎಂಬುದು ಬಹಿರಂಗವಾಗಿದ್ದು, ಜಂಟಿ ಸಂಸದೀಯ ಸಮಿತಿ ಈ ಬಗ್ಗೆ ತನಿಖೆಗೆ ಆಗ್ರಹಿಸಿದೆ. ಅದಕ್ಕಾಗಿ ಕಾಂಗ್ರೆಸ್ ನವರು ಬಹಿರಂಗವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದರು. 2013 ರಲ್ಲಿಯೇ ಪ್ರಹ್ಲಾದ್ ಜೋಷಿ ಅಣ್ಣ ಭ್ರಷ್ಟಚಾರ ಮಾಡಿದ್ದಾರೆ ಎಂಬ ಆರೋಪವಿತ್ತು. ಅದು ನ್ಯಾಯಾಲಯದಲ್ಲಿ ಇದೆ. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿಯವರಿ ಹಾಗೂ ಅವರ ಅಣ್ಣನವರಿಗೂ ಯಾವುದೇ ಸಂಬಂಧವಿಲ್ಲ. ಅವರ ಕಳೆದ 22 ವರ್ಷಗಳಿಂದ ದೂರವಿದ್ದಾರೆ. ಈಗ ಮತ್ತೆ ಕಾಂಗ್ರೆಸ್ ಉದ್ದೇಶ ಪೂರ್ವಕವಾಗಿ ಆ ಪ್ರಕರಣವನ್ನು ಕೆದಕಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದರು. ವಿಶಾಖಪಟ್ಟಣದ ರೋಗಗ್ರಸ್ಥ ಕೈಗಾರಿಕೆ ಪುನರುಜ್ಜೀವನಕ್ಕೆ ಈಗಾಗಲೇ ಕೇಂದ್ರ ಸರ್ಕಾರ ಕೈ ಹಾಕಿದೆ. ಮುಂಬರುವ ದಿನಗಳಲ್ಲಿ ವಿಐಎಸ್ಎಲ್ ಕೂಡ ಪುನರುಜ್ಜೀವನವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.