ಧಾರ್ಮಿಕ ಕಾರ್ಯಕ್ರಮಗಳು ನಮ್ಮನ್ನು ಒಗ್ಗೂಡಿಸುತ್ತವೆ: ನಿರಂಜನ್‌

| Published : Aug 25 2024, 01:47 AM IST

ಸಾರಾಂಶ

ನರಸಿಂಹರಾಜಪುರಧಾರ್ಮಿಕ ಸಂಪ್ರದಾಯ, ಸಮಾರಂಭಗಳು ನಮ್ಮನ್ನು ಒಗ್ಗೂಡಿಸುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಪ್ಪ, ಎನ್.ಆರ್.ಪುರ ಯೋಜನಾಧಿಕಾರಿ ನಿರಂಜನ್ ಹೇಳಿದರು.

ಹಿಳುವಳ್ಳಿ ಗಣಪತಿ ಪೆಂಡಾಲ್‌ ನಲ್ಲಿ ಧ,ಗ್ರಾ.ಯೋಜನೆಯಿಂದ ವರ ಮಹಾ ಲಕ್ಷ್ಮೀ ಪೂಜೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಧಾರ್ಮಿಕ ಸಂಪ್ರದಾಯ, ಸಮಾರಂಭಗಳು ನಮ್ಮನ್ನು ಒಗ್ಗೂಡಿಸುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಪ್ಪ, ಎನ್.ಆರ್.ಪುರ ಯೋಜನಾಧಿಕಾರಿ ನಿರಂಜನ್ ಹೇಳಿದರು.

ಶನಿವಾರ ಹಿಳುವಳ್ಳಿ ಗಣಪತಿ ಪೆಂಡಾಲ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಎನ್ ಆರ್ ಪುರ ವಲಯ ಹಮ್ಮಿಕೊಂಡಿದ್ದ ವರಮಹಾಲಕ್ಷ್ಮೀ ಪೂಜೆಯಲ್ಲಿ ಮಾತನಾಡಿ, ಧಾರ್ಮಿಕ ಸಂಪ್ರದಾಯಗಳು ಮರೆಯಾಗುವ ದಿನಗಳು ಬರುತ್ತಿವೆ. ಆದರೆ, ನಾವು ಸಂಪ್ರದಾಯ,ಧಾರ್ಮಿಕ ಕಾರ್ಯಕ್ರಮಗಳನ್ನು ಅಳಿಯದಂತೆ ಉಳಿಸಿಕೊಂಡು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು. ಹಿಂದೂ ಸಂಪ್ರದಾಯ, ಸಂಸ್ಕೃತಿಗಳು ಪ್ರಪಂಚದಲ್ಲೇ ವೈಶಿಷ್ಟ್ಯ ಹೊಂದಿದೆ ಎಂದರು. ಧ.ಗ್ರಾ.ಯೋಜನೆ ಸೇವಾ ಪ್ರತಿನಿಧಿ ಶಶಿಕಲಾ ಮಾತನಾಡಿ, ಮಹಿಳೆಯರು ಎಲ್ಲಾ ಹಬ್ಬದ ಮಾಹಿತಿ ಪಡೆದರೆ ಹಬ್ಬಗಳ ಆಚರಣೆ ಇನ್ನಷ್ಟು ಅರ್ಥಪೂರ್ಣವಾಗಲಿದೆ. ಪೂಜೆ, ಧಾರ್ಮಿಕ ಸಭೆಗಳು ನಡೆಯುತ್ತಿದ್ದರೆ ಒಬ್ಬರಿಗೊಬ್ಬರು ಪರಿಚಯವಾಗಿ ವಿಶ್ವಾಸ ಸ್ನೇಹ ಬೆಳೆಯುತ್ತದೆ ಎಂದರು.ಶಿಕ್ಷಕ ದೇವರಾಜ್ ಶಿಕ್ಷಣದಲ್ಲಿ ಪೋಷಕರ ಪಾತ್ರ ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿ, ಮಕ್ಕಳನ್ನು ಉತ್ತಮ ಪ್ರಜೆಯನ್ನಾಗಿ ಮಾಡಲು ಮನೆಯ ಪರಿಸರ, ಗೆಳೆಯರ ಒಡನಾಟ ಹಾಗೂ ಶಾಲಾ ವಾತಾವರಣ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ. ಬಾಲ್ಯದಿಂದಲೇ ಮಕ್ಕಳಿಗೆ ಸಂಸ್ಕಾರದೊಂದಿಗೆ ಕಷ್ಟ ಸುಖಗಳ ಅರಿವು ಮೂಡಿಸುವುದು ಅತಿ ಅವಶ್ಯಕ. ಹಿಂದೆ ಶಿಕ್ಷಣಕ್ಕಾಗಿ ಗುರುಕುಲ ಪದ್ಧತಿ ಇತ್ತು. ಅಲ್ಲಿ ಬದುಕುವ ಕಲೆಯನ್ನು ಮಕ್ಕಳಿಗೆ ಕಲಿಸುತ್ತಿದ್ದರು. ಇಂದು ಅಂತಹ ಶಿಕ್ಷಣದ ಅವಶ್ಯಕತೆ ಇದೆ. ಚಿಕ್ಕಂದಿನಲ್ಲೇ ಮಕ್ಕಳಿಗೆ ಏನು ಕಲಿಸುತ್ತೇವೆಯೋ, ಅದನ್ನೇ ಮಕ್ಕಳು ಮುಂದೆ ಜೀವನದಲ್ಲಿ ಅಳವಡಿಸಿ ಕೊಳ್ಳುತ್ತಾರೆ. ಇತ್ತೀಚಿಗೆ ಮಕ್ಕಳು ಕೇವಲ ಯಂತ್ರದ ಮುಂದಿರುವ ಬೊಂಬೆಗಳಂತಾಗುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಜೀವನ ಶೈಲಿ ಕಲ್ಪಿಸಬೇಕಾಗಿದೆ. ಪೋಷಕರು ದಿನದ ಸ್ವಲ್ಪ ಸಮಯವಾದರೂ ಮಕ್ಕಳೊಂದಿಗೆ ಬೆರೆಯಬೇಕು. ಸೋಲನ್ನು ಧೈರ್ಯವಾಗಿ ಎದುರಿಸುವುದನ್ನು ಕಲಿಸಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕ ಸಿದ್ದಲಿಂಗಪ್ಪ, ಒಕ್ಕೂಟ ಅಧ್ಯಕ್ಷೆ ರಾಜೇಶ್ವರಿ, ನಾಗಲಾಪುರ ಗ್ರಾ.ಪಂ. ಸದಸ್ಯೆ ಶೋಭಾ, ಪಪಂ ಸದಸ್ಯೆ ಜುಬೇದ, ಜ್ಞಾನ ವಿಕಾಸ ಕೇಂದ್ರದ ಸದಸ್ಯರಾದ ಪವಿತ್ರ, ಪುಷ್ಪ, ಸವಿತಾ, ಗಾಯತ್ರಿ, ಮಧುಶ್ರೀ, ರೂಪ, ಕವಿತಾ, ಉಷಾ ಮತ್ತು ಕೇಂದ್ರದ ಎಲ್ಲಾ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.