ಕೊಪ್ಪಳದಲ್ಲಿ ಗಮನ ಸೆಳೆದ ತಾರಸಿ ತೋಟ ಫಲಪುಷ್ಪ ಪ್ರದರ್ಶನ

| Published : Feb 02 2024, 01:01 AM IST

ಸಾರಾಂಶ

ಹೈಟೆಕ್, ಉನ್ನತ ತಂತ್ರಜ್ಞಾನ ಹೊಂದಿದ, ಮಧ್ಯಮ ಗಾತ್ರ ಹೊಂದಿದ ಅತ್ಯಂತ ಕಡಿಮೆ ವೆಚ್ಚದ 10 ಅಡಿ ಅಳತೆಯಿಂದ 100 ಅಡಿವರೆಗೆ ಗಾತ್ರದಲ್ಲಿ ಅಳತೆಗೆ ತಕ್ಕಂತೆ ವರ್ಟಿಕಲ್‌ ಗಾರ್ಡನ್, ಹಾರಿಜಂಟಲ್‌ ಗಾರ್ಡನ್ ಕುರಿತು ಮಾಹಿತಿ ನೀಡುವ ತರಬೇತಿ ಮತ್ತು ಪ್ರದರ್ಶನ ಆಯೋಜಿಸಲಾಯಿತು.

ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಗವಿಮಠ, ಜಿಲ್ಲಾ ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಅಂಗೈ ಅಗಲ ಜಾಗ ಆಕಾಶದಗಲ ಆರೋಗ್ಯ ಶೀರ್ಷಿಕೆ ಅಡಿ ಟೆರೆಸ್‌ ಗಾರ್ಡನ್, ಫಲಪುಷ್ಪ ಪ್ರದರ್ಶನ ಜಾತ್ರೆಯಲ್ಲಿ ವಿಶೇಷ ಗಮನ ಸೆಳೆಯುತ್ತಿದೆ.ಹೈಟೆಕ್, ಉನ್ನತ ತಂತ್ರಜ್ಞಾನ ಹೊಂದಿದ, ಮಧ್ಯಮ ಗಾತ್ರ ಹೊಂದಿದ ಅತ್ಯಂತ ಕಡಿಮೆ ವೆಚ್ಚದ 10 ಅಡಿ ಅಳತೆಯಿಂದ 100 ಅಡಿವರೆಗೆ ಗಾತ್ರದಲ್ಲಿ ಅಳತೆಗೆ ತಕ್ಕಂತೆ ವರ್ಟಿಕಲ್‌ ಗಾರ್ಡನ್, ಹಾರಿಜಂಟಲ್‌ ಗಾರ್ಡನ್ ಕುರಿತು ಮಾಹಿತಿ ನೀಡುವ ತರಬೇತಿ ಮತ್ತು ಪ್ರದರ್ಶನ ಆಯೋಜಿಸಲಾಯಿತು.ಕಿಚನ್‌ ಗಾರ್ಡನ್ ಪ್ರದರ್ಶನದಲ್ಲಿ ಹೂಬಿಡುವ ಬಳ್ಳಿಗಳು, ಟೊಮೆಟೊ, ಕರಿಬೇವು, ಬೆಳ್ಳುಳ್ಳಿ, ಮೆಣಸಿನಕಾಯಿ, ಬದನೆ, ಕುಂಬಳ, ಪಾಲಕ, ಸೌತೆ, ಹೀರೇಕಾಯಿ, ಅಡುಗೆಗೆ ಬೇಕಾದ ತಾಜಾ ತರಕಾರಿಗಳು ಬೆಳೆಯುವ ಮಾಹಿತಿ ನೀಡಲಾಗುತ್ತಿದೆ.ತ್ಯಾಜ್ಯದಿಂದ ಗೊಬ್ಬರ ತಯಾರಿಸುವುದು, ಗ್ರೇ ವಾಟರ್ (ಪಾತ್ರೆ ತೊಳೆದ ನೀರು, ಕೈ ತೊಳೆದ ನೀರು) ಶುದ್ಧೀಕರಿಸುವುದು. ಮೊಬೈಲ್‌ನಿಂದಲೇ ನಿಯಂತ್ರಿಸುವ ಬಗ್ಗೆ ತರಬೇತಿ, ಸಾವಯವ ಔಷಧಿಗಳನ್ನು ಕ್ರಿಮಿ ನಾಶಕಗಳನ್ನು ತಾವೇ ತಯಾರಿಸುವ ಮಾರ್ಗದರ್ಶನ ಮತ್ತು ತರಬೇತಿ ನೀಡಲಾಗುತ್ತಿದೆ.ಫಲಪುಷ್ಪ ಪ್ರದರ್ಶನದಲ್ಲಿವಿವಿಧ ಬಗೆಯ ಹೂಗಳಿಂದ ಅಲಂಕೃತವಾದ ಸ್ತಬ್ಧ ಚಿತ್ರದ ಪ್ರದರ್ಶನ, ಹಣ್ಣಿನ ಮತ್ತು ತರಕಾರಿ ಕೆತ್ತನೆ ಪ್ರದರ್ಶನ, ಅಣಬೆ ಬೇಸಾಯ, ಜೇನು, ತೋಟಗಾರಿಕೆಯಲ್ಲಿ ನವೀನ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳ ಪ್ರದರ್ಶನ ಆಸಕ್ತರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಪ್ರದರ್ಶನವು ಫೆ.7ರವರೆಗೆ ಇರಲಿದೆ.ತಾರಸಿ ತೋಟ ಸಖತ್ ಖುಷಿ ನೀಡಿತು. ಮನೆಯಲ್ಲಿಯೇ ಹೇಗೆಲ್ಲ ತರಕಾರಿ ಬೆಳೆಯಬಹುದು ಎನ್ನುವುದು ಮನದಟ್ಟಾಯಿತು ಎನ್ನುತ್ತಾರೆ ಕೊಪ್ಪಳ ನಿವಾಸಿ ನೀಲಮ್ಮ ಕರಿಗಾರ.ಟೆರಸ್ ಗಾರ್ಡನ್ ಮತ್ತು ಕಿಚನ್ ಗಾರ್ಡನ್ ಕುರಿತು ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ವಿಶೇಷ ಗಮನ ಸೆಳೆಯುತ್ತಿದೆ. ಜಾತ್ರೆಗೆ ಬಂದವರು ನೋಡಿ, ನಾವು ಅಳವಡಿಸುವ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಶ್ರೀಕೃಷ್ಣಾ ಉಕ್ಕುಂದ.