ಸಾರಾಂಶ
ಕೊನೆಗೆ ಬುಧುವಾರದಂದು ತಹಸೀಲ್ದಾರ್ ಅವರು ನಿಗಧಿಪಡಿಸಿದ ದಿನಾಂಕದಂತೆ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಪೊಲೀಸರ ಸರ್ಪಗಾವಲಿನಲ್ಲಿ ದಲಿತ ಕುಟುಂಬದವರಿಗೆ ದಾರಿ ಮಾಡಿಕೊಡಲು ಪ್ರಯತ್ನಿಸಿದರು,
ಮಾಲೂರು: ತಾಲೂಕಿನ ಹೊಸಹಳ್ಳಿ ಗ್ರಾಮದ ದಲಿತರ ಮನೆಗಳಿಗೆ ದಾರಿ ಮಾಡಿಕೊಡುವಂತೆ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದ ದಲಿತ ಸಂಘರ್ಷ ಅಂಬೇಡ್ಕರ್ ವಾದ ದಲಿತ ಬಹುಜನ ಸಂಘಟನೆಗಳ ಒಕ್ಕೂಟದ ಪ್ರತಿಭಟನೆಗಳಿಗೆ ಮಣಿದ ತಾಲೂಕು ಆಡಳಿತವು ತಹಸೀಲ್ದಾರ್ ಹಾಗೂ ಸರ್ವೇ ಇಲಾಖೆಯವರ ನೇತೃತ್ವದಲ್ಲಿ ದಾರಿ ಮಾಡಿಕೊಡುವಲ್ಲಿ ಯಶಸ್ವಿಯಾಯಿತು.
ಮಾಲೂರು ತಾಲೂಕಿನ ಹೊಸಹಳ್ಳಿ ಅಗ್ರಹಾರ ಗ್ರಾಮದ ಸರ್ವೇ ನಂ ೧ ರ ಸರ್ಕಾರಿ ಬಂಜರು ಜಮೀನನ್ನು ಖಾಸಗಿ ವ್ಯಕ್ತಿ ಒತ್ತುವರಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ದಲಿತರ ಮನೆಗಳಿಗೆ ದಾರಿ ಇಲ್ಲದೇ ಪರದಾಡುತ್ತಿದ್ದರು. ದಾರಿಗಾಗಿ ದಲಿತ ಬಹುಜನ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ವಿಜಯಕುಮಾರ್ ನೇತೃತ್ವದಲ್ಲಿ ಅಂಬೇಡ್ಕರ್‌ವಾದದ ನೂರಾರು ಕಾರ್ಯಕರ್ತರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ತಹಸೀಲ್ದಾರ್ ಕೆ.ರಮೇಶ್ ರವರು ಪೋಲಿಸ್ ಬಂದೋಬಸ್ತ್ ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದರು.ಕೊನೆಗೆ ಬುಧುವಾರದಂದು ತಹಸೀಲ್ದಾರ್ ಅವರು ನಿಗಧಿಪಡಿಸಿದ ದಿನಾಂಕದಂತೆ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಪೊಲೀಸರ ಸರ್ಪಗಾವಲಿನಲ್ಲಿ ದಲಿತ ಕುಟುಂಬದವರಿಗೆ ದಾರಿ ಮಾಡಿಕೊಡಲು ಪ್ರಯತ್ನಿಸಿದರು, ಆದರೆ ಆ ಕುಟುಂಬದವರು ಒಪ್ಪದ ಕಾರಣ ಅವರ ಮನವೊಲಿಸಿ ಒತ್ತುವರಿ ಜಾಗದಲ್ಲಿ ನಿರ್ಮಿಸಿದ್ದ ಕಟ್ಟಡವನ್ನು ಉಳಿಸಿ ಮುಂಭಾಗದಲ್ಲಿ ರಸ್ತೆಯನ್ನು ಮಾಡಿಕೊಟ್ಟರು. ತಾಲೂಕಿನಲ್ಲಿ ಸಹ ಸಾಕಷ್ಟು ಸರ್ಕಾರಿ ಭೂಮಿಗಳು ಒತ್ತುವರಿಯಾಗಿದ್ದು ಅಧಿಕಾರಿಗಳು ಆದಷ್ಟು ಸರ್ಕಾರಿ ಭೂಮಿಯನ್ನು ಗುರುತಿಸಿ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಬಹುಜನ ಸಂಘಟನೆ ಒಕ್ಕೂಟ ಆಗ್ರಹಿಸಿತು.
ಬಹುಜನ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಸಂಗಸಂದ್ರ ವಿಜಯಕುಮಾರ್, ಕದಸಂಸ ಅಂಬೇಡ್ಕರ್‌ವಾದ ಜಿಲ್ಲಾ ಸಂಘಟನಾ ಸಂಚಾಲಕ ಲಕ್ಕೂರು ವೆಂಕಟೇಶ್, ಪೊಲೀಸ್ ಪಿ.ಎಸ್.ಐ ವರಲಕ್ಷ್ಮೀ, ರೆವಿನ್ಯೂ ಅಧಿಕಾರಿ ರಾಹುಲ್, ದಲಿತ ದೌಜನ್ಯ ಜಾಗೃತಿ ಸಮಿತಿ ಸದಸ್ಯೆ ಮಂಜುಳ ಶ್ರೀನಿವಾಸ್, ಅಗ್ರಹಾರ ಹೊಸಹಳ್ಳಿ ಬಾಗ್ಯಮ್ಮ, ಬಾಬು, ಶಂಕರ್, ಕೋಟೆ ಶ್ರೀನಿವಾಸ್, ನಾಗರಾಜ್ ಸೇರಿದಂತೆ ಸಂಘಟನೆ ಪದಾಧಿಕಾರಿಗಳಿದ್ದರು.