ಮೂಡುಬಿದಿರೆ: ಕನ್ನಡ ಮಾತೃಭಾಷೆಯಾಗಿ ರಾಜ್ಯ ಭಾಷೆಯಾಗಿರಬಹುದು. ಆದರೆ ಹಿಂದಿ ರಾಷ್ಟ್ರದ ಭಾಷೆ ಮತ್ತು ಇಂಗ್ಲಿಷ್ ಅಂತಾರಾಷ್ಟ್ರೀಯ ಸಂವಹನಕ್ಕೆ ಅಗತ್ಯವಿರುವ ಭಾಷೆಯಾಗಿದೆ. ಹಾಗಾಗಿ ಕನ್ನಡದ ಪ್ರೀತಿಯ ಜತೆಗೆ ತ್ರಿಭಾಷಾ ಸೂತ್ರವನ್ನು ಗೌರವಿಸಿ ಅನುಸರಿಸುವ ಕಾಳಜಿ ನಮ್ಮದಾಗಬೇಕು ಎಂದು ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ , ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು. ಅವರು ಕಾಂತಾವರ ಕನ್ನಡ ಸಂಘದ ವಚನ ವೇದಿಕೆಯಲ್ಲಿ ಮಂಗಳವಾರ ಅಪರಾಹ್ನ ಸಂಘದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ ಅಧ್ಯಕ್ಷತೆ ವಹಿಸಿ ಡಾ.ಬಿ.ಜನಾರ್ದನ ಭಟ್ ಅವರು ಬರೆದ ಸುವರ್ಣಾಕ್ಷರದ ಇತಿಹಾಸ ಕನ್ನಡ ಸಂಘ ಕಾಂತಾವರ ಕೃತಿ ಅನಾವರಣಗೊಳಿಸಿ ಮಾತನಾಡಿದರು.
ಡಾ.ನಾ. ಮೊಗಸಾಲೆ ಪ್ರಾಸ್ತಾವಿಕ ಮಾತುಗಳನ್ನಾಡಿ ಕನ್ನಡ ಸಂಘದ ಮೂಲಕ ಹುಟ್ಟಿದ ಅಲ್ಲಮ ಪ್ರಭು ಪೀಠದ ಆಶ್ರಯಲದಲ್ಲಿ ಗುರುಕುಲ ಮಾದರಿಯ ಶಿಕ್ಷಣ ಸಂಸ್ಥೆ ಕಾಂತಾವರ ಪರಿಸರದಲ್ಲಿ ಶೈಕ್ಷಣಿಕವಾಗಿ ಹೊಸ ಚೈತನ್ಯ ಮೂಡಿಸಿರುವುದು ಧನ್ಯತೆಯ ಕ್ಷಣಗಳಾಗಿವೆ ಎಂದರು. ಕೃತಿಕಾರ ಡಾ.ಬಿ.ಜನಾರ್ದನ ಭಟ್ ಮಾತನಾಡಿ ಕನ್ನಡ ಸಂಘದ ಐದು ದಶಕಗಳ ಸಾಂಸ್ಕೃತಿಕ ಕ್ರಾಂತಿಯನ್ನು ದಾಖಲಿಸುವ ಪ್ರಯತ್ನ ಈ ಕೃತಿಯಲ್ಲಿ ಮಾಡಲಾಗಿದ್ದು ಮುಂದಿನ ಹಂತದಲ್ಲಿ ಆಂಗ್ಲ ಅನುವಾದಿತ ಕೃತಿಯನ್ನೂ ಹೊರತರಲಾಗುವುದು ಎಂದರು. ಉಡುಪಿ ಸಂಸ್ಕೃತಿ ಪ್ರತಿಷ್ಠಾನದ ವಿಶ್ವನಾಥ ಶೆಣೈ, ಉದ್ಯಮಿ ಕೆ. ಶ್ರೀಪತಿ ಭಟ್ ಮುಖ್ಯ ಅತಿಥಿಗಳಾಗಿದ್ದರು.ಕಾಂತಾವರ ಅ.ಹಿ.ಪ್ರಾ. ಶಾಲೆ ಮಕ್ಕಳು ನಾಡಗೀತೆ ಹಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ಪೂಜಾರಿ ವಂದಿಸಿದರು.