ಮನುಷ್ಯತ್ವವನ್ನು ದೈವತ್ವಕ್ಕೆ ಕೊಂಡೊಯ್ಯುವುದೇ ದೇವಾಲಯ

| Published : Mar 13 2024, 02:03 AM IST

ಮನುಷ್ಯತ್ವವನ್ನು ದೈವತ್ವಕ್ಕೆ ಕೊಂಡೊಯ್ಯುವುದೇ ದೇವಾಲಯ
Share this Article
  • FB
  • TW
  • Linkdin
  • Email

ಸಾರಾಂಶ

ಜಂಜಡದಲ್ಲಿರುವ ಮನಸ್ಸಿಗೆ ಸ್ಫೂರ್ತಿ ತುಂಬುವುದು ಹಾಗೂ ಮನುಷ್ಯತ್ವದಿಂದ ದೈವತ್ವಕ್ಕೆ ಕೊಂಡೊಯ್ಯುವ ತಾಣವೇ ದೇವಾಲಯ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಜಂಜಡದಲ್ಲಿರುವ ಮನಸ್ಸಿಗೆ ಸ್ಫೂರ್ತಿ ತುಂಬುವುದು ಹಾಗೂ ಮನುಷ್ಯತ್ವದಿಂದ ದೈವತ್ವಕ್ಕೆ ಕೊಂಡೊಯ್ಯುವ ತಾಣವೇ ದೇವಾಲಯ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.

ಖಾಂಡ್ಯ ಮಾರ್ಕಾಂಡೇಶ್ವರ ದೇವಾಲಯದ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಗಳವಾರ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ನಾವುಗಳು ದೇವಾಲಯಗಳಿಗೆ ತೆರಳಿದಾಗ ಅಲ್ಲಿನ ಶಕ್ತಿ, ಭಕ್ತಿಯನ್ನು ಕೇವಲ ಅನುಭವಿಸಬೇಕೆ ಹೊರತು ಅಲ್ಲಿನ ಪೂರ್ವಾಪರಗಳನ್ನು ತಿಳಿಯಬಾರದು. ಭಾರತೀಯ ಸಂಸ್ಕೃತಿ, ಭಕ್ತಿಗೆ ವಿಶ್ವದಲ್ಲಿಯೇ ವಿಶೇಷ ಸ್ಥಾನಮಾನವಿದೆ. ನಾವುಗಳು ದೇವಾಲಯದಲ್ಲಿ ಇದ್ದಾಗ ದೇವರು ಮತ್ತು ನಮ್ಮ ನಡುವೆ ಕೇವಲ ಭಕ್ತಿ ಇರಬೇಕೆ ವಿನಃ ಬೇರೇನೂ ಇರಬಾರದು. ಭಕ್ತಿ ಉದ್ದೀಪನೆ ಮಾಡುವ ಕೆಲಸವಾಗಬೇಕಿದೆ.

ಇಂದು ಕೆಲವೆಡೆ ವಾಸ್ತವಕ್ಕೆ ಇರಬೇಕಾದ ಭಕ್ತಿ, ಶ್ರದ್ಧೆಯನ್ನು ಕೆಲವರು ದುರುದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ವಿಷಾದನೀಯ. ದೇವಾಲಯಗಳು ಮನಃ ಸಾಕ್ಷಿಯನ್ನು ಎಚ್ಚರಿಸಬೇಕಾದ ಜಾಗೃತಿ ತಾಣಗಳಾಗಿದ್ದು, ದೈವ ಪ್ರಜ್ಞೆಯನ್ನು ಜಾಗೃತಿಗೊಳಿಸುವುದೇ ನಿಜವಾದ ಭಕ್ತಿ ಎಂದರು.

ಪೋಷಕರು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಗಳನ್ನು ನೀಡಬೇಕಿದ್ದು, ಮಕ್ಕಳಿಗೆ ಸಂಸ್ಕಾರ ನೀಡದಿದ್ದರೆ ಅವರಲ್ಲಿ ವಿಚಿತ್ರ ವಾದ ವರ್ತನೆಯನ್ನು ಕಾಣಬೇಕಾಗುತ್ತದೆ. ಮಕ್ಕಳು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಂತೆ ಪೋಷಕರು ಪ್ರೇರೇಪಿಸ ಬೇಕಿದೆ. ಅವರಿಗೆ ಬಾಂಧವ್ಯದ ಪರಿಚಯ ಮಾಡಬೇಕಿದೆ.

ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡ ಬಳಿಕ ಭೌತಿಕ ಬದಲಾವಣೆಯನ್ನು ನಾವುಗಳು ಹೊಂದಬೇಕಿದೆ. ಮನುಷ್ಯರು ಡಾಂಭಿಕತನದಿಂದ ಹೊರಬಂದು ಹಿರಿಯರಿಗೆ ಗೌರವ ನೀಡುವುದನ್ನು ಕಲಿಯಬೇಕಿದೆ. ಜೀವನದಲ್ಲಿ ಉತ್ತಮ ಕಾರ್ಯ ಗಳನ್ನೇ ಮಾಡಬೇಕು ಹೊರತು ಬೇರೆಯದನ್ನು ಮಾಡಬಾರದು. ನಾವುಗಳು ಮಾಡಿದ ಕರ್ಮವೇ ನಮಗೆ ತಿರುಗಿ ಬರಲಿದ್ದು, ಇದೇ ನಿಜವಾದ ಕಾಲನಿರ್ಣಯ ಎಂದರು.

ಖಾಂಡ್ಯ ಮಾರ್ಕಾಂಡೇಶ್ವರ ದೇವಸ್ಥಾನದ ಟ್ರಸ್ಟಿ ಬೆಳಸೆ ರತ್ನಾಕರ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು ಖಾಂಡ್ಯ ಕ್ಷೇತ್ರದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯ ನಿರ್ವಹಿಸು ತ್ತಿದ್ದು, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ. ಯೋಜನೆಯ ದೂರದೃಷ್ಟಿತ್ವಕ್ಕೆ ಇದು ಸಾಕ್ಷಿ ಯಾಗಿದೆ ಎಂದರು.

ಖಾಂಡ್ಯ ಹೋಬಳಿ ನಾಟಿ ವೈದ್ಯ ಬೋಬಣ್ಣಗೌಡ, ನಿವೃತ್ತ ಯೋಧರಾದ ಚಾಕಲುಮನೆ ಪ್ರವೀಣ್, ಜಾರ್ಜ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪೂಜಾ ಸಮಿತಿ ಅಧ್ಯಕ್ಷ ಬಿ.ಎನ್.ಸೋಮೇಶ್‌ಗೌಡ, ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್, ಕಾಫಿ ಬೆಳೆಗಾರೆ ಪುಷ್ಪಾ ರಾಜೇಗೌಡ, ದೇವದಾನ ಗ್ರಾಪಂ ಅಧ್ಯಕ್ಷ ಕೆ.ಎಂ.ಶೇಷಪ್ಪಗೌಡ, ಯೋಜನಾಧಿಕಾರಿ ಸುರೇಶ್, ಪೂಜಾ ಸಮಿತಿಯ ಉಪಾಧ್ಯಕ್ಷ ಪ್ರೇಮೇಶ್ ಮಾಗಲು, ಜಗದೀಶ್, ಚಂದ್ರಶೇಖರ್ ರೈ, ಗುರುಮೂರ್ತಿ ಬೆಳಸೆ, ಮಸೀಗದ್ದೆ ಸತೀಶ್ ಮತ್ತಿತರರು ಹಾಜರಿದ್ದರು.೧೨ಬಿಹೆಚ್‌ಆರ್ ೧:

ಬಾಳೆಹೊನ್ನೂರು ಸಮೀಪದ ಖಾಂಡ್ಯದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ನಾಟಿ ವೈದ್ಯ ಬೋಬಣ್ಣಗೌಡ ಅವರನ್ನು ಸನ್ಮಾನಿಸಲಾಯಿತು. ಚಟ್ನಳ್ಳಿ ಮಹೇಶ್, ಬಿ.ಎನ್.ಸೋಮೇಶ್, ಬೆಳಸೆ ರತ್ನಾಕರ್, ಪುಷ್ಪಾ ರಾಜೇಗೌಡ, ಪ್ರಕಾಶ್ ರಾವ್ ಇದ್ದರು.