ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ರೇಣುಕಾಚಾರ್ಯ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಕಾಂತರಾಜ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಜಿಲ್ಲಾಡಳಿತದಿಂದ ನಡೆದ ಜಯಂತಿ ಆಚರಣೆಯಲ್ಲಿ ಉಪ ವಿಭಾಗಾಧಿಕಾರಿ ಕಾಂತರಾಜ್ ಬಣ್ಣನೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಗದ್ಗುರು ರೇಣುಕಾಚಾರ್ಯರು ಧರ್ಮಾಚರಣೆಗಾಗಿ ಸಾರಿದ ದಶಸೂತ್ರಗಳು ಇಡೀ ವಿಶ್ವದ ಶಾಂತಿ ಮತ್ತು ನೆಮ್ಮದಿಗೆ ದಾರಿದೀಪವಾಗಿವೆ ಎಂದು ಉಪ ವಿಭಾಗಾಧಿಕಾರಿ ಕಾಂತರಾಜ್ ಅಭಿಪ್ರಾಯ ಪಟ್ಟರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯಲ್ಲಿ ಭಾವಚಿತ್ರಕ್ಕೆಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ರೇಣುಕಾಚಾರ್ಯರು ಧರ್ಮಾಚರಣೆಗಾಗಿ ಪಾಲಿಸಿದ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯೆ, ದಯೆ, ಕ್ಷಮೆ, ದಾನ, ಶಿವಪೂಜೆ, ಪಂಚಾಕ್ಷರಿ ಮಂತ್ರ ಜಪದಂತಹ ಹತ್ತು ಸೂತ್ರಗಳು ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಸುತ್ತವೆ. ಇವುಗಳ ಅನುಸರಿಸುವುದರಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಹೇಳಿದರು.

ನಮಗೆ ಒಳ್ಳೆಯದು ಮಾಡಿದವರಿಗೆ ಒಳ್ಳೆಯದನ್ನು ಮಾಡುವುದು ಮನುಷ್ಯರ ಸಹಜ ಗುಣ. ಆದರೆ ಯಾರೂ ಏನೂ ಮಾಡದಿದ್ದರೂ ಲೋಕಕ್ಕೆ ಹಿತವನ್ನೇ ಬಯಸುವವನು ಮಹಾಮಾನವ ಎನಿಸಿಕೊಳ್ಳುತ್ತಾನೆ. ಇವೆಲ್ಲಕ್ಕಿಂತ ಮಿಗಿಲಾಗಿ ತನಗೆ ಕೆಟ್ಟದನ್ನು ಮಾಡಿದವರಿಗೂ ಮರಳಿ ಒಳಿತನ್ನೇ ಮಾಡುವವನು ದೇವ ಮಾನವ ಎಂದು ಬೋಧಿಸಿದ್ದಾರೆ. ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂದು ಸಂದೇಶ ನೀಡಿದರು. ಧರ್ಮದಿಂದ ವಿಶ್ವಕ್ಕೆ ಶಾಂತಿ. ಧರ್ಮವು ಜನರ ಕಲ್ಯಾಣಕ್ಕಾಗಿ ಇರಬೇಕು. ಪ್ರಪಂಚದಲ್ಲಿ ಶಾಂತಿ ನೆಲೆಸಲು ಧರ್ಮದಿಂದ ಮಾತ್ರ ಸಾಧ್ಯ ಎಂದು ತಿಳಿಸಿದ್ದಾರೆಂದರು.

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ ಮಾತನಾಡಿ, ಮಹಾಪುರುಷರು ತೋರಿದ ಸಮಾನತೆಯ ಹಾದಿ ಇಂದಿನ ಸಮಾಜಕ್ಕೆ ಅವಶ್ಯಕವಾಗಿದ್ದು, ದಾರ್ಶನಿಕರ ತತ್ವಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದರು.

ರೇಣುಕಾಚಾರ್ಯ ಸೇರಿದಂತೆ ಅನೇಕ ದಾರ್ಶನಿಕರು ಅಂದಿನ ಕಾಲದ ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಡಿ ಸಮಾನತೆಯ ಸಂದೇಶ ಸಾರಿದ್ದಾರೆ. ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶ್ರೀ ಜಗದ್ಗುರು ರೇಣುಕಾಚಾರ್ಯರ ಕುರಿತು ಉಪನ್ಯಾಸ ನೀಡಿದ ಸಾಹಿತಿ ನಿರಂಜನ ದೇವರ ಮನೆ, ಶ್ರೀ ರೇಣುಕಾಚಾರ್ಯರು ಶಿವಾದ್ವೈತ ಸಿದ್ದಾಂತ ಪ್ರತಿಪಾದಿಸುವ ಮುಖೇನ ಈ ಜಗತ್ತಿಗೆ ಮಾನವ ಧರ್ಮ ಮತ್ತು ವಿಶ್ವಶಾಂತಿಯ ಸಂದೇಶ ಸಾರಿದ ಶ್ರೇಷ್ಠ ಆಚಾರ್ಯರು. ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ, ಸಹಿಷ್ಣುತೆ, ಸಾಮರಸ್ಯ ಹಾಗೂ ಸಹಬಾಳ್ವೆಯಂತಹ ಉದಾತ್ತ ಮೌಲ್ಯ, ಚಿಂತನೆಗಳನ್ನು ಬೋಧಿಸಿದ ಯುಗಪುರುಷರು ಎಂದು ಬಣ್ಣಿಸಿದರು.

ರೇಣುಕಾಚಾರ್ಯರು ಚಿಂತನೆ-ಅರಿವು-ಅನುಭಾವದ ಮೂಲಕ ವ್ಯಕ್ತಿಯ ವಿಕಾಸ ಮತ್ತು ಸಮಾಜಾಭಿವೃದ್ಧಿಯನ್ನು ಬಯಸಿದವರು. ಧರ್ಮ ಮತ್ತು ಸಂಸ್ಕೃತಿಯನ್ನು ಕೇವಲ ಲೌಕಿಕ ಬದುಕಿನ ಸಮೃದ್ಧಿಯ ಮನೋಭಾವಗಳಿಗೆ ಬಳಸಿಕೊಳ್ಳದೇ ಮನುಷ್ಯನ ಆಧ್ಯಾತ್ಮಿಕ ವಿಕಾಸಕ್ಕೆ ಮಹತ್ವದ ಶಕ್ತಿಯನ್ನಾಗಿ ರೂಪಿಸಿದರು. ಮನುಷ್ಯನ ಪ್ರಜ್ಞೆಯನ್ನು ಬೆಳೆಸಿಕೊಂಡು ಮಾನವೀಯ ನೆಲೆಯಲ್ಲಿ ಸಂಘಟನೆಯಾಗಿ ಎಲ್ಲರೂ ಪರಿಪೂರ್ಣತೆ ಸಾಧಿಸಿ ಜೀವನ್ಮುಕ್ತಿ ಪಡೆಯುವಂತೆ ತಿಳಿಸಿದವರು ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷ ಎಂ.ಪಿ.ಮಲ್ಲಿಕಾರ್ಜುನಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಕಾರ್ಯದರ್ಶಿ ಎಂ. ಶಶಿಧರ್ ಬಾಬು, ಖಚಾಂಚಿ ರುದ್ರಪ್ಪ ಜಾಲಿಕಟ್ಟೆ, ಯುವಘಟಕದ ಅಧ್ಯಕ್ಷ ದಿನೇಶ್ ಮೈಲಹಳ್ಳಿ, ಪಂಚಚಾರ್ಯ ಸಹಕಾರ ಪತ್ತಿನ ಸಂಘದ ಅಧ್ಯಕ್ಷ ಷಡಾಕ್ಷರಯ್ಯ, ಪ್ರವೀಣ್, ರೀನಾ ವೀರಭದ್ರಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ಚಿತ್ರದುರ್ಗ ತಾಲೂಕು ಆಯಿತೋಳು ವಿರೂಪಾಕ್ಷಪ್ಪ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.