ಜೀವನದ ಅರ್ಥ ಅರ್ಥೈಸುವವನೇ ಶಿಕ್ಷಕ: ಗಚ್ಚಿನಮಠ

| Published : Sep 11 2025, 12:03 AM IST

ಸಾರಾಂಶ

ಶಾಲೆಗಳು ಸಮುದಾಯದ ಕೇಂದ್ರ ಬಿಂದುಗಳು, ಮಕ್ಕಳನ್ನು ಭಾವಿ ಭವಿಷ್ಯಕ್ಕೆ ತಯಾರು ಮಾಡುವ ಜವಾಬ್ದಾರಿಯುತ ತಾಣಗಳು

ಗದಗ: ಸಾಮಾನ್ಯ ಮನುಷ್ಯನ ಬದುಕಿನ ಮೌಲ್ಯ, ಜೀವನದ ಅರ್ಥ,ನಿರ್ಧಿಷ್ಟ ಗುರಿ ತಲುಪಲು ಇರುವ ಸಾಧನಗಳನ್ನು ಸರಿಯಾದ ಕ್ರಮದಲ್ಲಿ ತಿದ್ದಿ ಬದುಕನ್ನು ಹಸನುಗೊಳಿಸಲು ಶ್ರಮಿಸುವ ಪರಿಶ್ರಮಿಯೇ ಶಿಕ್ಷಕ ಎಂದು ರೋಟರಿ ಕ್ಲಬ್‌ನ ಅಧ್ಯಕ್ಷ ಡಾ. ಆರ್.ವಿ. ಗಚ್ಚಿನಮಠ ಹೇಳಿದರು.

ನಗರದ ರೋಟರಿ ಐ ಕೇರ್ ಸೆಂಟರ್‌ನಲ್ಲಿ ರೋಟರಿ ಕ್ಲಬ್‌ನ ಸಾಪ್ತಾಹಿಕ ಸಭೆಯಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಲೆಗಳು ಸಮುದಾಯದ ಕೇಂದ್ರ ಬಿಂದುಗಳು, ಮಕ್ಕಳನ್ನು ಭಾವಿ ಭವಿಷ್ಯಕ್ಕೆ ತಯಾರು ಮಾಡುವ ಜವಾಬ್ದಾರಿಯುತ ತಾಣಗಳು. ಮಕ್ಕಳ ಜೀವನ ಅರ್ಥಪೂರ್ಣವಾಗಿ ರೂಪಿಸುವ ಶಿಕ್ಷಕ ಬಳಗವು ಸದಾ ಪೂಜ್ಯನೀಯ ಎಂದರು.

ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್.ಬುರಡಿ ಮಾತನಾಡಿ, ಶಿಕ್ಷಕ ಸಮುದಾಯವು ತ್ಯಾಗಮಯ ಜೀವಿಗಳಾಗಿದ್ದು, ಅಕ್ಷರ ಜ್ಞಾನದ ಮೂಲಕ ಅವರಲ್ಲಿ ಕಲಿಕೆಯೊಂದಿಗೆ ನೈತಿಕ-ಶೈಕ್ಷಣಿಕ ಅಭಿವೃದ್ಧಿಯ ಚಿಂತನೆ ಮೂಡಿಸಿ ಅವರನ್ನು ಭವಿಷ್ಯದ ಉಜ್ವಲ ಹಾಗೂ ಪ್ರತಿಭಾನ್ವಿತ ನಾಗರಿಕರನ್ನಾಗಿ ರೂಪಿಸುತ್ತಾರೆ ಎಂದರು.

ಬಿ.ಎಸ್. ಉಪ್ಪಿನ ಮಾತನಾಡಿ, ಶಿಕ್ಷಕರು ಪ್ರತಿಯೊಂದು ಮಗುವಿನ ಮನ ಗೆಲ್ಲುವ ಧೀಮಂತ ವ್ಯಕ್ತಿಗಳು. ಮುಗ್ಧ ಮಗುವಿನ ಮುಗುಳು ನಗೆಯನ್ನು ಇನ್ನಷ್ಟು ಅರಳಿಸಿ ಅವರ ಬದುಕನ್ನು ಹಸನುಗೊಳಿಸುವ ಕಾರ್ಯ ಶಿಕ್ಷಕರದ್ದಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಮಕ್ಕಳ ಮಾತನ್ನು ಆಲಿಸಿ ಅವರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ಶಾಲೆಯ ಒಳಗೆ ಮತ್ತು ಹೊರಗೆ ಮಕ್ಕಳು ತಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯ ಹಾಗೂ ಸ್ವಂತ ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ಸ್ವಯಂ ನಿರ್ಧಾರ ತೆಗೆದುಕೊಳ್ಳಲು ಮಕ್ಕಳನ್ನು ಪ್ರೇರೆಪಿಸುವ ಕಾರ್ಯ ನಿರಂತರ ನಡೆಯಬೇಕಿದೆ ಎಂದರು.

ಈ ವೇಳೆ ಶ್ರೀಧರ ಸುಲ್ತಾನಪೂರ, ಡಾ. ಶೇಖರ ಸಜ್ಜನರ, ಡಾ. ರಾಜಶೇಖರ ಬಳ್ಳಾರಿ, ಡಾ. ಆರ್.ಬಿ. ಉಪ್ಪಿನ, ಶಿವಾಚಾರ್ಯ ಹೊಸಳ್ಳಿಮಠ, ಚೆನ್ನವೀರಪ್ಪ ಹುಣಸಿಕಟ್ಟಿ, ವಿಶ್ವನಾಥ ಯಳಮಲಿ, ಡಾ. ವಿನಯ ಟಿಕಾರೆ, ಮಹಾಂತೇಶ ಬಾತಾಖಾನಿ, ನಾಗೇಶ ಹಂಜಗಿ, ಮಾಧವ ಕುಲಕರ್ಣಿ, ಶ್ರೀಧರಗೌಡ ಧರ್ಮಾಯತ, ಡಾ.ಧನೇಶ ದೇಸಾಯಿ, ಡಾ.ಪ್ರದೀಪ ಉಗಲಾಟ, ಎಚ್.ಎಸ್. ಪಾಟೀಲ, ಕಾರ್ತಿಕ ಮುತ್ತಿನಪೆಂಡಿಮಠ, ಪ್ರೀತಿ ಶಿವಪ್ಪಯ್ಯನಮಠ, ರುದ್ರೇಶ ಬಳಿಗಾರ ಮುಂತಾದವರಿದ್ದರು. ಡಾ. ಕಮಲಾಕ್ಷಿ ಅಂಗಡಿ ಪ್ರಾರ್ಥಿಸಿದರು. ಬಾಲಕೃಷ್ಣ ಕಾಮತ ಪರಿಚಯಿಸಿದರು. ಸುರೇಶ ಕುಂಬಾರ ನಿರೂಪಿಸಿದರು. ನರೇಶ ಜೈನ್ ವಂದಿಸಿದರು.