ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿಶಾಲೆಯ ಕೊಠಡಿಯಲ್ಲಿದ್ದಾಗ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಮುಖ್ಯೋಪಾಧ್ಯಾಯರೊಬ್ಬರು ಅಸ್ವಸ್ಥಗೊಂಡಿರುವ ಘಟನೆ ಜಯನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದಿದೆ.
ಮುಖ್ಯೋಪಾಧ್ಯಾಯ ಎಸ್.ಎಸ್.ಹಿರೇಮಠ ಎಂಬವರಿಗೆ ವಿದ್ಯುತ್ ಶಾಕ್ ತಗುಲಿದೆ. ಅಸ್ವಸ್ಥಗೊಂಡಿದ್ದ ಅವರನ್ನು ಸಹ ಶಿಕ್ಷಕರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸರ್ಕಾರಿ ಶಾಲೆಯ ಕಟ್ಟಡದ ಮೇಲೆ ಹೈಟೆನ್ಷನ್ ವೈರ್ ಹಾಯ್ದು ಹೋಗಿದೆ. ಆದ್ದರಿಂದ, ಏಕಾಏಕಿ ವಿದ್ಯುತ್ ಪ್ರವಹಿಸಿದ ಪರಿಣಾಮ ಅವಘಡ ಸಂಭವಿಸಿದೆ ಎನ್ನಲಾಗಿದೆ.ಹಿರೇಮಠ ಅವರು ಎಂದಿನಂತೆ ಶಾಲಾ ಮಕ್ಕಳ ದಾಖಲಾತಿ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಹೈಟೆನ್ಷನ್ ವೈರ್‌ನಲ್ಲಿ ಏಕಾಏಕಿ ಅಧಿಕ ಒತ್ತಡದ ವಿದ್ಯುತ್ ಪ್ರವಹಿಸಿದ ಪರಿಣಾಮ ಶಾಕ್ ಹೊಡೆದು ಅವರು ಅಸ್ವಸ್ಥರಾಗಿದ್ದಾರೆ. ಶಾಕ್ ಎಫೆಕ್ಟ್‌ನಿಂದ ದಿಢೀರ್ ಕೈಕಾಲು ಸೆಳೆತ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಲೆಯಲ್ಲಿ ನೂರಾರು ಮಕ್ಕಳು ಓದುತ್ತಿದ್ದು, ಹೆಚ್ಚಿನ ಅನಾಹುತ ಸಂಭವಿಸುವ ಮುನ್ನವೇ ಬೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಅಲ್ಲದೇ, ನೇತಾಡುತ್ತಿರುವ ವೈರ್‌ಗಳನ್ನು ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯರು ಕೂಡ ಒತ್ತಾಯಿಸಿದ್ದಾರೆ.
ಹೆಸ್ಕಾಂ ನಿರ್ಲಕ್ಷ್ಯ:ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದ ಮೇಲೆ ಹಾದು ಹೋಗಿರುವ ಹೈಟೆನ್ಷನ್ ತಂತಿ ತೆರವುಗೊಳಿಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ ಕಳೆದ ಮಾ.1ರಂದೇ ಹೆಸ್ಕಾಂಗೆ ಪತ್ರ ಬರೆದು ಮನವಿ ಸಲ್ಲಿಸಿದ್ದರು. ಇದಕ್ಕೂ ಮುನ್ನ ಮೂರು ವರ್ಷಗಳ ಹಿಂದೆಯೂ ವೈರ್ ದುರಸ್ತಿಗೊಳಿಸುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ, ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ಈಗ ನಡೆದ ಘಟನೆಯಿಂದ ಮಕ್ಕಳು ಹಾಗೂ ಪಾಲಕರು ಕೂಡ ಆತಂಕಗೊಂಡಿದ್ದು, ಹೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆ ಶಿಕ್ಷಕರು ಮತ್ತು ಪಾಲಕರು ಗಾಬರಿಗೊಂಡಿದ್ದು, ಕೂಡಲೇ ಹೆಸ್ಕಾಂ ಅಧಿಕಾರಿಗಳು ಕ್ರಮ ಜರುಗಿಸಬೇಕು. ಹೈ ವೋಲ್ಟೇಜ್ ತಂತಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
-----------