ಗ್ರಾಮೀಣ ಮಕ್ಕಳ ಪ್ರತಿಭೆ ಪ್ರಶ್ನಾತೀತವಾಗಿದ್ದು ಉತ್ತಮ ಶೈಕ್ಷಣಿಕ ಅವಕಾಶ ಕಲ್ಪಿಸಿದರೆ ಈ ಮಕ್ಕಳು ಬಹು ದೊಡ್ಡ ಸಾಧಕರಾಗಿ ಹೊರಹೊಮ್ಮಲು ಎಲ್ಲ ಅವಕಾಶಗಳಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನಿಕಟ್ಟಿ ತಿಳಿಸಿದರು.
ಹಾನಗಲ್ಲ: ಗ್ರಾಮೀಣ ಮಕ್ಕಳ ಪ್ರತಿಭೆ ಪ್ರಶ್ನಾತೀತವಾಗಿದ್ದು ಉತ್ತಮ ಶೈಕ್ಷಣಿಕ ಅವಕಾಶ ಕಲ್ಪಿಸಿದರೆ ಈ ಮಕ್ಕಳು ಬಹು ದೊಡ್ಡ ಸಾಧಕರಾಗಿ ಹೊರಹೊಮ್ಮಲು ಎಲ್ಲ ಅವಕಾಶಗಳಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನಿಕಟ್ಟಿ ತಿಳಿಸಿದರು.ಸೋಮವಾರ ಗುರುಭವನದಲ್ಲಿ ಹ್ಯುಮ್ಯಾನಿಟಿ ಫೌಂಡೇಶನ್‌ನ ಪರಿವರ್ತನ ಕಲಿಕಾ ಕೇಂದ್ರ ಆಯೋಜಿಸಿದ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಶಾಲಾ ಪೂರ್ವ ಶೈಕ್ಷಣಿಕ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪರಿಶ್ರಮಕ್ಕೆ ಯಾವಾಗಲೂ ಒಳ್ಳೆ ಫಲವಿದ್ದೇ ಇದೆ. ಶಾಲಾ ಹಂತದಲ್ಲಿ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಅತ್ಯವಶ್ಯ. ರಜಾ ದಿನಗಳನ್ನು ಮಕ್ಕಳಿಗಾಗಿ ಶೈಕ್ಷಣಿಕವಾಗಿ ಸದುಪಯೋಗ ಮಾಡುವಂತಹ ಪರಿವರ್ತನ ಕಲಿಕಾ ಕೇಂದ್ರದ ಈ ಶಿಬಿರ ನಿಜಕ್ಕೂ ಅತ್ಯಂತ ಫಲಪ್ರದವಾದುದು. ಮಕ್ಕಳಿಗೆ ಒತ್ತಡವಿಲ್ಲದೆ ಕಲಿಕೆಗೆ ಅವಕಾಶವಾಗಬೇಕು. ಓದುವ ಆಸಕ್ತಿ ಮೂಡಿಸಬೇಕು. ಜ್ಞಾನಾರ್ಜನೆಯಲ್ಲಿ ಯಾವುದೂ ಕಠಿಣವಲ್ಲ. ಮನಸ್ಸಿಟ್ಟು ಸ್ವೀಕರಿಸಿದರೆ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಸಾಧ್ಯ. ಮುಂಬರುವ ವರ್ಷ ಹಾನಗಲ್ಲ ತಾಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಇನ್ನಷ್ಟು ಉತ್ತಮಗೊಳಿಸುವ ಯೋಜನೆ ಇದೆ. ಇದಕ್ಕಾಗಿ ಶಾಸಕ ಶ್ರೀನಿವಾಸ ಮಾನೆ ಅವರು ಉಚಿತವಾಗಿ ಎಲ್ಲ ಶಾಲೆಗಳಿಗೆ ನೀಡಿದ ಎಲ್ಲ ವಿಷಯಗಳ ಮಾರ್ಕ್ಸ ಸ್ಕೋರರ್ ಪುಸ್ತಕ ಕೂಡ ಹೆಚ್ಚು ಸಹಕಾರಿಯಾಗಬಲ್ಲದು ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ತರಬೇತುದಾರ ಶಿಕ್ಷಕ ಪ್ರದೀಪಕುಮಾರ, ಕಲಿಕೆ ನಿರಂತರವಾಗಿರಬೇಕು. ಒಂದು ಕಡೆ ಫಲಿತಾಂಶ ಆಧಾರಿತ ಕಲಿಕೆ, ಇನ್ನೊಂದು ಕಡೆ ಜ್ಞಾನಾರ್ಜನೆ ಆಧಾರಿತ ಕಲಿಕೆಗಳೆರಡೂ ಬದುಕು ರೂಪಿಸಿಕೊಳ್ಳಲು ಸಹಕಾರಿಯಾದವುಗಳು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬದುಕಿನಲ್ಲಿ ಬುನಾದಿ ಶಿಕ್ಷಣವಾಗಿದ್ದು, ಇಲ್ಲಿಂದಲೇ ವಿದ್ಯಾರ್ಥಿ ತನ್ನ ಭವಿಷ್ಯದ ಶಿಕ್ಷಣದ ಆಯ್ಕೆ ಮಾಡಿಕೊಳ್ಳುತ್ತಾನೆ. ಓದಿಗೂ ಒಂದು ಶಿಸ್ತು ಇದ್ದರೆ ಖಂಡಿತ ಉತ್ತಮ ಯಶಸ್ಸು ಸಾಧ್ಯ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪೂರ, ಪರಿವರ್ತನ ಕಲಿಕಾ ಕೇಂದ್ರ ಶಾಲಾ ಹಂತದ ಶೈಕ್ಷಣಿಕ ಉನ್ನತಿಗೆ ಕಂಕಣಬದ್ಧವಾಗಿ ಕೆಲಸ ಮಾಡುತ್ತಿದೆ. ಹೊಸದನ್ನು ಕಲಿಯುವ ಎಲ್ಲರಿಗೂ ಮುಕ್ತ ಹಾಗೂ ಉಚಿತ ಅವಕಾಶವಿದೆ. ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಈ ಮೂಲಕ ಹಾನಗಲ್ಲ ತಾಲೂಕಿನಲ್ಲಿ ಹೊಸ ಶೈಕ್ಷಣಿಕ ಅವಿಷ್ಕಾರಕ್ಕೆ ಈ ಕೇಂದ್ರ ತೆರೆದುಕೊಂಡಿದೆ ಎಂದರು.