ಅರಳಿಕಟ್ಟೆಯಲ್ಲಿ ಸಾಹಿತ್ಯದ ಘಮ ಹೆಚ್ಚಿಸಿದ ಶಿಕ್ಷಕ!

| Published : Sep 05 2025, 01:00 AM IST

ಅರಳಿಕಟ್ಟೆಯಲ್ಲಿ ಸಾಹಿತ್ಯದ ಘಮ ಹೆಚ್ಚಿಸಿದ ಶಿಕ್ಷಕ!
Share this Article
  • FB
  • TW
  • Linkdin
  • Email

ಸಾರಾಂಶ

26 ವರ್ಷದಿಂದ ಶಿಕ್ಷಕ ವೃತ್ತಿಯಲ್ಲಿರುವ ರಾಮಾಪುರ, ಕಳೆದ 6 ವರ್ಷದಿಂದ ಕಿರೇಸೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಕೊಂಚ ವಿಭಿನ್ನವಾಗಿ ಯೋಚಿಸಿ ಶಾಲೆಯ ಚಿತ್ರಣವನ್ನೇ ಬದಲಿಸಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಅರಳಿಕಟ್ಟಿ ವಾಚನಾಲಯ; ದ್ವೈಮಾಸಿಕ ಪತ್ರಿಕೆ.., ಬಾಹ್ಯಾಕಾಶದ ಅನುಭವ ಪಡೆಯಲು ಪ್ರತ್ಯೇಕ ಲ್ಯಾಬ್‌..!

ಇದು ಹುಬ್ಬಳ್ಳಿ ತಾಲೂಕಿನ ಕಿರೇಸೂರು ಎಂಬ ಪುಟ್ಟ ಗ್ರಾಮದಲ್ಲಿನ ಸರ್ಕಾರಿ ಪ್ರೌಢಶಾಲೆಯ ಆಂಗ್ಲ ಭಾಷೆ ಶಿಕ್ಷಕ ಲಿಂಗರಾಜ ರಾಮಾಪುರ ಮಾಡಿರುವ ವಿನೂತನ ಪ್ರಯೋಗ. ಇದಕ್ಕೆ ಅಲ್ಲಿನ ಶಿಕ್ಷಕರು ಸಾಥ್ ನೀಡಿದ್ದಾರೆ.

26 ವರ್ಷದಿಂದ ಶಿಕ್ಷಕ ವೃತ್ತಿಯಲ್ಲಿರುವ ರಾಮಾಪುರ, ಕಳೆದ 6 ವರ್ಷದಿಂದ ಕಿರೇಸೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಕೊಂಚ ವಿಭಿನ್ನವಾಗಿ ಯೋಚಿಸಿ ಶಾಲೆಯ ಚಿತ್ರಣವನ್ನೇ ಬದಲಿಸಿದ್ದಾರೆ.

ಮಕ್ಕಳ ಪತ್ರಿಕೆಗೆ ಶಿಕ್ಷಕ ಸಂಪಾದಕ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಮೊಬೈಲ್‌ ಗೀಳು ಬಿಡಿಸಬೇಕು. ಸಾಹಿತ್ಯಾಭಿರುಚಿ ಬೆಳೆಸಬೇಕು ಎಂಬ ಉದ್ದೇಶದಿಂದ ಶಾಲೆಯಲ್ಲಿ "ಸಾಲಿಗುಡಿ " ಎಂಬ ಹೆಸರಿನ ದ್ವೈಮಾಸಿಕ ಪತ್ರಿಕೆಯನ್ನು ಹೊರತಂದಿದ್ದಾರೆ. ಇವರ ಯೋಚನೆಗೆ ಗ್ರಾಮಸ್ಥರು, ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ 2 ವರ್ಷದಿಂದ ಈ ದ್ವೈಮಾಸಿಕ ಪತ್ರಿಕೆ ಹೊರತರಲಾಗುತ್ತಿದೆ. 8 ಪುಟದ ಈ ಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಮುದ್ರಣವಾಗುತ್ತದೆ. ನಮ್ಮೂರು ವಿಶೇಷ, ನಮ್ಮೂರ ಸಾಧಕರು, ಮಕ್ಕಳ ಕಥೆ, ಕವನ ಹೀಗೆ ಮಕ್ಕಳು, ಪಾಲಕರು, ಶಿಕ್ಷಕರು ಏನು ಬೇಕಾದರೂ ಬರೆಯಬಹುದು. ಪುಟವಿನ್ಯಾಸವನ್ನು ಪತ್ರಿಕೆಯ ಸಂಪಾದಕರೂ ಆಗಿರುವ ಶಿಕ್ಷಕ ರಾಮಾಪುರ ಅವರೇ ಮಾಡುತ್ತಾರೆ. ಅದನ್ನು ಹುಬ್ಬಳ್ಳಿಯಲ್ಲಿ ಎ3 ಸೈಜಿನಲ್ಲಿ ಝೆರಾಕ್ಸ್‌ ಮಾಡಿಸಿ ಎಂಟು ಪುಟಗಳ ಪತ್ರಿಕೆ ಸಿದ್ಧಪಡಿಸಿ ಮನೆ ಮನೆಗೆ ಹಂಚಲಾಗುತ್ತದೆ. ಇದಕ್ಕೆ ₹5500 ಖರ್ಚಾಗುತ್ತದೆ. ಊರಿನ ಯಾರಾದರೊಬ್ಬರು ಖರ್ಚನ್ನು ನಿಭಾಯಿಸುತ್ತಿದ್ದಾರೆ. ಈ ಮೂಲಕ ಶಿಕ್ಷಕ ರಾಮಾಪುರ ಕಾರ್ಯಕ್ಕೆ ಕೈಜೋಡಿಸುತ್ತಿದ್ದಾರೆ.

ಅರಳಿಕಟ್ಟೆ ವಾಚನಾಲಯ: ಅರಳಿಕಟ್ಟೆ ಎಂದರೆ ಹರಟೆಕಟ್ಟೆ ಎಂಬ ಮಾತಿದೆ. ಶಾಲೆಯ ಆವರಣದಲ್ಲಿರುವ ಅರಳಿ ಗಿಡಕ್ಕೆ ಕಟ್ಟೆ ನಿರ್ಮಿಸಿ, ಬಯಲು ವಾಚನಾಲಯವನ್ನಾಗಿ ಕಳೆದ ವರ್ಷ ರೂಪಿಸಿದ್ದಾರೆ ಶಿಕ್ಷಕ ರಾಮಾಪುರ. ದಿನಪತ್ರಿಕೆಗಳನ್ನು ತರಿಸಿ ಮಕ್ಕಳಿಂದ ಇಲ್ಲಿ ಓದಿಸುವ ಕೆಲಸ ಮಾಡಲಾಗುತ್ತದೆ. ವಾರಕ್ಕೊಂದು ದಿನ "ಕಲಾ ಅಂತರ್ಗತ ಕಲಿಕೆ " ಎಂಬ ಕಾರ್ಯಕ್ರಮ ಮಾಡಲಾಗುತ್ತಿದೆ. ಆ ದಿನ ಯಾವುದಾದರೂ ಕಲಾವಿದರೋ, ತಜ್ಞರನ್ನೋ ಕರೆಯಿಸಿ ಕಲೆಯ ಮೂಲಕ ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತಿದೆ. ಅರಳಿಕಟ್ಟೆ ವಾಚನಾಲಯದ ಬಗ್ಗೆ ಅರಿತು "ಇಂಡಿಯನ್‌ ಫೌಂಡೇಷನ್‌ ಆಫ್‌ ಆರ್ಟ್ಸ್‌ "(ಐಎಫ್‌ಎ) ಶಾಲೆಗೆ ₹1 ಲಕ್ಷ ಧನಸಹಾಯ ಮಾಡಿದೆ. ಆ ದುಡ್ಡಿನಲ್ಲಿ ವಿವಿಧ ಚಟುವಟಿಕೆಗಳು ನಡೆಯುತ್ತಿದೆ.

ಬಾಹ್ಯಾಕಾಶ ಪ್ರಯೋಗಾಲಯ: ರಾಮಾಪುರ ಇಂಗ್ಲಿಷ್‌ ಭಾಷೆಯ ಶಿಕ್ಷಕರಾದರೂ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ. ಹೀಗಾಗಿ ಹಿಮಾಲಯನ ಸ್ಪೇಸ್‌ ಸೆಂಟರ್‌ ನೆರವಿನೊಂದಿಗೆ ಶಾಲೆಯಲ್ಲಿ ಬಾಹ್ಯಾಕಾಶ ಪ್ರಯೋಗಾಲಯ ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಿಮಾಲಯನ್ ಸ್ಪೇಸ್‌ ಸೆಂಟರ್‌ ಟೆಲಿಸ್ಕೋಪ್‌ನ್ನು ನೀಡಿದೆ. ಆ ಮೂಲಕ ಮಕ್ಕಳಿಗೆ ಬಾಹ್ಯಾಕಾಶದ ಬಗ್ಗೆ ಪ್ರಾತ್ಯೇಕ್ಷಿಕೆ ಮೂಲಕ ಪಾಠ ಹೇಳಿಕೊಡಲಾಗುತ್ತಿದೆ. ಗ್ರಹಣಗಳಾದಾಗ ಮಕ್ಕಳಿಗೆ ವೈಜ್ಞಾನಿಕವಾಗಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತದೆ.

ಫಲಿತಾಂಶ ಹೆಚ್ಚಳ: ಶಾಲೆಯ ಫಲಿತಾಂಶ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. 2 ವರ್ಷದ ಹಿಂದೆ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ. 88ರಷ್ಟಿತ್ತು. ಕಳೆದ ವರ್ಷ (2024-25) ಶೇ. 98ರಷ್ಟು ಫಲಿತಾಂಶವಾಗಿದೆ. ಮೊದಲಿಗೆ ಗ್ರಾಮದ ಮಕ್ಕಳಷ್ಟೇ ಬರುತ್ತಿದ್ದ ಶಾಲೆಗೀಗ ಅಕ್ಕಪಕ್ಕದ ಗ್ರಾಮಗಳಿಂದಲೂ ಮಕ್ಕಳು ಬರುತ್ತಿದ್ದಾರೆ. ಸದ್ಯ ಶಾಲೆಯಲ್ಲಿ 125 ಜನ ಮಕ್ಕಳಿದ್ದಾರೆ.

ರಾಮಾಪುರ ವಿಭಿನ್ನರಲ್ಲಿ ವಿಭಿನ್ನ ಶಿಕ್ಷಕರಾಗಿ ನಿಲ್ಲುತ್ತಾರೆ. ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರೆನಿಸಿಕೊಂಡಿರುವುದಂತೂ ಸತ್ಯ..!

ಅಮೆರಿಕಾ ಪ್ರವಾಸ: ಸದ್ಯ ಪ್ರೌಢಶಾಲೆ ಶಿಕ್ಷಕರಾಗಿರುವ ಲಿಂಗರಾಜ ರಾಮಾಪುರ. ಮೊದಲು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಆಗ ವಿಜ್ಞಾನವನ್ನೂ ಹೇಳಿಕೊಡುತ್ತಿದ್ದರು. ನಾವಿನ್ಯತೆಯೊಂದಿಗೆ ಮಕ್ಕಳಿಗೆ ಕಲಿಸುವ ಬಗೆ ಅರಿತು ಬೆಂಗಳೂರಿನ ಶಿಕ್ಷಣ ಫೌಂಡೇಷನ್‌ ಇವರನ್ನು ಒಂದು ತಿಂಗಳು ಕಾಲ ಅಮೆರಿಕಾಕ್ಕೂ ಕಳುಹಿಸಿತ್ತು. 2012ರಲ್ಲೇ ರಾಜ್ಯದಿಂದ ಮೂವರು ಶಿಕ್ಷಕರನ್ನು ಈ ಫೌಂಡೇಷನ್‌ ಅಮೆರಿಕಾಕ್ಕೆ ಕಳುಹಿಸಿತ್ತು. ಅದರಲ್ಲಿ ಇವರು ಕೂಡ ಒಬ್ಬರು ಎಂಬುದು ವಿಶೇಷ.

ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲೂ ಹೆಚ್ಚು ಆಸಕ್ತಿ ಬರುವಂತೆ ಮಾಡಬೇಕು. ಮೊಬೈಲ್‌, ಟಿವಿ ಗೀಳು ಬಾರದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ಇದಕ್ಕೆ ಶಾಲೆಯಲ್ಲಿನ ನನ್ನ ಸಹದ್ಯೋಗಿಗಳು, ಮುಖ್ಯಶಿಕ್ಷಕರು, ಗ್ರಾಮಸ್ಥರು ಸಾಥ್‌ ನೀಡುತ್ತಿದ್ದಾರೆ. ಮಕ್ಕಳು ಆಸಕ್ತಿ ತೋರುತ್ತಿದ್ದಾರೆ ಎಂದು ಶಿಕ್ಷಕ ಲಿಂಗರಾಜ ರಾಮಾಪುರ ಸಂತಸ ಹಂಚಿಕೊಂಡರು.