ಸಾರಾಂಶ
ಟೆಕ್ಕಿಗೆ ಕಾಲು ಮುರಿದ ಘಟನೆಯಿಂದ ಎಚ್ಚೆತ್ತ ಅರಣ್ಯ ಇಲಾಖೆ ನಿರ್ಬಂಧಿತ ಅರಣ್ಯ ಪ್ರದೇಶದಲ್ಲಿರುವ ಜರಮಡುಗು ಜಲಪಾತ ವೀಕ್ಷಣೆಗೆ ಅವಕಾಶವಿಲ್ಲಾ ನಾವು ನಿರ್ಬಂಧ ಹೇರಿದ್ದೇವೆ ಎಂದು ಹೇಳುತ್ತಿದೆ. ಆದರೆ ಪ್ರವಾಸಿಗರು ಪ್ರವೇಶಿಸದಂತೆ ಯಾವುದೇ ಭದ್ರತಾ ವ್ಯವಸ್ಥೆ ಮಾಡಿಲ್ಲ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಿರ್ಬಂಧಿತ ಅರಣ್ಯ ಪ್ರದೇಶದಲ್ಲಿರುವ ಜರಮಡುಗು ಜಲಪಾತ ವೀಕ್ಷಣೆ ವೇಳೆ ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಬಿದ್ದು ಕಾಲು ಮುರಿದುಕೊಂಡ ಘಟನೆ ತಾಲೂಕಿನ ಜಂಗಮಾರಪ್ಪನಹಳ್ಳಿ ಬಳಿಯ ಕೇತೆನಹಳ್ಳಿ ಅಭಯಾರಣ್ಯದಲ್ಲಿ ನಡೆದಿದೆ.ಬೆಂಗಳೂರು ಮೂಲದ ಅರ್ಪಿತ (30) ಕಾಲು ಮುರಿದು ಕೊಂಡಿರುವ ಟೆಕ್ಕಿ. ಅರ್ಪಿತ ಮತ್ತು ಸಹೋದ್ಯೋಗಿಗಳು ಜರಮಡುಗು ಜಲಪಾತ ವೀಕ್ಷಣೆಗೆ ತೆರಳಿದ್ದರು. ಜಲಪಾತ ವೀಕ್ಷಣೆ ವೇಳೆ ಕಾಲು ಜಾರಿ ಸುಮಾರು 60 ಅಡಿ ಎತ್ತರದಿಂದ ಜಲಪಾಕ್ಕೆ ಬಿದ್ದಿದ್ದಾರೆ.ಸ್ಟ್ರೆಚರ್‌ನಲ್ಲಿ ಹೊತ್ತೊಯ್ದರು
ಕೂಡಲೇ ಅವರ ಸಹೋದ್ಯೋಗಿಗಳು ಆ್ಯಂಬುಲೆನ್ಸ್ ಕರೆ ಮಾಡಿದ್ದಾರೆ. ಆದರೆ ಸ್ಥಳದಿಂದ 2 ಕಿಮೀ ದೂರ ರಸ್ತೆ ಇಲ್ಲದ ಕಾರಣ ಅರ್ಪಿತಳನ್ನು ಸಹೋದ್ಯೋಗಿಗಳು ಸ್ಟ್ರೆಚರ್‌ನಲ್ಲಿ ಹೊತ್ತು ತಂದು ಆ್ಯಂಬುಲೆನ್ಸ್ ಮೂಲಕ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜರಮಡುಗು ಜಲಪಾತ ವೀಕ್ಷಣೆಗೆ ತೆರಳಲು ಪ್ರವಾಸಿಗರಿಗೆ ನಿರ್ಬಂಧವಿದೆ. ವಿಶೇಷ ಅನುಮತಿ ಪಡೆದು ಈ ಸ್ಥಳಕ್ಕೆ ಪ್ರವೇಶಿಸಬಹುದು. ಇಷ್ಟೆಲ್ಲಾ ನಿರ್ಬಂಧಗಳಿದ್ದರೂ ಸಹಾ ಜಲಪಾತ ವೀಕ್ಷಣೆಗೆ ತಂಡೋಪ ತಂಡವಾಗಿ ಜನ ಆಗಮಿಸುತ್ತಿರುತ್ತಾರೆ. ಆಗಾಗ ಇಂತಹ ಅನಾಹುತಗಳೇನಾದರೂ ಸಂಭವಿಸಿದಾಗ ಅರಣ್ಯ ಇಲಾಖೆ ಗಾರ್ಡ್‌ಗಳನ್ನು ಹಾಕುತ್ತದೆ.ರಜೆ ದಿನಗಳೇನಾದರೂ ಬಂದರೆ ಸಾಕು ಸಾಕಷ್ಟು ಜನ ಹೊರಗಿನಿಂದ ಆಗಮಿಸಿ ಜಲಪಾತ ವೀಕ್ಷಸಿ, ಅದರಲ್ಲಿ ಮಿಂದೆದ್ದು ವಾಪಸ್ಸಾಗುತ್ತಾರೆ. ಉಳಿದ ಸಾಮಾನ್ಯ ದಿನಗಳಲ್ಲಿ ಕಾಲೇಜಿಗೆ ಚಕ್ಕರ್ ಹಾಕಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪ್ರೇಮಿಗಳು ಇಲ್ಲಿಗೆ ಬರುವುದೇ ಹೆಚ್ಚು. ಹೆಸರಿಗಷ್ಟೇ ನಿರ್ಬಂಧ ಪ್ರದೇಶ
ಟೆಕ್ಕಿಗೆ ಕಾಲು ಮುರಿದ ಘಟನೆಯಿಂದ ಎಚ್ಚೆತ್ತ ಅರಣ್ಯ ಇಲಾಖೆ ನಿರ್ಬಂಧಿತ ಅರಣ್ಯ ಪ್ರದೇಶದಲ್ಲಿರುವ ಜರಮಡುಗು ಜಲಪಾತ ವೀಕ್ಷಣೆಗೆ ಅವಕಾಶವಿಲ್ಲಾ ನಾವು ನಿರ್ಬಂಧ ಹೇರಿದ್ದೇವೆ ಎಂದು ಹೇಳುತ್ತಿದೆ. ಆದರೆ ಪ್ರವಾಸಿಗರು ಪ್ರವೇಶಿಸದಂತೆ ಯಾವುದೇ ಭದ್ರತಾ ವ್ಯವಸ್ಥೆ ಮಾಡಿಲ್ಲ.