ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲದು

| Published : Dec 07 2023, 01:15 AM IST

ಸಾರಾಂಶ

ಹೆದ್ದಾರಿಗಳಲ್ಲಿ ಲಿಂಗ ಪೂಜೆಯ ಮೂಲಕ 4ನೇ ಹಂತದ ಹೋರಾಟವನ್ನೂ ಪ್ರಾರಂಭಿಸಲಾಗಿದೆ. ಸರ್ಕಾರ ಯಾವುದೇ ಇರಲಿ, ಮುಖ್ಯಮಂತ್ರಿಗಳು ಯಾರೇ ಆಗಲಿ ಆದರೆ ನಮ್ಮ ನಿರ್ಧಾರ ಅಚಲವಾಗಿದ್ದು ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲದು ಎಂದು ಪಂಚಮಸಾಲಿ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಹೆದ್ದಾರಿಗಳಲ್ಲಿ ಲಿಂಗ ಪೂಜೆಯ ಮೂಲಕ 4ನೇ ಹಂತದ ಹೋರಾಟವನ್ನೂ ಪ್ರಾರಂಭಿಸಲಾಗಿದೆ. ಸರ್ಕಾರ ಯಾವುದೇ ಇರಲಿ, ಮುಖ್ಯಮಂತ್ರಿಗಳು ಯಾರೇ ಆಗಲಿ ಆದರೆ ನಮ್ಮ ನಿರ್ಧಾರ ಅಚಲವಾಗಿದ್ದು ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲದು ಎಂದು ಪಂಚಮಸಾಲಿ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಕೊಟ್ಟ ಮಾತಿಗೆ ತಪ್ಪಿದ ಹಿನ್ನೆಲೆಯಲ್ಲಿ ಅವರ ಮನೆ ಮುಂದೆ ಹೋರಾಟ ಮಾಡಲಾಯಿತು. ಅಂದಿನ ರಾಜ್ಯ ಸರ್ಕಾರ ಚುನಾವಣೆಯ ಹೊಸ್ತಿಲಲ್ಲಿ ಸಮಾಜಕ್ಕೆ ೨ಡಿ ಮೀಸಲಾತಿ ಕೊಟ್ಟಾಗ ಆ ಸಂದರ್ಭದಲ್ಲಿ ಅನಿವಾರ್ಯವಾಗಿ ಸರ್ಕಾರದ ಆದೇಶವನ್ನು ಒಪ್ಪಿಕೊಳ್ಳಬೇಕಾಯಿತು ಎಂದರು.

ಈಗ ಸಿದ್ದರಾಮಯ್ಯನವರ ನೇತೃತ್ವ ಹೊಸ ಸರ್ಕಾರ ಬಂದಿದೆ. ಸಮಾಜದಿಂದ ೧೧ ಜನ ಶಾಸಕರು ಮತ್ತು ಸಮಾಜದ ಬೆಂಬಲದಿಂದ ಹಲವಾರು ಜನ ಶಾಸಕರು ಆಯ್ಕೆಯಾಗಿದ್ದಾರೆ. ವೀರೇಂದ್ರ ಪಾಟೀಲರ ನಂತರದ ದಿನಗಳಲ್ಲಿ ಲಿಂಗಾಯತ ಸಮಾಜ ಈಗಿನ ಆಡಳಿತದ ಕಾಂಗ್ರೆಸ್ ಸರ್ಕಾರವನ್ನು ಒಪ್ಪಿಕೊಂಡಿರುವುದರಿಂದ ೨ಎ ಮೀಸಲಾತಿಯನ್ನು ನಮ್ಮ ಸಮಾಜಕ್ಕೆ ನೀಡಲೇಬೇಕಾಗಿದೆ ಎಂದರು.

೧೧ರಂದು ಮೂಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಲಿಂಗಪೂಜೆ ಮಾಡುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಹಾಲಪ್ಪನವರ, ತಾಲೂಕಾಧ್ಯಕ್ಷ ಶಿವಾನಂದ ಬಾಗೂರ, ಪ್ರಮುಖರಾದ ಪಾಲಾಕ್ಷಪ್ಪ ಹಾವಣಗಿ, ಸಿ.ವಿ. ಮತ್ತಿಗಟ್ಟಿ, ಎಂ.ಬಿ. ಹಳಮನಿ, ಈರಣ್ಣ ನವಲಗುಂದ, ವಿಜಯ ಬುಳ್ಳಕ್ಕನವರ, ನಂದೀಶ ಯಲಿಗಾರ, ಸಂಜೀವ ಮನ್ನಣ್ಣವರ ಸೇರಿದಂತೆ ಇತರರಿದ್ದರು.