ರೈತರನ್ನು ಚುಚ್ಚುತ್ತಿರುವ ಮುಳ್ಳುಸಜ್ಜೆ ಕಳೆ

| Published : Jul 02 2025, 11:52 PM IST

ಸಾರಾಂಶ

ದೂರದಿಂದ ಮೆಕ್ಕೆಜೋಳ ಬೆಳೆಯಂತೆಯೇ ಕಂಡುಬರುವ ಈ ಕಳೆ ಸಸಿ ಕಳೆನಾಶಕ ಸಿಂಪಡಿಸಿದರೂ ಸಾಯುತ್ತಿಲ್ಲ. ಇದರ ನಿವಾರಣೆ ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ವಿಶೇಷ ವರದಿ

ಹಾವೇರಿ: ಈ ಸಲ ಉತ್ತಮ ಮಳೆಯಿಂದ ರೈತರು ಸಂತಸದಲ್ಲೇ ಬಿತ್ತನೆ ಮಾಡಿದ್ದರು. ಆದರೆ, ಈಗ ಮೆಕ್ಕೆಜೋಳ ಬೆಳೆಯಲ್ಲಿ ಮುಳ್ಳುಸಜ್ಜೆ ಕಳೆ ರೈತರನ್ನು ಹೈರಾಣಾಗಿಸಿದೆ. ಜತೆಗೆ ನಿರಂತರ ಮಳೆಗೆ ಸಿಲುಕಿದ ಬೆಳೆಗಳು ಹಳದಿ ರೋಗಕ್ಕೆ ತುತ್ತಾಗಿದ್ದು, ಜಿಲ್ಲೆಯ ಹಲವು ರೈತರು ಬೆಳೆಯನ್ನೇ ಹರಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಜಿಲ್ಲೆಯಲ್ಲಿ ಮುಂಗಾರು ಪೂರ್ವದಲ್ಲಿ ಬಿದ್ದ ಮಳೆಯಿಂದ ಮೇ ಮತ್ತು ಜೂನ್‌ ಮೊದಲಾರ್ಧದಲ್ಲೇ ಮೆಕ್ಕೆಜೋಳ ಬಿತ್ತನೆಯನ್ನು ರೈತರು ಬಹುತೇಕ ಪೂರ್ಣಗೊಳಿಸಿದ್ದರು. ಸಸಿಯಾಗಿ ಈಗ ಒಂದಡಿ ಎತ್ತರಕ್ಕೆ ಬೆಳೆದಿರುವ ಮೆಕ್ಕೆಜೋಳ ಬೆಳೆಯೊಂದಿಗೆ ಮುಳ್ಳು ಸಜ್ಜೆ ಎಂಬ ಕಳೆಯೂ ಅದೇ ಎತ್ತರಕ್ಕೆ ಬೆಳೆದು ನಿಂತಿದೆ. ದೂರದಿಂದ ಮೆಕ್ಕೆಜೋಳ ಬೆಳೆಯಂತೆಯೇ ಕಂಡುಬರುವ ಈ ಕಳೆ ಸಸಿ ಕಳೆನಾಶಕ ಸಿಂಪಡಿಸಿದರೂ ಸಾಯುತ್ತಿಲ್ಲ. ಇದರ ನಿವಾರಣೆ ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ದನಕರುಗಳೂ ತಿನ್ನುತ್ತಿಲ್ಲ: ಬೆಳೆಗಳಿಗೆ ಮಾರಕವಾಗಿರುವ ಮುಳ್ಳುಸಜ್ಜೆ ಕಳೆಯನ್ನು ದನಕರುಗಳು ತಿನ್ನುತ್ತಿಲ್ಲ. ಇದನ್ನು ಕೀಳುವುದು ಕಷ್ಟ. ಕೀಳಲು ಕೂಲಿ ಕಾರ್ಮಿಕರೂ ಸಿಗುತ್ತಿಲ್ಲ. ಹೀಗಾಗಿ ಮುಳ್ಳುಸಜ್ಜೆ ಕಳೆ ನಿಯಂತ್ರಿಸಲಾಗದೇ ಜಿಲ್ಲೆಯಲ್ಲಿ ರೈತರು ಮೆಕ್ಕೆಜೋಳ ಬೆಳೆಯನ್ನೇ ನಾಶ ಪಡಿಸಿ ಮತ್ತೆ ಬಿತ್ತನೆಗೆ ಮುಂದಾಗುತ್ತಿದ್ದಾರೆ. ಈ ಕಳೆ ನಿಯಂತ್ರಣಕ್ಕೆ ಇದುವರೆಗೂ ಯಾವುದೇ ಕಳೆನಾಶಕ ಇಲ್ಲ. ಮಾರುಕಟ್ಟೆಯಲ್ಲಿ ದೊರೆಯುವ ಲಾಡಿಸ್(ಕಳೆನಾಶಕ)ದಿಂದಲೂ ಇದರ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಇದರ ನಿಯಂತ್ರಣಕ್ಕೆ ಕೃಷಿ ವಿಜ್ಞಾನಿಗಳು ಮುಂದಾಗಬೇಕು ಎಂಬುದು ರೈತರು ಆಗ್ರಹವಾಗಿದೆ.

ಹಳದಿ ರೋಗ: ಜಿಲ್ಲೆಯಲ್ಲಿ ಶೇ. 83ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಆದರೆ ಜಿಲ್ಲೆಯಲ್ಲಿ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಮೆಕ್ಕೆಜೋಳ ಬೆಳೆಯಲ್ಲಿ ಮುಳ್ಳುಸಜ್ಜೆ ಕಳೆಯ ಕಾಟ ವಿಪರೀತವಾಗಿದೆ. ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 3.14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಇದರಲ್ಲಿ ಈಗಾಗಲೇ 2.68 ಲಕ್ಷ ಹೆಕ್ಟೇರ್ ಬಿತ್ತನೆ ಪೂರ್ಣಗೊಂಡಿದೆ. ಅದರಲ್ಲಿಯೂ ಜಿಲ್ಲೆಯ ಪ್ರಮುಖ ಬೆಳೆಯಾದ ಮೆಕ್ಕೆಜೋಳವನ್ನು 1.75 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಈಗಾಗಲೇ ರೈತರು ಬಿತ್ತನೆ ಮಾಡಿದ್ದಾರೆ. ಅತಿವೃಷ್ಟಿಯಿಂದಾಗಿ ಬೆಳೆಗಳು ಕೆಂಪು ಹಾಗೂ ಹಳದಿ ಬಣ್ಣಕ್ಕೆ ತಿರುಗಿ ಹಾನಿಯಾಗುವ ಸ್ಥಿತಿಯಲ್ಲಿದೆ. ಹಿರೇಕೆರೂರು, ಹಾವೇರಿ ತಾಲೂಕಿನ ಹಂದಿಗನೂರು, ಮರಡೂರು ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಅತಿಯಾದ ಮಳೆಯಿಂದ ಬೆಳೆ ಹಳದಿ ಬಣ್ಣಕ್ಕೆ ತಿರುಗಿದೆ. ಬೆಳೆ ಹರಗುತ್ತಿರುವ ರೈತ: ಮುಳ್ಳು ಸಜ್ಜೆ, ಹಳದಿ ರೋಗಕ್ಕೆ ಬೆಳೆ ತುತ್ತಾಗಿರುವುದರಿಂದ ಹೈರಾಣಾಗಿರುವ ರೈತರು ಬೆಳೆ ಹರಗುತ್ತಿದ್ದಾರೆ. ಟ್ರ್ಯಾಕ್ಟರ್‌, ರೋಟರ್‌ ಮೂಲಕ ಬೆಳೆ ಹರಗುತ್ತಿದ್ದಾರೆ. ಮೆಕ್ಕೆಜೋಳವನ್ನು ಕಿತ್ತು ಹಾಕಿ, ಹೊಸದಾಗಿ ಬಿತ್ತನೆ ಮಾಡುತ್ತಿದ್ದಾರೆ. ಬೆಳೆದಿರುವ ಬೆಳೆಗಳಲ್ಲಿಯೂ ಇಳುವರಿಯನ್ನು ಈ ಮುಳ್ಳುಸಜ್ಜೆ ಕಡಿಮೆ ಮಾಡಿ, ರೈತರು ಹಾಕಿದ ಬಂಡವಾಳ ಕೂಡ ಹೊರತೆಗೆಯಲು ಪರದಾಡುವಂತಾಗಿದೆ. ಜಿಲ್ಲೆಯ ಹಿರೇಕೆರೂರು, ರಟ್ಟಿಹಳ್ಳಿ, ಹಾವೇರಿ, ಸವಣೂರು, ರಾಣಿಬೆನ್ನೂರು, ಬ್ಯಾಡಗಿ ತಾಲೂಕಿನ ವಿವಿಧಡೆಯಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ.

ದಿನದಿಂದ ದಿನಕ್ಕೆ ಎಲ್ಲೆಡೆ ಹರಡುತ್ತಿದ್ದರಿಂದ ಕಳೆ ತೆಗೆಯಲು ಕೂಲಿ ಆಳುಗಳು ಸಿಗುತ್ತಿಲ್ಲ. ಮುಳ್ಳುಸಜ್ಜೆಗೆ ಕಳೆನಾಶಕ ಸಿಗುತ್ತದೆ ಎಂದು ಹಾವೇರಿ ನಗರದ ಹಾನಗಲ್ಲ ರಸ್ತೆಯ ಕ್ರಿಮಿನಾಶಕ ಅಂಗಡಿಯೊಂದರ ಮುಂದೆ ಹತ್ತಾರು ಜನರು ಬುಧವಾರ ಜಮಾಯಿಸಿದ್ದರು. ಆದರೆ, ಬೇಡಿಕೆಯಷ್ಟು ಕಳೆನಾಶಕ ಔಷಧ ಸಂಗ್ರಹವಿಲ್ಲದ್ದರಿಂದ ಅಂಗಡಿ ಮುಚ್ಚಿಕೊಂಡು ಹೋಗಿದ್ದರಿಂದ ರೈತರು ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.

ಪರಿಹಾರಕ್ಕೆ ಆಗ್ರಹ: ಮೆಕ್ಕೆಜೋಳ ಬೆಳೆಯಲ್ಲಿ ಮೆಕ್ಕೆಜೋಳಕ್ಕಿಂತ ಮುಳ್ಳುಸಜ್ಜೆ ಹೆಚ್ಚಾಗಿ ಬೆಳೆದಿದ್ದು ಇದನ್ನು ನಿಯಂತ್ರಿಸದಿದ್ದರೆ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಈ ಮುಳ್ಳುಸಜ್ಜೆ ನಿಯಂತ್ರಣಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಿಗಳು ಆದಷ್ಟು ಬೇಗ ಸೂಕ್ತ ಪರಿಹಾರ ಕಂಡುಹಿಡಿದು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

ಕಳೆನಾಶಕ ಇಲ್ಲ: ಮೆಕ್ಕೆಜೋಳದಲ್ಲಿ ಬೆಳೆದಿರುವ ಮುಳ್ಳುಸಜ್ಜೆ ಕಳೆಗೆ ನಿಗದಿತವಾಗಿ ಯಾವುದೇ ಕಳೆನಾಶಕ ಇಲ್ಲ. ಹೀಗಾಗಿ ರೈತರು ಎಡೆಕುಂಟೆ ಹೊಡೆದೇ ಅದನ್ನು ನಿಯಂತ್ರಿಸಿಕೊಳ್ಳಬೇಕು. ನಿರಂತರ ಮಳೆಯಿಂದ, ಹೊಲದಲ್ಲಿ ನೀರು ನಿಂತು ತೇವಾಂಶ ಅಧಿಕವಾಗಿ ಬೆಳೆ ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಬಿಸಿಲು ಬಿದ್ದರೆ ಸರಿಯಾಗುತ್ತದೆ. ಮೈಕ್ರೋ ನ್ಯೂಟ್ರಿಯಂಟ್‌ ಹಾಕಬೇಕು ಎಂದು ಜಂಟಿ ಕೃಷಿ ನಿರ್ದೇಶಕ ರಾಜೇಶ ಸುರಗಿಹಳ್ಳಿ ತಿಳಿಸಿದರು.