ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಮೌನ ಪ್ರತಿಭಟನೆ

| Published : Aug 25 2024, 01:47 AM IST

ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಮೌನ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಅರಾಜಕತೆ ಸೃಷ್ಟಿಯಾಗಿದ್ದು, ದೇಶ ಆರ್ಥಿಕವಾಗಿ ದಿವಾಳಿಯಾಗಿದೆ.

ಹೊಸಪೇಟೆ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಖಂಡಿಸಿ ಹಿಂದೂ ಜಾಗೃತಿ ಸಮಿತಿ ಹಾಗೂ ಹಿಂದೂಪರ ಸಂಘಟನೆಗಳಿಂದ ನಗರದಲ್ಲಿ ಶನಿವಾರ ಕಪ್ಪುಬಟ್ಟೆ ಧರಿಸಿ ಮೌನ ಪ್ರತಿಭಟನೆ ನಡೆಸಲಾಯಿತು.

ನಗರದ ವಡಕರಾಯ ದೇವಸ್ಥಾನದಿಂದ ಪುನೀತ್ ರಾಜಕುಮಾರ್ ವೃತ್ತದವರೆಗೆ ಮೆರವಣಿಗೆ ನಡೆಯಿತು. ವಿವಿಧ ಸಮುದಾಯಗಳ ಮುಖಂಡರು, ಯುವಕರು ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಅರಾಜಕತೆ ಸೃಷ್ಟಿಯಾಗಿದ್ದು, ದೇಶ ಆರ್ಥಿಕವಾಗಿ ದಿವಾಳಿಯಾಗಿದೆ. ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ಸಾಕಷ್ಟು ರೀತಿಯಲ್ಲಿ ದೌರ್ಜನ್ಯ ದಬ್ಬಾಳಿಕೆ ಮಾಡುತ್ತಿದ್ದಾರೆ. ಬಾಂಗ್ಲಾದೇಶದಲ್ಲಿರುವ ಮುಸ್ಲಿಮರು ಈ ಸಂದರ್ಭವನ್ನು ಉಪಯೋಗಿಸಿಕೊಂಡು ಹಿಂದೂಗಳ ಮನೆ, ದೇವಾಲಯಗಳನ್ನು ನಾಶಗೊಳಿಸಲು ಮುಂದಾಗಿದ್ದಾರೆ. ಈ ನಡುವೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಹಿಂದೂಗಳನ್ನು ಒತ್ತಾಯಿಸುತ್ತಿದ್ದಾರೆ. ಇಲ್ಲವಾದರೆ ದೇಶ ಬಿಟ್ಟು ತೊಲಗಿ ಎಂದು ಹಿಂಸೆ ನೀಡುತ್ತಿದ್ದಾರೆ. ಇದು ಅತ್ಯಂತ ಖಂಡನೀಯ ಎಂದು ಪ್ರತಿಭಟನಾಕಾರರು ದೂರಿದರು.

ಬಾಂಗ್ಲಾದೇಶದಲ್ಲಿ ನಡೆದಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ನಮ್ಮ ದೇಶದ ಹಲವಾರು ದೇಶದ್ರೋಹಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಖುಷಿ ಪಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ಹಿಂದೂಗಳ ಹಾಗೂ ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ದಾಳಿಗಳನ್ನು ತಡೆಯಲು ಭಾರತ ಸರ್ಕಾರವು ಮಧ್ಯಸ್ಥಿಕೆ ವಹಿಸಬೇಕು. ಇದು ಹಿಗೇಯೇ ಮುಂದುವರಿದರೆ ದೇಶದಲ್ಲಿರುವ ಹಿಂದೂಗಳು ಒಂದಾಗಿ ಬಾಂಗ್ಲಾದೇಶದ ಹಿಂದೂಗಳ ಪರವಾಗಿ ಉಗ್ರವಾದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹುಡಾ ಮಾಜಿ ಅಧ್ಯಕ್ಷ ಅಶೋಕ ಜೀರೆ, ಮುಖಂಡರಾದ ಪ್ರಮೋದ್ ಜೈನ್, ಶ್ರೀಕಾಂತ್ ಪೂಜಾರ, ಜಗದೀಶ್ ಕಮಟಗಿ, ವೀರಣ್ಣ, ಪ್ರವೀಣ್, ಕಿಚಡಿ ಕೊಟ್ರೇಶ್‌, ಸೂರಿ ಬಂಗಾರು, ರೇವಣಸಿದ್ಧಪ್ಪ, ಕಿರಣ್, ರಮೇಶ ಗುಪ್ತಾ, ಮದುರಚನ್ನಶಾಸ್ತ್ರಿ, ಭೂಪಾಳ ಶ್ರೀಪಾದ್‌, ಶ್ರೀಕಾಂತ, ನರಸಿಂಹಮೂರ್ತಿ, ಕೇಶವ್, ಪಾಂಡು ಇದ್ದರು.

ಹೊಸಪೇಟೆಯಲ್ಲಿ ಶನಿವಾರ ಹಿಂದೂ ಜಾಗೃತಿ ಸಮಿತಿ ಹಾಗೂ ಹಿಂದೂಪರ ಸಂಘಟನೆಗಳಿಂದ ನಗರದಲ್ಲಿ ಶನಿವಾರ ಕಪ್ಪುಬಟ್ಟೆ ಧರಿಸಿ ಮೌನ ಪ್ರತಿಭಟನೆ ನಡೆಸಲಾಯಿತು.