ಸಾರಾಂಶ
ಅ. 6ರಂದು ದಾವಣಗೆರೆಯಲ್ಲಿ ಮಾರ್ಟಿನ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಯಲಿದ್ದು, ಅ. 11ರಂದು ವಿಶ್ವಾದ್ಯಂತ ಕನ್ನಡ, ತೆಲಗು, ತಮಿಳು, ಹಿಂದಿ, ಮಲಿಯಾಳಂ, ಬಂಗಾಲಿ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.
ಹುಬ್ಬಳ್ಳಿ:
ಕನ್ನಡ ಸೇರಿದಂತೆ ಬೇರೆ ಯಾವುದೇ ಚಿತ್ರಗಳು ಯಶಸ್ವಿಯಾಗಬೇಕಾದರೆ, ಉತ್ತರ ಕರ್ನಾಟಕದ ಅಭಿಮಾನಿಗಳ ಆಶೀರ್ವಾದ ಅತೀ ಅವಶ್ಯಕವಾಗಿದೆ. ಇಲ್ಲಿನ ಅಭಿಮಾನಿಗಳು ಹಾಗೂ ಕಲಾ ಪೋಷಕರು ತೋರಿದ ಪ್ರೀತಿ-ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದು ನಟ ಧ್ರುವ ಸರ್ಜಾ ಹೇಳಿದರು.ಪ್ಯಾನ್ ವರ್ಲ್ಡ್ ಮಾರ್ಟಿನ್ ಚಿತ್ರದ ಪ್ರಚಾರಾರ್ಥವಾಗಿ ಶನಿವಾರ ಹುಬ್ಬಳ್ಳಿಗೆ ಆಗಮಿಸಿದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಇಲ್ಲಿನ ಜನರೆಂದರೆ ಬಹಳಷ್ಟು ಇಷ್ಟ. ನನ್ನ ಪ್ರತಿಯೊಂದು ಚಿತ್ರದಲ್ಲಿಯೂ ಕನಿಷ್ಠ ಒಂದು ದೃಶ್ಯವನ್ನಾದರೂ ಉತ್ತರ ಕರ್ನಾಟಕ ಭಾಗದಲ್ಲಿಯೇ ಚಿತ್ರೀಕರಣ ಮಾಡುವಂತೆ ನಿರ್ದೇಶಕರಿಗೆ ಮನವಿ ಮಾಡುತ್ತೇನೆ. ಮಾರ್ಟಿನ್ ಚಿತ್ರದಲ್ಲಿಯೂ ಸಹ ಬಾದಾಮಿ ಸೇರಿದಂತೆ ಸುತ್ತಮುತ್ತಲಿನ ಸ್ಥಳಗಳಲ್ಲಿ ಕೆಲ ದೃಶ್ಯ ಚಿತ್ರೀಕರಿಸಲಾಗಿದೆ ಎಂದರು.
ಅ. 6ರಂದು ದಾವಣಗೆರೆಯಲ್ಲಿ ಮಾರ್ಟಿನ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಯಲಿದ್ದು, ಅ. 11ರಂದು ವಿಶ್ವಾದ್ಯಂತ ಕನ್ನಡ, ತೆಲಗು, ತಮಿಳು, ಹಿಂದಿ, ಮಲಿಯಾಳಂ, ಬಂಗಾಲಿ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಇದೊಂದು ದೇಶಾಭಿಮಾನ ಹೊಂದಿರುವ ಪ್ಯಾನ್ ವರ್ಲ್ಡ್ ಚಿತ್ರವಾಗಿದ್ದು, ಕುಟುಂಬ ಸಮೇತರಾಗಿ ಚಿತ್ರ ವೀಕ್ಷಿಸಬಹುದು ಎಂದರು.ನಟಿ ವೈಭವಿ ಶಾಂಡಿಲ್ಯಾ ಮಾತನಾಡಿದರು. ಈ ವೇಳೆ ಕವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಸ್ವರ್ಣ ಗ್ರುಪ್ ಆಫ್ ಕಂಪನಿ ಎಂಡಿ ಡಾ. ವಿ.ಎಸ್.ವಿ. ಪ್ರಸಾದ ಅವರನ್ನು ನಟ ಧ್ರುವ ಸರ್ಜಾ ಸನ್ಮಾನಿಸಿದರು.
ಸುದ್ದಿಗೋಷ್ಠಿಯಲ್ಲಿ ಉತ್ತರ ಕರ್ನಾಟಕ ಆಟೋಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಸೇರಿದಂತೆ ಹಲವರಿದ್ದರು.