ಕ್ಷುಲ್ಲಕ ಕಾರಣಕ್ಕೆ ಕಟಾವಿಗೆ ಬಂದಿದ್ದ ಕಬ್ಬು ನಾಶ

| Published : Feb 10 2024, 01:45 AM IST

ಸಾರಾಂಶ

ಗ್ರಾಮದ ಸರ್ವೇ ನಂ. 85/13, 85/5ರಲ್ಲಿನ 13 ಕುಂಟೆ ಪ್ರದೇಶದಲ್ಲಿ ಬೆಳೆದಿದ್ದ ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆಯನ್ನು ತಾಲೂಕಿನ ಕೋಣಸಾಲೆ ಗ್ರಾಮದ ಕೆ.‌ ಬೋರಯ್ಯರ ಪುತ್ರ ಕೆ.ಬಿ. ಸಿದ್ದು ಮತ್ತು ಕಿಡಿಗೇಡಿಗಳ ಗುಂಪು ಏಕಾಏಕಿ ಎರಡು ರೋಟರಿ ಟ್ರಾಕ್ಟರ್ ಗಳ ಮೂಲಕ ಜಮೀನಿಗೆ ಅತಿಕ್ರಮಣ ಪ್ರವೇಶ ಮಾಡಿ ನಾಶ ಮಾಡಿದ್ದಾರೆ.

ರಾಂಪುರ ಗ್ರಾಮದಲ್ಲಿ ಘಟನೆ । ಜಮೀನಿಗೆ ಅತಿಕ್ರಮಿಸಿದ ಕಿಡಿಗೇಡಿಗಳಿಂದ ಕೃತ್ಯ

ಕನ್ನಡಪ್ರಭ ವಾರ್ತೆ ಮದ್ದೂರು

ಕ್ಷುಲ್ಲಕ ಕಾರಣಕ್ಕೆ ಕಿಡಿಗೇಡಿಗಳ ಗುಂಪು ಕಟಾವಿಗೆ ಬಂದಿದ್ದ ಕಬ್ಬನ್ನು ರೋಟರಿ ಟ್ರ್ಯಾಕ್ಟರ್ ಗಳ ಮೂಲಕ ನಾಶ ಮಾಡಿರುವ ಘಟನೆ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಎಚ್. ರಮೇಶ್ ರ ಪತ್ನಿ ಎಂ.ಎನ್. ಕವಿತಾರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಕಬ್ಬನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ.

ಗ್ರಾಮದ ಸರ್ವೇ ನಂ. 85/13, 85/5ರಲ್ಲಿನ 13 ಕುಂಟೆ ಪ್ರದೇಶದಲ್ಲಿ ಬೆಳೆದಿದ್ದ ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆಯನ್ನು ತಾಲೂಕಿನ ಕೋಣಸಾಲೆ ಗ್ರಾಮದ ಕೆ.‌ ಬೋರಯ್ಯರ ಪುತ್ರ ಕೆ.ಬಿ. ಸಿದ್ದು ಮತ್ತು ಕಿಡಿಗೇಡಿಗಳ ಗುಂಪು ಏಕಾಏಕಿ ಎರಡು ರೋಟರಿ ಟ್ರಾಕ್ಟರ್ ಗಳ ಮೂಲಕ ಜಮೀನಿಗೆ ಅತಿಕ್ರಮಣ ಪ್ರವೇಶ ಮಾಡಿ ನಾಶ ಮಾಡಿದ್ದಾರೆ. ಕಬ್ಬು ಕಟಾವು ಮಾಡಿದ್ದರೆ 40 ಟನ್ ಇಳುವರಿ ಸಿಗುತಿತ್ತು. 80 ಸಾವಿರ ಆದಾಯ ಬರುತ್ತಿತ್ತು. ಅದು ಈಗ ನಷ್ಟವಾಗಿದೆ ಎನ್ನಲಾಗಿದೆ.

ಸಂತ್ರಸ್ತ ರೈತ ಮಹಿಳೆ ಎಂ.ಎನ್. ಕವಿತಾ ಮಾತನಾಡಿ, ಬೆಂಗಳೂರಿನ ನಾರಾಯಣಗೌಡರ ಪುತ್ರ ಸುರೇಶ್ ಎಂಬುವರಿಗೆ ಕೋಣಸಾಲೆ ಗ್ರಾಮದ ಕೆ.ಬಿ. ಸಿದ್ದು ಅವರು 2005ರಲ್ಲಿ 13 ಕುಂಟೆ ಜಮೀನನ್ನು ಮಾರಾಟ ಮಾಡಿದ್ದರು. ನಂತರ ನಾವು ಸುರೇಶ್ ಅವರಿಂದ 2019ರಲ್ಲಿ ಸದರಿ ಜಮೀನನ್ನು ಖರೀದಿಸಿ ಕಳೆದ ಐದು ವರ್ಷಗಳಿಂದ ನಾವು ಸ್ವಾಧೀನದಲ್ಲಿದ್ದೇವೆ.

ಈಗ ಕ್ಯಾತೆ ತೆಗೆದು ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆಯನ್ನು ನಾಶ ಮಾಡಿದ್ದಾರೆ. ಕಂದಾಯ ದಾಖಲೆಗಳ ಪ್ರಕಾರ ನಾವು ಭೂಮಿ ಖರೀದಿ ಮಾಡಿದ್ದು, ನಮಗೆ ಸರ್ಕಾರ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ನ್ಯಾಯ ದೊರಕಿಸಿ ಕೊಡಬೇಕು. ಜೊತೆಗೆ ನಮ್ಮ ಬೆಳೆ ಹಾಳುಮಾಡಿ ನಷ್ಟ ಉಂಟು ಮಾಡಿರುವುದರಿಂದ ಕೊಣಸಾಲೆ ಗ್ರಾಮದ ಬೋರಯ್ಯ ಅವರ ಪುತ್ರ ಕೆ.ಬಿ. ಸಿದ್ದು ಹಾಗೂ 20 ಜನ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಬೆಸಗರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂತ್ರಸ್ತ ರೈತರಿಗೆ ನ್ಯಾಯ ಒದಗಿಸಬೇಕು. ತಾಲೂಕು ಆಡಳಿತ ಮಧ್ಯಪ್ರವೇಶ ಮಾಡಬೇಕು ಎಂದು ರೈತ ಸಂಘದ ಮುಖಂಡರಾದ ಪಣ್ಣೆದೊಡ್ಡಿ ವೆಂಕಟೇಶ, ರಮೇಶ, ಸ್ವಾಮಿ ಅವರು ಒತ್ತಾಯಿಸಿದ್ದಾರೆ.

------------

9ಕೆಎಂಎನ್ ಡಿ20

ಕಿಡಿಗೇಡಿಗಳಿಂದ ನಾಶವಾಗಿರುವ ಕಬ್ಬಿನ ಬೆಳೆಯನ್ನು ತೋರಿಸುತ್ತಿರುವ ರೈತ ಮಹಿಳೆ ಎಂ.ಎನ್.ಕವಿತಾ .