ದೇಶದ ಪ್ರಜಾಪ್ರಭುತ್ವದ ಯಶಸ್ಸು ನಮ್ಮ ಸಂವಿಧಾನದ ಶ್ರೇಷ್ಠತೆಯನ್ನು ಬಹಳ ಎತ್ತಿ ತೋರಿಸುತ್ತದೆ. ದೇಶದ ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಗೊಂದಲವಿಲ್ಲದಿರಲು ಕಾರಣ ಡಾ.ಬಿ.ಆರ್.ಅಂಬೇಡ್ಕರ್ ಬರೆದ ಅಚ್ಚುಕಟ್ಟಾದ ಸಂವಿಧಾನ ಕಾರಣ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ದೇಶದ ಪ್ರಜಾಪ್ರಭುತ್ವದ ಯಶಸ್ಸು ನಮ್ಮ ಸಂವಿಧಾನದ ಶ್ರೇಷ್ಠತೆಯನ್ನು ಬಹಳ ಎತ್ತಿ ತೋರಿಸುತ್ತದೆ. ದೇಶದ ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಗೊಂದಲವಿಲ್ಲದಿರಲು ಕಾರಣ ಡಾ.ಬಿ.ಆರ್.ಅಂಬೇಡ್ಕರ್ ಬರೆದ ಅಚ್ಚುಕಟ್ಟಾದ ಸಂವಿಧಾನ ಕಾರಣ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ನಗರದ ಕುವೆಂಪು ಕಲಾಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಮೇಲೆ ಕಳೆದ 27 ವರ್ಷಗಳಿಂದಲೂ ನಂಬಿಕೆ ಇಟ್ಟಿರುವ ಪ್ರಜಾಪ್ರಭುತ್ವವಿರುವ ನಮ್ಮ ದೇಶದ ರಾಜಕೀಯ ವ್ಯವಸ್ಥೆ ಇವತ್ತಿಗೂ ಗೌರವಕ್ಕೆ ಭಾಜನವಾಗಿದೆ ಎಂದರು.
ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ತತ್ವಗಳನ್ನು ಅಳವಡಿಸಿಕೊಂಡಿರುವ ಜೀವನ ಕ್ರಮವನ್ನು ರಾಷ್ಟ್ರೀಯ ಜೀವನ ಕ್ರಮವಾಗಿ ಅಳವಡಿಸಿಕೊಳ್ಳದಿದ್ದರೆ ರಾಜಕೀಯ ಪ್ರಜಾಪ್ರಭುತ್ವ ಅರ್ಥಹೀನವಾಗುತ್ತದೆ ಎಂದು 1949 ರಲ್ಲೇ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ್ದು, ಅದು ಅಂದಿಗೂ, ಇಂದಿಗೂ ಪ್ರಸ್ತುತ ಎಂದ ಅವರು, ಶ್ರೀಲಂಕಾ, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳು ಭಾರತದ ಜೊತೆಗೇ ಸ್ವಾತಂತ್ರ್ಯ ಪಡೆದಿದ್ದರೂ ಅಲ್ಲಿನ್ನೂ ಪ್ರಜಾಪ್ರಭುತ್ವ ಸ್ಥಿರವಾಗಿಲ್ಲ. ಯಶಸ್ವಿ ರಾಷ್ಟ್ರಗಳಾಗಿ ಅವು ಉಳಿದಿಲ್ಲ. ಇತ್ತೀಚೆಗೆ ಸಮಸ್ಯೆಗಳು ಉದ್ಭವಿಸಿದ ನೇಪಾಳ, ಮ್ಯಾನ್ಮಾರ್, ಬಾಂಗ್ಲಾ ದೇಶಗಳು ಇದಕ್ಕೆ ಉದಾಹರಣೆ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಸಂವಿಧಾನ ರಚನೆ ಪ್ರಕ್ರಿಯೆಯ ಬಗ್ಗೆ ಸುದೀರ್ಘವಾಗಿ ವಿವರ ನೀಡಿದರಲ್ಲದೆ, ಸಂವಿಧಾನ ರಚನೆಯ ನಂತರ ಸಮಸ್ತ ಭಾರತೀಯರಿಗೆ ಸಮಾನ ಸ್ಥಾನಮಾನ ಪಡೆಯುವ ಅವಕಾಶ ಎಲ್ಲರಿಗೂ ಸಿಕ್ಕಿತು. ಎಷ್ಟೋ ದೇಶಗಳು ಜಮೀನ್ದಾರರಿಗೆ ಮಾತ್ರ, ಇನ್ನು ಕೆಲವು ದೇಶಗಳು ಪುರುಷರಿಗೆ ಮಾತ್ರ ಮತದಾನದ ಅಧಿಕಾರವನ್ನು ನೀಡಿದ್ದವು. ಡಾ.ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಈ ದೇಶವನ್ನು ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಅಳವಡಿಸಿಕೊಂಡಿದ್ದು ಮಾತ್ರವಲ್ಲ, ಸಮಾನ ಮತದಾನದ ಅಧಿಕಾರವನ್ನು ಮಹಿಳೆಯರು, ಪುರುಷರು ಭೇದವಿಲ್ಲದೆ ಅವಕಾಶ ಪಡೆಯುವಂತಾಯಿತು. ಜನಸಾಮಾನ್ಯನೂ ಕೂಡ ದೇಶ ಆಳುವ ಕನಸು ಕಾಣಲು ಅವಕಾಶ ಮಾಡಿಕೊಟ್ಟಿರುವುದು ಮಾತ್ರವಲ್ಲ, ದನ ಕಾಯುವವನೂ ಕೂಡ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಮುಖ್ಯಮಂತ್ರಿಯಾಗುವವರೆಗೆ ಸಂವಿಧಾನ ಅವಕಾಶ ಕಲ್ಪಿಸಿಕೊಟ್ಟಿತು ಎಂದು ತಿಳಿಸಿದರು.
ಸಂವಿಧಾನದ ಮಹತ್ವದ ಕುರಿತು ನಗರದ ಸ್ಕೂಲ್ ಆಫ್ ಲಾದ ಸಹಾಯಕ ಪ್ರಾಧ್ಯಾಪಕ ಶಿವಪ್ಪ ನಾಗಾವಿ ಉಪನ್ಯಾಸ ನೀಡಿದರು. ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರು ಸಂವಿಧಾನದ ಪೀಠಿಕೆ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಚಿಕ್ಕಮಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಘ-ಸಂಸ್ಥೆಗಳ ಮುಖಂಡರು ಹಾಜರಿದ್ದರು.ಕಾರ್ಯಕ್ರಮಕ್ಕೆ ಮುನ್ನ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿದರು. ಅನಂತರ ತಾಲೂಕು ಕಚೇರಿಯಿಂದ ಕುವೆಂಪು ಕಲಾಮಂದಿರದವರೆಗೆ ಅಂಬೇಡ್ಕರ್ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಿತು.