ಸಾರಾಂಶ
ಹಳ್ಳಿಗಳಲ್ಲಿ ದೇವಸ್ಥಾನಗಳು ಮನಸ್ಸು ಮನಸ್ಸುಗಳು ಬೆಸೆಯುವ ತಾಣಗಳಾಗಿವೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.
ಕನ್ನಡಪ್ರಭ ವಾರ್ತೆ ಕೂಡ್ಲಿಗಿ
ಹಳ್ಳಿಗಳಲ್ಲಿ ದೇವಸ್ಥಾನಗಳು ಮನಸ್ಸು ಮನಸ್ಸುಗಳು ಬೆಸೆಯುವ ತಾಣಗಳಾಗಿವೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ ಶ್ರೀ ಗಣೇಶ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಗೋಪುರ, ಕಳಸ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇವರು, ಹಬ್ಬ, ಜಾತ್ರೆಗಳು ಮಾನವ ಸಂಬಂಧಗಳನ್ನು ಉಳಿಸುವ, ಬಾಂಧವ್ಯ ಗಟ್ಟಿಗೊಳ್ಳುವ ತಾಣಗಳಾಗಿವೆ. ಹಾಗಾಗಿಯೇ ನಮ್ಮ ಪೂರ್ವಜರು ತಲಾ ತಲಾಂತರಗಳಿಂದ ದೇವಸ್ಥಾನಗಳನ್ನು ನಿರ್ಮಿಸುವ ಮೂಲಕ ಜಂಜಡ ಬದುಕಿನಲ್ಲಿ ಆಶಾಭಾವನೆ ಮೂಡಿಸುವ ಕಾರ್ಯ ಮಾಡಿದ್ದಾರೆ ಎಂದರು.ಸುಗ್ಗಿ ಬಂತೆಂದರೆ ದೇವಸ್ಥಾನ ನಿರ್ಮಾಣ, ಜಾತ್ರೆಗಳು ನಡೆಯುತ್ತವೆ. ಎಲ್ಲೋ ದೂರವಿರುವ ಸಂಬಂಧಿಕರು ಹತ್ತಿರವಾಗುತ್ತಾರೆ. ತಮ್ಮ ನೋವು, ನಲಿವುಗಳನ್ನು ಹಂಚಿಕೊಳ್ಳುತ್ತಾರೆ. ಈ ಮೂಲಕ ಎಲ್ಲರೂ ಒಗ್ಗಟ್ಟಾಗಿ ದೇವರ ಕಾರ್ಯ ಮಾಡುವುದರ ಮೂಲಕ ಹಳ್ಳಿಗಳಲ್ಲಿ ಜಾತಿ, ಧರ್ಮಗಳ ಸೌಹಾರ್ದತೆ ಮೆರೆಯುತ್ತಾರೆ ಎಂದರು. ಕೂಡ್ಲಿಗಿ ತಾಲೂಕಿನಲ್ಲಿ ದೇವಸ್ಥಾನಗಳು ಅಗಣಿತ, ಐತಿಹಾಸಿಕ ದೇವಾಲಯಗಳು, ಶಿಲಾಯುಗದ ಕಾಲದ ಪಳೆಯುಳಿಕೆಗಳು ಇಲ್ಲಿ ದೊರೆಯುತ್ತಿದ್ದು, ಆದಿಮಾನವರ ಕಾಲದ ಐತಿಹಾಸಿಕ ನೆಲೆಗಳು ಇಡೀ ದೇಶದಲ್ಲಿಯೇ ಕೂಡ್ಲಿಗಿಯಲ್ಲಿ ಮಾತ್ರ ಸ್ಪಷ್ಠವಾಗಿ ಗೋಚರಿಸುತ್ತವೆ. ಹೀಗಾಗಿ ಇಲ್ಲಿಯ ಇತಿಹಾಸ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.
ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತಸಾಗರ ಶಿವಾಚಾರ್ಯರು, ದಾಸೋಹಮಠದ ಶ್ರೀ ಐಮಡಿ ಶಿವಾಚಾರ್ಯರು ಮುಂತಾದ ಶಿವಾಚಾರ್ಯರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಕೂಡ್ಲಿಗಿ ಮಂಡಲ ಬಿಜೆಪಿ ಅಧ್ಯಕ್ಷ ಕಾಮಶೆಟ್ಟಿ ರಾಜು, ಬಿ.ಎಂ. ಹಾಲಯ್ಯ, ಜಿ.ನಾಗಪ್ಪ, ಬಿ.ಎಸ್. ಪ್ರಕಾಶ್, ವಿಶ್ವಪಾಲಯ್ಯ, ದೊಡ್ಡ ಹಂಪಣ್ಣನವರ ನಾಗರಾಜ, ಬಿ.ಎಂ. ರಮೇಶ್, ಹೇಮಚಂದ್ರ, ಬಿ.ಎಂ. ನಾಗರಾಜ, ಕೆ.ಬಸವರಾಜ ಸೇರಿದಂತೆ ಊರಿನ ಮುಖಂಡರು ಉಪಸ್ಥಿತರಿದ್ದರು.