ಶಾಸಕರು ಹಾಗೂ ತಾಲೂಕು ಆಡಳಿತದ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ತಿಪಟೂರು ತಾಲೂಕು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಹೊರಗುಳಿದಿರುವುದರಿಂದ ಇಲ್ಲಿನ ರೈತರಿಗೆ ತೀವ್ರ ಅನ್ಯಾಯವಾಗಿದೆ ಎಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಆಪಾದಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಶಾಸಕರು ಹಾಗೂ ತಾಲೂಕು ಆಡಳಿತದ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ತಿಪಟೂರು ತಾಲೂಕು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಹೊರಗುಳಿದಿರುವುದರಿಂದ ಇಲ್ಲಿನ ರೈತರಿಗೆ ತೀವ್ರ ಅನ್ಯಾಯವಾಗಿದೆ ಎಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಆಪಾದಿಸಿದರು.ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯ ಬಹುತೇಕ ಎಲ್ಲ ಒಂಬತ್ತು ತಾಲೂಕುಗಳು ಬರಪೀಡಿತ ತಾಲೂಕಿನ ಪಟ್ಟಿಗೆ ಸೇರಿವೆ. ಆದರೆ ತಿಪಟೂರು ತಾಲೂಕಿನಲ್ಲೂ ಸಹ ಕೂಡ ಮಳೆ ಕೈಕೊಟ್ಟು ಬರಗಾಲ ಆವರಿಸಿದ್ದು ಬಹುತೇಕ ಬಿತ್ತನೆ ನಡೆದೇ ಇಲ್ಲ. ಮಳೆ ಇಲ್ಲದೆ ತಾಲೂಕಿನ ಕೆರೆಕಟ್ಟೆಗಳು ಬರಿದಾಗಿದ್ದು ಕುಡಿಯುವ ನೀರಿಗೆ ತೊಂದರೆಯಾಗಿದೆ. ಇಂತಹ ಪರಿಸ್ಥಿತಿ ಇದ್ದರೂ ಬರಪೀಡಿತ ಪಟ್ಟಿಯಲ್ಲಿ ಇಲ್ಲದ ಕಾರಣ ಗೋವುಗಳಿಗೆ ಮೇವು, ಕುಡಿಯುವ ನೀರು, ಬೆಳೆ ಪರಿಹಾರ ಮೊದಲಾದ ಸೌಲಭ್ಯಗಳು ಕೈತಪ್ಪಿಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಇನ್ನು ಎರಡು ವಾರದಲ್ಲಿ ತಿಪಟೂರು ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ ಜೆಡಿಎಸ್ ಪಕ್ಷದ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದಲ್ಲದೆ ತಿಪಟೂರಿನಿಂದ ತುಮಕೂರಿನ ಜಿಲ್ಲಾಧಿಕಾರಿ ಕಚೇರಿವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಶಿವಸ್ವಾಮಿ ಮಾತನಾಡಿ ಅಧಿಕಾರಿಗಳು ತಾಲೂಕಿನ ಮಳೆ ಮತ್ತು ಬೆಳೆ ಮಾಹಿತಿಯನ್ನು ಸರ್ಕಾರ ಕ್ಕೆ ಸಲ್ಲಿಸುವಲ್ಲಿ ನಿರ್ಲಕ್ಷ ತೋರಿರುವುದು ಸ್ಪಷ್ಟವಾಗಿದೆ. ಈ ಕೂಡಲೇ ಸರ್ಕಾರ ಕ್ಕೆ ಸರಿಯಾದ ಮಾಹಿತಿಯನ್ನು ಶಾಸಕರು ಹೇಳಿ ಅಧಿಕಾರಿಗಳಿಂದ ನೀಡಿಸಿ ತಿಪಟೂರಿಗೆ ಬರ ಪರಿಹಾರ, ರೈತರಿಗೆ ನೆರವು ದೊರಕಿಸಿಕೊಡಲು ಮುಂದಾಗಬೇಕು ಎಂದು ತಿಳಿಸಿದರು.ಜೆಡಿಎಸ್ ಪಕ್ಷದ ವತಿಯಿಂದ ತಹಸೀಲ್ದಾರ್ ಮೋಹನ್‌ಕುಮಾರ್‌ರವರಿಗೆ ಮನವಿಪತ್ರ ಸಲ್ಲಿಸಿ ಶೀಘ್ರವಾಗಿ ಬರಪೀಡಿತ ಪಟ್ಟಿಗೆ ತಿಪಟೂರು ತಾಲೂಕು ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ತಹಸೀಲ್ದಾರ್ ಮೋಹನ್‌ಕುಮಾರ್ ಮಾತನಾಡಿ ಎರಡನೇ ಹಂತದಲ್ಲಿ ತಿಪಟೂರು ತಾಲೂಕು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಲಿದೆ ಎಂದರು. ಪ್ರತಿಭಟನೆಯಲ್ಲಿ ನಟರಾಜು ಗುರುಗದಹಳ್ಳಿ, ರಾಜಶೇಖರ್, ಸುದರ್ಶನ್ ಗೊರಗೊಂಡನಹಳ್ಳಿ, ಸಂತೋಷ್, ಮಂಜು ಪರುವಗೊಂಡನಹಳ್ಳಿ, ರಾಜಣ್ಣ, ಇಮ್ರಾನ್, ಸ್ವಾಮಿ ಗೌಡನಕಟ್ಟೆ, ಸಿದ್ದೇಶ್ ಮುಂತಾದವರು ಉಪಸ್ಥಿತರಿದ್ದರು.