ಶಿಕ್ಷಕ ವೃತ್ತಿ ಸಮಾಜಕ್ಕೆ ಹಿರಿಮೆ, ಆದರ್ಶಪ್ರಾಯ: ಗೋಪಾಲಪ್ಪ

| Published : Mar 15 2025, 01:05 AM IST

ಶಿಕ್ಷಕ ವೃತ್ತಿ ಸಮಾಜಕ್ಕೆ ಹಿರಿಮೆ, ಆದರ್ಶಪ್ರಾಯ: ಗೋಪಾಲಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರಾಗಬೇಕೆಂಬ ಮಹದಾಸೆ ಇಟ್ಟುಕೊಂಡು ಬಿ.ಇಡಿ ಕೋರ್ಸ್ ಆಯ್ಕೆ ಮಾಡಿಕೊಂಡಿದ್ದೀರಿ. ಒಪ್ಪಿಕೊಂಡು- ಅಪ್ಪಿಕೊಂಡು ತರಬೇತಿಯನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿದರೆ, ನೀವೇ ಉತ್ತಮ ಶಿಕ್ಷಕರಾಗಿ ರೂಪುಗೊಳ್ಳುತ್ತೀರಿ. ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಹಿರಿಮೆ-ಗರಿಮೆ ಉಳಿಸಿಕೊಂಡು ಆದರ್ಶಪ್ರಾಯ ಆಗಿರುವುದೇ ಶಿಕ್ಷಕ ವೃತ್ತಿ

ವಿದ್ಯಾರ್ಥಿ ಸಂಘದ ಉದ್ಘಾಟನೆ । ಪ್ರತಿಭಾ ಪುರಸ್ಕಾರ

ಕನ್ನಡಪ್ರಭ ವಾರ್ತೆ ಹೊಸದುರ್ಗ

ಶಿಕ್ಷಕರಾಗಬೇಕೆಂಬ ಮಹದಾಸೆ ಇಟ್ಟುಕೊಂಡು ಬಿ.ಇಡಿ ಕೋರ್ಸ್ ಆಯ್ಕೆ ಮಾಡಿಕೊಂಡಿದ್ದೀರಿ. ಒಪ್ಪಿಕೊಂಡು- ಅಪ್ಪಿಕೊಂಡು ತರಬೇತಿಯನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿದರೆ, ನೀವೇ ಉತ್ತಮ ಶಿಕ್ಷಕರಾಗಿ ರೂಪುಗೊಳ್ಳುತ್ತೀರಿ. ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಹಿರಿಮೆ-ಗರಿಮೆ ಉಳಿಸಿಕೊಂಡು ಆದರ್ಶಪ್ರಾಯ ಆಗಿರುವುದೇ ಶಿಕ್ಷಕ ವೃತ್ತಿ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಾಲಪ್ಪ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಇಂದಿರಾಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ 2024-25 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.

ಶಿಕ್ಷಕ ಒಬ್ಬ ಶಿಲ್ಪಿಯಿದ್ದಂತೆ. ಶಿಲ್ಪಿ ಹೇಗೆ ಒಂದು ಕಲ್ಲನ್ನು ತಿದ್ದಿ, ತೀಡಿ ಅದಕ್ಕೊಂದು ರೂಪಕೊಟ್ಟು ಮೂರ್ತಿಯನ್ನಾಗಿ ಪರಿವರ್ತನೆ ಮಾಡಿ, ಪೂಜೆಗೊಳ್ಳುವಂತೆ ಮಾಡುತ್ತಾನೆಯೋ, ಅದೇ ರೀತಿಯಲ್ಲಿ ಒಬ್ಬ ಶಿಕ್ಷಕ, ವಿದ್ಯಾರ್ಥಿಗಳನ್ನು ತಿದ್ದಿ ತೀಡಿ, ತನ್ನ ಆದರ್ಶ ನಡೆಯ ಮೂಲಕ ಪ್ರೇರಣಾದಾಯಕ ಶಕ್ತಿಯಾಗಿ, ಭವಿಷ್ಯದಲ್ಲಿ ಮಾದರಿ ವ್ಯಕ್ತಿಯಾಗುವಂತೆ ರೂಪುಗೊಳಿಸುತ್ತಾನೆ. ಹಾಗೆಯೇ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುಪರಂಪರೆ ಹಾಗೂ ಶಿಕ್ಷಕ ವೃತ್ತಿಗೆ ವಿಶಿಷ್ಟ ಸ್ಥಾನ ಕಲ್ಪಿಸಲಾಗಿದೆ. ಶಿಕ್ಷಕನೊಬ್ಬ ತಪ್ಪು ದಾರಿಯಲ್ಲಿ ನಡೆದರೆ, ಸಾವಿರ ವಿದ್ಯಾರ್ಥಿಗಳು ಅವನ ದಾರಿಯನ್ನೇ ಅನುಸರಿಸಿಕೊಂಡು ಜೀವನದಲ್ಲಿ ಎಡುವುತ್ತಾರೆ. ಹಾಗಾಗಿ, ಶಿಕ್ಷಕರಾಗಲು ತರಬೇತಿ ಪಡೆಯುತ್ತಿರುವ ನೀವು ಉತ್ತಮ ಶಿಕ್ಷಕರಾಗಿ ರೂಪುಗೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬದುಕುಕಟ್ಟಿಕೊಳ್ಳಿ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಅಶ್ವತ್ ಯಾದವ್ ಮಾತನಾಡಿ, ವಿದ್ಯಾರ್ಥಿ ಸಂಘಕ್ಕೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳು ಸಂಘದ ಮಹತ್ವವರಿತು ಕೆಲಸ ಮಾಡಬೇಕಾಗಿದೆ. ನಿಮ್ಮ ಮುಂದಿನ ಭವಿಷ್ಯ ರೂಪಿಸಿಕೊಳ್ಳುವ ದೊಡ್ಡ ಜವಾಬ್ದಾರಿ ಪ್ರಶಿಕ್ಷಣಾರ್ಥಿಗಳಾದ ನಿಮ್ಮ ಕೈಲಿದೆ. ಹೊಸದುರ್ಗ ಪಟ್ಟಣದ ಇಂದಿರಾ ಗಾಂಧಿ ಕಾಲೇಜಿಗೆ ಉತ್ತರ ಕರ್ನಾಟಕದ 4-5 ಜಿಲ್ಲೆಗಳ ಪ್ರಶಿಕ್ಷಣಾರ್ಥಿಗಳು ಸೇರಿರುವ ವಿಷಯ ತಿಳಿದು ಬಹಳ ಸಂತೋಷವಾಯಿತು. ನಿಮ್ಮ ವಿದ್ಯಾಭ್ಯಾಸ ಪೂರ್ಣಗೊಂಡಾಗಲೇ, ಜೀವನದ ಮಹತ್ವ ಮತ್ತು ಸವಾಲು ನಿಮಗೆ ಅರ್ಥವಾಗುವುದು. ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ದೃಢತೆ ಮತ್ತು ದೂರದೃಷ್ಟಿ ಮುಖ್ಯವಾಗಿಬೇಕಿದೆ. ಶಿಕ್ಷಕರಾಗಲು ಹೊರಟಿರುವ ನಿಮಗೆ ಭವಿಷ್ಯದಲ್ಲಿ ಒಳ್ಳೆಯದಾಗಲಿ. ಸರ್ಕಾರ ಹಲವಾರು ಸವಲತ್ತುಗಳನ್ನು ನೀಡಿ, ಪ್ರೋತ್ಸಾಹ ನೀಡುತ್ತಿದೆ. ಅದನ್ನು ಸದುಪಯೋಗಪಡಿಸಿಕೊಂಡು ನಿಮಗೆ ಜನ್ಮಕೊಟ್ಟ ತಂದೆ-ತಾಯಿಗೆ, ಪಾಠ ಹೇಳಿಕೊಟ್ಟ ಗುರುಗಳಿಗೆ, ನಿಮ್ಮ ಕುಟುಂಬಸ್ಥರಿಗೆ ಒಳ್ಳೆಯ ಗೌರವತನ್ನಿ ಎಂದು ಸಲಹೆ ನೀಡಿದರು.

2022-23 ಮತ್ತು 2023-2024 ನೇ ಸಾಲಿನಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ರ‍್ಯಾಂಕ್ ಪಡೆದ ಪ್ರಶಿಕ್ಷಣಾರ್ಥಿಗಳಾದ ಎಂ.ಭಾನುಪ್ರಿಯ, ಎಸ್. ಸ್ನೇಹ, ಎಚ್.ವಿ.ದಿವ್ಯ, ಎಸ್.ನವೀನ್, ಜಿ.ಸಿಂಧೂ ಇವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್.ಕಲ್ಮಠ್ ಮಾತನಾಡಿದರು. ಕಾಲೇಜು ಪ್ರಾಂಶುಪಾಲ ಡಾ.ಟಿ. ಬಸಪ್ಪ ಅತಿಥಿಗಳನ್ನು ಸ್ವಾಗತಿಸಿದರು. ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಲಿಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಡಿ. ಪ್ರದೀಪ್ ಕುಮಾರ್, ಸಂಸ್ಥೆಯ ಉಪಾಧ್ಯಕ್ಷ ಕೆ.ಎಸ್.ಪುಟ್ಟರಾಜು, ಖಜಾಂಚಿ ಕೆ.ಪಿ.ಮಲ್ಲಿಕಾರ್ಜುನಪ್ಪ, ಅಕಾಡೆಮಿ ಡೈರೆಕ್ಟರ್ ಎಂ.ಬಿ.ತಿಪ್ಪೇಸ್ವಾಮಿ, ಧರ್ಮದರ್ಶಿಗಳಾದ ಎಂ.ಎಚ್.ನೀಲಕಂಠಯ್ಯ, ವೇದಮೂರ್ತಿ, ವಿಜಯಲಕ್ಷ್ಮಿ ಶಿವಲಿಂಗಪ್ಪ, ಕಾಲೇಜು ಉಪನ್ಯಾಸಕರು, ಸಿಬ್ಬಂದಿ ಭಾಗವಹಿಸಿದ್ದರು.

ಬಿ.ಇಡಿ ಒಂದು ತರಬೇತಿಯಲ್ಲ, ಇದೊಂದು ಕಾರ್ಯಗಾರ. ನಮ್ಮ ಶಾಲಾ-ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರಮಟ್ಟದಲ್ಲಿ ಬೆಳೆಯಬೇಕೆಂಬ ಉದ್ದೇಶದಿಂದಾಗಿ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಂಡು ಸಾಧನೆಯ ಹಾದಿಯಲ್ಲಿ ನಡೆಯಬೇಕು.

ಕೆ.ಎಸ್.ಕಲ್ಮಠ್, ಕಾರ್ಯದರ್ಶಿ, ನಿಜಲಿಂಗಪ್ಪ ಶಿಕ್ಷಣ ಸಂಸ್ಥೆ, ಹೊಸದುರ್ಗ