ದಿನಂಪ್ರತಿ 3 ಲಕ್ಷ ಲೀಟರ್‌ಗೆ ಹೆಚ್ಚಿಸುವ ಗುರಿ

| Published : Apr 02 2024, 01:07 AM IST

ದಿನಂಪ್ರತಿ 3 ಲಕ್ಷ ಲೀಟರ್‌ಗೆ ಹೆಚ್ಚಿಸುವ ಗುರಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ದಿನಗಳಲ್ಲಿ ಹಾಲು ಶೇಖರಣೆ ದಿನಂಪ್ರತಿ 3 ಲಕ್ಷ ಲೀಟರ್‌ಗೆ ಹೆಚ್ಚಿಸುವ, 2 ಲಕ್ಷ ಲೀಟರ್‌ ಹಾಲನ್ನು ಒಕ್ಕೂಟದ ವ್ಯಾಪ್ತಿಯ ಮಾರುಕಟ್ಟೆಯಲ್ಲಿ ಮಾರಾಟ ಕೈಗೊಳ್ಳಲು ಗುರಿ ಇಟ್ಟುಕೊಳ್ಳಲಾಗಿದೆ ಎಂದು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮುಂದಿನ ದಿನಗಳಲ್ಲಿ ಹಾಲು ಶೇಖರಣೆ ದಿನಂಪ್ರತಿ 3 ಲಕ್ಷ ಲೀಟರ್‌ಗೆ ಹೆಚ್ಚಿಸುವ, 2 ಲಕ್ಷ ಲೀಟರ್‌ ಹಾಲನ್ನು ಒಕ್ಕೂಟದ ವ್ಯಾಪ್ತಿಯ ಮಾರುಕಟ್ಟೆಯಲ್ಲಿ ಮಾರಾಟ ಕೈಗೊಳ್ಳಲು ಗುರಿ ಇಟ್ಟುಕೊಳ್ಳಲಾಗಿದೆ ಎಂದು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.

ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಸಭಾಗೃಹದಲ್ಲಿ ಜರುಗಿದ ಒಕ್ಕೂಟದ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸೋಮವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸಂಸ್ಕರಿಸಿ ತಯಾರಿಸಲು ಹೊಸ ತಂತ್ರಜ್ಞಾನವುಳ್ಳ ಸಂಪೂರ್ಣ ಸ್ವಯಂಚಾಲಿತ ಮೇಡೈರಿಯನ್ನು ಸುಮಾರು ₹೨೫೦ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಹೈನಗಾರ ರೈತರಿಗೆ ಮುಂದಿನ ದಿನಗಳಲ್ಲಿ ಸಮರ್ಪಕವಾಗಿ ಬಿಲ್ ಪಾವತಿ ಮಾಡಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರವು ಸಹಕಾರಿ ಇಲಾಖೆಯಲ್ಲಿ ತಿದ್ದುಪಡಿಯನ್ನು ತರಲು ಉತ್ಸುಕವಾಗಿದೆ. ಈಗಾಗಲೇ ರಾಜ್ಯಮಟ್ಟದ ಸಹಕಾರಿ ಮಹಾಮಂಡಳಿಗೆ ಹೋಗ ಬಯಸುವವರು ಮೊದಲಿಗೆ ಜಿಲ್ಲಾ ಒಕ್ಕೂಟಕ್ಕೆ ಅಧ್ಯಕ್ಷರಾಗಬೇಕು. ಅಧ್ಯಕ್ಷರಾದವರು ಮಹಾಮಂಡಳಿಗೆ ನಿರ್ದೇಶಕರಾಗಬೇಕು ಎನ್ನುವ ಹೊಸ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಹೊಸ ಕಾಯ್ದೆಯು ವಿಧಾನ ಪರಿಷತ್ತಿನಲ್ಲಿ ಸೋಲಾಗಿದ್ದು, ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಸಹಕಾರಿ ಇಲಾಖೆಯ ಹೊಸ ನಿಯಮ ಜಾರಿಯಾಗುವುದರಿಂದ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಅಧ್ಯಕ್ಷರಾಗಬೇಕಾಯಿತು ಎಂದು ಅಧ್ಯಕ್ಷ ಸ್ಥಾನದ ಗುಟ್ಟನ್ನು ಬಹಿರಂಗ ಪಡಿಸಿದರು.

ಹಿಂದಿನ ಅವಧಿಯ ಅಧ್ಯಕ್ಷರಾಗಿ ವಿವೇಕರಾವ್ ಪಾಟೀಲ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ, ಕಹಾಮ ಆಡಳಿತ ಮಂಡಳಿಯ ಚುಕ್ಕಾಣಿಯನ್ನು ಮತ್ತೊಮ್ಮೆ ಹಿಡಿಯಬೇಕಾಗಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕಾಯಿತು. ಮುಂದಿನ ದಿನಗಳಲ್ಲಿ ಯಾವುದೇ ಗೊಂದಲಗಳು ನಡೆಯಬಾರದು. ಈ ಹಿನ್ನೆಲೆಯಲ್ಲಿ ವಿವೇಕರಾವ್ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಣಯ ಮಾಡಲಾಯಿತು. ಹೀಗಾಗಿಯೇ ಅಧ್ಯಕ್ಷರಾಗಲು ಒಪ್ಪಿಕೊಂಡಿರುವುದಾಗಿ ತಿಳಿಸಿದರು.

ಬೆಳಗಾವಿ ಹಾಲು ಒಕ್ಕೂಟದ ಅಭಿವೃದ್ಧಿಗೆ ಎಲ್ಲರೂ ಒಂದಾಗಿ, ಒಗ್ಗಟ್ಟಾಗಿ ದುಡಿಯೋಣ. ಪಕ್ಷಾತೀತವಾಗಿ ಕೆಲಸವನ್ನು ಮಾಡೋಣ. ಜಿಲ್ಲಾ ಹಾಲು ಒಕ್ಕೂಟಕ್ಕೆ ರೈತರ ಸಹಕಾರ ಅಗತ್ಯವಾಗಿದೆ. ರಾಯಬಾಗ, ಗೋಕಾಕ, ಮೂಡಲಗಿ ತಾಲೂಕಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನು ಪೂರೈಸುತ್ತಿದ್ದಾರೆ. ಆದರೆ, ನಿಪ್ಪಾಣಿ, ಕಾಗವಾಡ, ಚಿಕ್ಕೋಡಿ, ಅಥಣಿ ತಾಲೂಕಿನ ರೈತರು ಮಾತ್ರ ನೆರೆಯ ಮಹಾರಾಷ್ಟ್ರಕ್ಕೆ ಹಾಲನ್ನು ಪೂರೈಕೆ ಮಾಡುತ್ತಿದ್ದಾರೆ. ಬೈಲಹೊಂಗಲ ರೈತರು ಕಡಿಮೆ ಪ್ರಮಾಣದಲ್ಲಿ ಹಾಲನ್ನು ಪೂರೈಸುತ್ತಿದ್ದಾರೆ. ಇದಕ್ಕೆ ಕಾರಣ ರೈತರು ಹೈನುಗಾರಿಕೆಗೆ ಅಷ್ಟಾಗಿ ಒತ್ತು ಕೊಡುತ್ತಿಲ್ಲ. ನೀರಿನ ಸಮಸ್ಯೆಯನ್ನು ಮುಂದೆ ಮಾಡುತ್ತಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ನೀರಿನ ಅಭಾವ ಕಂಡು ಬಂದರೂ ಅಲ್ಲಿನ‌ ರೈತರು ಹೈನುಗಾರಿಕೆಗೆ ಆದ್ಯತೆ ನೀಡುತ್ತಿದ್ದಾರೆ. ನಮ್ಮ ಉತ್ತರ ಕರ್ನಾಟಕದ ಭಾಗದಲ್ಲಿಯೂ ರೈತರು ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಹೈನುಗಾರಿಕೆ ವೃದ್ಧಿಯಾದರೇ ಇಡೀ ರೈತರ ಬದುಕು ಹಸನಾಗಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಹೈನು ಕ್ರಾಂತಿಯಾಗಬೇಕಿದೆ. ನಮ್ಮ ಜಿಲ್ಲೆಯಿಂದ ಪಕ್ಕದ ಮಹಾರಾಷ್ಟ್ರಕ್ಕೆ ಹೋಗುತ್ತಿರುವ 15 ಲಕ್ಷ ಲೀಟರ್‌ ಹಾಲನ್ನು ನಮ್ಮಲ್ಲಿಯೇ ಉಳಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ವಿವೇಕರಾವ್ ಪಾಟೀಲ ಅವರು ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದರು. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕರಾದ ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆನ್ನವರ, ಡಾ.ಬಸವರಾಜ ಪರನ್ನವರ, ಬಾಬುರಾವ ವಾಘಮೋಡೆ, ವೀರುಪಾಕ್ಷಿ ಈಟಿ, ರಾಯಪ್ಪ ಡೂಗ, ಪ್ರಕಾಶ ಅಂಬೋಜಿ, ಸಂಜಯ ಶಿಂತ್ರಿ, ಸತ್ತೆಪ್ಪ ವಾರಿ, ಶಂಕರ್ ಸಿದ್ನಾಳ, ಮಹಾದೇವ ಬಿಳಿಕುರಿ, ರಮೇಶ್ ಅಣ್ಣಿಗೇರಿ, ಸವಿತಾ ಖಾನಪ್ಪಗೋಳ, ವ್ಯವಸ್ಥಾಪಕ ನಿರ್ದೇಶಕ ಎಂ. ಕೃಷ್ಣಪ್ಪ ಸೇರಿದಂತೆ ಅನೇಕರು

ಉಪಸ್ಥಿತರಿದ್ದರು. ರಾಣಿ ಚನ್ನಮ್ಮ ವಿವಿ ರಿಜಿಸ್ಟರ್ ರಾಜಶ್ರೀ ಜೈನಾಪುರ ಅವರು ರಿಟರ್ನಿಂಗ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.ಬಾಲಚಂದ್ರ ಅವರೊಬ್ಬರೇ ನಾಮಪತ್ರ: ಅವಿರೋಧ ಆಯ್ಕೆ

ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಸಭಾಗೃಹದಲ್ಲಿ ಸೋಮವಾರ ಜರುಗಿದ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಬಾಲಚಂದ್ರ ಜಾರಕಿಹೊಳಿ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಈ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದರು.ಹಿಂದಿನ ಅಧ್ಯಕ್ಷ ವಿವೇಕರಾವ ಪಾಟೀಲ ಮತ್ತು ಒಕ್ಕೂಟದ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ. ಅದಕ್ಕಾಗಿ ಎಲ್ಲ ಸದಸ್ಯರಿಗೆ ಆಭಾರಿಯಾಗಿರುವೆ. ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಪ್ರಗತಿಗಾಗಿ ಆಡಳಿತ ಮಂಡಳಿಯ ಸದಸ್ಯರು, ಹೈನಗಾರರು ಮತ್ತು ಸಿಬ್ಬಂದಿ ಒಗ್ಗಟ್ಟಾಗಿ ಶ್ರಮಿಸಿದರೇ ಖಂಡಿತವಾಗಿಯೂ ನಮ್ಮ ಒಕ್ಕೂಟಗಳು ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತವೆ.

-ಬಾಲಚಂದ್ರ ಜಾರಕಿಹೊಳಿ, ಬೆಮೂಲ ನೂತನ ಅಧ್ಯಕ್ಷರು.